ಕಾಲೇಜು ವ್ಯಾಸಂಗ ಜೀವನದ ಪ್ರಮುಖ ಘಟ್ಟವಾಗಿದ್ದು, ಇಲ್ಲಿ ಯಾವುದೇ ಆಲೋಚನೆ ಇಲ್ಲದೆ ಉತ್ತಮ ಅಂಕ ಪಡೆಯಬೇಕೆಂಬ ಮಹದಾಸೆ ಎಲ್ಲರಿಗೂ ಇರುತ್ತದೆ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕಾಲೇಜಿಗೆ ಅವಶ್ಯಕವಿರುವ ಕಟ್ಟಡದ ಸುತ್ತ ಕಾಂಪೌಂಡ್ ನಿರ್ಮಾಣ ಮತ್ತು ವೇದಿಕೆ ಕಾರ್ಯಕ್ರಮ ಮಾಡಲು ರಂಗಮಂಟಪ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುತ್ತದೆ ಇದರ ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಸವಲತ್ತು ಒದಗಿಸಲು ಬದ್ಧನಾಗಿದ್ದೇನೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ವ್ಯಾಸಂಗ ಜೀವನದ ಪ್ರಮುಖ ಘಟ್ಟವಾಗಿದ್ದು, ಇಲ್ಲಿ ಯಾವುದೇ ಆಲೋಚನೆ ಇಲ್ಲದೆ ಉತ್ತಮ ಅಂಕ ಪಡೆಯಬೇಕೆಂಬ ಮಹದಾಸೆ ಎಲ್ಲರಿಗೂ ಇರುತ್ತದೆ. ಆದರೆ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಮನುಷ್ಯನನ್ನು ಬಿಟ್ಟರೂ ಮನುಷ್ಯ ಮೊಬೈಲನ್ನು ಬಿಡಲು ಸಾಧ್ಯವಿಲ್ಲ. ಮೊಬೈಲ್ ಮತ್ತು ಮನುಷ್ಯನ ಸಂಬಂಧ ಆ ಮಟ್ಟದಲ್ಲಿದ್ದು ವಿದ್ಯಾರ್ಥಿಗಳು ತಮಗೆ ಅವಶ್ಯಕತೆ ಇದ್ದಾಗ ಎಷ್ಟು ಬೇಕೋ ಅಷ್ಟು ಮಾತ್ರ ಮೊಬೈಲ್ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮೊಬೈಲ್ ಬಳಕೆಯಿಂದ ಹಲವು ವಿದ್ಯಾರ್ಥಿಗಳು ಹಾಗೂ ನಿರುದ್ಯೋಗ ಯುವಕರು ತಮ್ಮ ಜೀವನ ಹಾಳುಮಾಡಿಕೊಂಡಿದ್ದು ಮೊಬೈಲ್ ನಿಂದ ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲವೂ ಇದೆ. ಆದ್ದರಿಂದ ತಮ್ಮ ಅಗತ್ಯಕ್ಕೆ ಎಷ್ಟೋ ಬೇಕು ಅಷ್ಟು ಮಾತ್ರ ಬಳಕೆ ಮಾಡಿಕೊಂಡು ಕಾಲೇಜಿನ ಪ್ರಾಧ್ಯಾಪಕರ ಮತ್ತು ಗುರುಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಮೌಲ್ಯ ರೂಢಿಸಿಕೊಂಡು ವ್ಯಾಸಂಗಕ್ಕೆ ಹೆಚ್ಚು ಗಮನ ನೀಡಿ ಎಂದು ಅವರು ಕಿವಿಮಾತು ಹೇಳಿದರು.
ಈಗಾಗಲೇ ಕಾಲೇಜು ಅಭಿವೃದ್ಧಿಗೆ 1 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಕಾಲೇಜು ಆವರಣದಲ್ಲಿ ಆಗಬೇಕಾದ ಕಾಮಗಾರಿಗೆ ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ. ಕಲಾಶ್ರೀ ಪ್ರಧಾನ ಭಾಷಣ ಮಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ವೈ.ಎಸ್. ಜಯಂತ್, ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ. ವಿಜಯ್, ಸಾಂಸ್ಕ್ರತಿಕ ಕ್ರೀಡಾ ಸಮಿತಿ ಸಂಚಾಲಕ ಡಾ.ಎಸ್. ಶಂಕರ್, ರೆಡ್ ಕ್ರಾಸ್ ಸಂಚಾಲಕ ಪಿ. ಪ್ರಶಾಂತ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಎಸ್. ಕಿರಣ್ ಕುಮಾರ್, ಕ್ರೀಡಾ ಸಮಿತಿ ಸಂಚಾಲಕ ಡಾ.ಬಿ.ವಿ. ಗಣೇಶ್, ಐಕ್ಯೂಎಸಿ ಸಂಚಾಲಕಿ ಡಾ. ರೇಣುಕಾದೇವಿ, ಪ್ರಾಧ್ಯಾಪಕರಾದ ಸೋಮಶೇಖರ್, ಗಣೇಶ್, ನಾಗರತ್ನ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸಿ.ಕೆ. ಸಂಜನಾ, ಕಾರ್ಯದರ್ಶಿ ವೇದಾವತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ತೋಟೇಗೌಡ, ಸಂಪತ್ತೇಗೌಡ, ಸುಧಾಕರ್, ಗೊರಗುಂಡಿ ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ವಕ್ತಾರ ಸೈಯದ್ ಜಾಬೀರ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.