ಸರ್ಕಾರಗಳು ಸಾಗುವಳಿ ಪತ್ರ ನೀಡದೆ ರೈತರಿಗೆ ವಂಚನೆ: ಭರತ್ ರಾಜ್ ಆರೋಪ

KannadaprabhaNewsNetwork |  
Published : Jan 26, 2026, 01:45 AM IST
25ಕೆಎಂಎನ್ ಡಿ24 | Kannada Prabha

ಸಾರಾಂಶ

ಕಾರ್ಪೋರೇಟ್ ಸಂಸ್ಥೆಗಳ 11 ಲಕ್ಷ ರು. ಕೋಟಿ ಸಾಲಮನ್ನಾ ಮಾಡುವ ಜನ ವಿರೋಧಿ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲು ಮೀನಾಮೇಷ ಎಣಿಸುತ್ತಿದೆ. ಕೇರಳ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದು, ರಾಜ್ಯ ಸರ್ಕಾರವೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ನಲವತ್ತು ವರ್ಷಗಳಿಂದಲೂ ಬೇಸಾಯ ಮಾಡಿಕೊಂಡು ಬರುತ್ತಿರುವ ರೈತರಿಗೆ ಆಳುವ ಸರ್ಕಾರಗಳು ಸಾಗುವಳಿ ಪತ್ರ ನೀಡದೇ ವಂಚಿಸುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಆರೋಪಿಸಿದರು.

ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಭಾನುವಾರ ಆಯೋಜಿಸಿದ್ದ ಹಲಗೂರು ಹೋಬಳಿ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾರ್ಪೋರೇಟ್ ಸಂಸ್ಥೆಗಳ 11 ಲಕ್ಷ ರು. ಕೋಟಿ ಸಾಲಮನ್ನಾ ಮಾಡುವ ಜನ ವಿರೋಧಿ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲು ಮೀನಾಮೇಷ ಎಣಿಸುತ್ತಿದೆ. ಕೇರಳ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದು, ರಾಜ್ಯ ಸರ್ಕಾರವೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ಯೋಜನೆಗಳ ಹೆಸರು ಬದಲಿಸುವುದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಹೊಸ ಯೋಜನೆ ಜಾರಿಗೆ ತರುವ ಸಾಮರ್ಥ್ಯ ಇಲ್ಲದ ಸರ್ಕಾರಗಳು ಇರುವ ಯೋಜನೆಗಳ ಹೆಸರನ್ನೇ ಬದಲಿಸುವುದನ್ನೇ ಅಭಿವೃದ್ಧಿ ಎಂದು ಹೇಳಿಕೊಳ್ಳುತ್ತಿವೆ ಎಂದು ವ್ಯಂಗ್ಯವಾಡಿದರು.

ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದರೂ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಈ ನಡುವೆಯೂ ಸರ್ಕಾರ ಪ್ರೀ ಪೇಯ್ಡ್ ವಿದ್ಯುತ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವುದು ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅತಂಕ ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗರಾಜಮೂರ್ತಿ ಮಾತನಾಡಿ, ರೈತರ ಹೆಸರಿನಲ್ಲಿ ನೂರಾರು ಸಂಘಟನೆಗಳು ಜನ್ಮ ತಾಳಿವೆ. ಆದರೆ ನಿಜವಾಗಿಯೂ ರೈತರ ಪರವಾಗಿ ಸಾಮಾಜಿಕ ಹೋರಾಟಗಳನ್ನು ಮಾಡುತ್ತಾ ಬಂದಿರುವುದು ಪ್ರಾಂತ ರೈತ ಸಂಘ ಮಾತ್ರ ಎಂದರು.

ನಿವೃತ್ತ ಶಿಕ್ಷಕ ಲಿಂಗಪಟ್ಟಣ ಸುಂದ್ರಪ್ಪ ಮಾತನಾಡಿ, ರೈತರು ದೇಶದ ಬೆನ್ನಲುಬಾಗಿರುವ ರೈತರು ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನ್ನ ನೀಡುವ ರೈತನ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು. ಸಮಾವೇಶಕ್ಕೂ ಮುನ್ನ ಸಾರಿಗೆ ಬಸ್ ನಿಲ್ದಾಣದಿಂದ ಕೆಪಿಎಸ್ ಶಾಲೆವರೆಗೆ ರೈತರು ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಹೋಬಳಿ ಘಟಕದ ಅಧ್ಯಕ್ಷ ಬಿ‌.ಎಸ್.ಮಹೇಶ್ ಕುಮಾರ್, ಕಾರ್ಯದರ್ಶಿ ಎ.ಎಲ್.ಶಿವಕುಮಾರ್, ಮುಖಂಡರಾದ ಮಹದೇವು ಪ್ರಮೀಳ, ಪದ್ಮ, ವಿಷಕಂಠಮೂರ್ತಿ, ಜ್ಯೋತಿ, ಮಹದೇವು, ನಾಗೇಶ್, ಶಾಂಭವಿ, ಸಣ್ಣಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುರೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ : ಮಹಿಳೆಯರಿಗೆ ಅವಮಾನ ಆರೋಪ- ದೂರು
ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈವಿ