ಡಿ. ದೇವರಾಜ ಅರಸು 109ನೇ ಜನ್ಮದಿನಾಚರಣೆ
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡಿದ ಧೀಮಂತ ನಾಯಕ ದೇವರಾಜ ಅರಸು ಸಾಮಾಜಿಕ ಪರಿವರ್ತನೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇವರಾಜ ಅರಸು ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಬಡವರ ಶೋಷಿತರ, ದೀನ ದಲಿತರ, ಆರ್ಥಿಕವಾಗಿ ಹಿಂದುಳಿದವರ ಎಲ್ಲ ಜನರ ಜೀವನವನ್ನು ಅರಿತುಕೊಂಡು ಅವರೆಲ್ಲರ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸಿದ್ದು, ದೇಶದಲ್ಲಿಯೇ ಉತ್ತಮ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಸ್ಪೃಶ್ಯತೆ ನಿವಾರಣೆ, ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ದಲಿತ ಅರ್ಚಕರ ನೇಮಕ, ದೇವಾಲಯಗಳಲ್ಲಿ ಬೆತ್ತಲೆ ಸೇವೆ ನಿಷೇಧ, ಜಾತಿ ನಿಂದನೆ ಕಾಯ್ದೆ ಜಾರಿಯಂತಹ ಮಹತ್ವದ ಕಾರ್ಯಕ್ರಮ ಜಾರಿಗೆ ತಂದವರು ದೇವರಾಜ ಅರಸು. ಜಗಜ್ಯೋತಿ ಬಸವಣ್ಣನವರ ಸಮಾನತೆಯ ಪರಿಕಲ್ಪನೆಯನ್ನು ದೇವರಾಜ ಅರಸು ಮೈಗೂಡಿಸಿಕೊಂಡಿದ್ದರು. ಅರಸು ತಮ್ಮ ಆಡಳಿತ ಅವಧಿಯಲ್ಲಿ ದಿಟ್ಟ ನಿರ್ಧಾರಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಹಲವಾರು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕೊಪ್ಪಳದ ನಿವೃತ್ತ ಪ್ರಾಂಶುಪಾಲರು, ಪ್ರಗತಿಪರ ಚಿಂತಕ ಅಲ್ಲಮಪ್ರಭು ಬೆಟ್ಟದೂರು ಡಿ.ದೇವರಾಜ ಅರಸು ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗವಿಸಿದ್ದೇಶ್ವರ ಮಠದಿಂದ ಸಾಹಿತ್ಯ ಭವನದವರೆಗೆ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.