ಕನ್ನಡಪ್ರಭ ವಾರ್ತೆ ತಿಪಟೂರು
ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ, ಬೆಲೆ ಏರಿಕೆ, ಕಾರ್ಪೋರೇಟ್ ಪರ ನೀತಿ ಸೇರಿದಂತೆ ಕಾರ್ಮಿಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆನೀಡಿದ್ದ ಭಾರತ್ ಬಂದ್ ಅಂಗವಾಗಿ ಇಲ್ಲಿನ ಸಿಐಟಿಯು ಮತ್ತು ಜಿಲ್ಲಾ ಕೇಂದ್ರದ ಕಾರ್ಮಿಕ ಸಂಘಟನೆಗಳ ವತಿಯಿಂದ ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿ ಬಂದ್‌ಗೆ ಬೆಂಬಲ ಸೂಚಿಸಲಾಯಿತು. ಗ್ರಾಮದೇವತೆ ಕೆಂಪಮ್ಮದೇವಿ ದೇವಸ್ಥಾನದಿಂದ ಮೆರವಣಿಗೆ ಹೊರಟು ನಗರಸಭೆ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ದ ದೇಶದಾದ್ಯಂತ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯುತ್ತಿದ್ದು, ಸರ್ಕಾರಗಳು ಅಧಿಕಾರಕ್ಕೆ ಬರುವವರೆಗೂ ರೈತಪರ, ಕಾರ್ಮಿಕರ ಪರ ಎಂದು ಹೇಳಿ ಅಧಿಕಾರಕ್ಕೆ ಬಂದ ಮೇಲೆ ಅವರ ವಿರುದ್ಧವೇ ಕೆಲ ಕಾಯ್ದೆಗಳನ್ನು ಜಾರಿಗೆ ತಂದು ಬದುಕುವ ಹಕ್ಕುನ್ನು ಕಸಿಯುತ್ತಿವೆ. ಸಂಘಟಿತ-ಅಸಂಘಟಿತ ವಲಯದ ಕಾರ್ಮಿಕರ ಸಂಕಟಗಳಿಗೆ ಸರ್ಕಾರ ನೀತಿಗಳೇ ಕಾರಣವಾಗಿದ್ದು, ರೈತರನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ, ಇಲ್ಲದ ಕಾನೂನು, ಕಾಯ್ದೆಗಳನ್ನು ಜಾರಿಗೆ ತಂದು ಸಂಕಷ್ಟಕ್ಕೆ ದೂಡುತ್ತಿವೆ. ಸರ್ಕಾರಗಳು ಕಾರ್ಪೋರೇಟ್ ರಾಜಕೀಯ ಮಾಡುತ್ತಾ ರೈತರನ್ನು ಕಡೆಗಣಿಸುತ್ತಿದ್ದು ಚುನಾವಣೆಗೆ ಮಾತ್ರ ಸೀಮಿತರನ್ನಾಗಿಸಿವೆ. ರೈತ ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುವಂತಾಗಿದೆ. ಏಕಾಏಕಿ ಬೆಲೆ ಏರಿಕೆ, ರೈತ ವಿರೋಧಿ ಕಾಯ್ದೆ ಜಾರಿ, ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಿಲ್ಲ, ಕೆಲಸದ ಅವಧಿ ಹೆಚ್ಚಳ, ಕನಿಷ್ಠ ಕೂಲಿ ಇಲ್ಲ, ಸಾಮಾಜಿಕ ಭದ್ರತೆ ಇಲ್ಲ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಇಲ್ಲ, ರೈತರು ಕೆಲಸ ಕಾರ್ಯಗಳಿಗೆ ಲಂಚ ಕೊಟ್ಟು ಮಾಡಿಸಿಕೊಳ್ಳುವ ಸ್ಥಿತಿ ತಲುಪಿದ್ದು ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದರು ಸರ್ಕಾರಗಳಿಗೆ ಕಿವಿ, ಕಣ್ಣು ಇಲ್ಲದಂತಾಗಿದೆ. ಆದ್ದರಿಂದ ರೈತರು, ಕಾರ್ಮಿಕರು ಒಗ್ಗಟ್ಟಾಗುವ ಮೂಲಕ ಸರ್ಕಾರಗಳನ್ನು ಎಚ್ಚರಿಸಿ ನಮ್ಮ ಹಕ್ಕನ್ನು ನಾವು ಪಡೆಯಬೇಕಿದೆ ಎಂದರು. ರಾಜ್ಯ ರೈತ ಸಂಘ ಹಸಿರು ಸೇನೆಯ ತಿಮ್ಲಾಪುರ ದೇವರಾಜ್ ಮಾತನಾಡಿ, ನಮ್ಮಲ್ಲಿ ಶ್ರೀಮಂತರು, ಉಳ್ಳವರು ಆರ್ಥಿಕ ಸ್ಥಿತಿವಂತರಾಗುತ್ತಿದ್ದರೆ ರೈತರು-ಕಾರ್ಮಿಕರು ಬೀದಿ ಬೀಳುವ ಸ್ಥಿತಿ ಬಂದಿದೆ. ಹೊಸ ಹೊಸ ಕಾನೂನು, ಕಾಯ್ದೆಗಳನ್ನು ಜಾರಿಗೆ ತಂದು ರೈತರು ಮತ್ತು ಕಾರ್ಮಿಕರ ಬದುಕನ್ನು ನಾಶ ಮಾಡಲು ಹೊರಟಿದ್ದಾರೆ. ದೇಶದಲ್ಲಿ ತೆರಿಗೆದಾರರು ಸಂಕಷ್ಟದಲ್ಲಿದ್ದು ರಾಜಕಾರಣಿಗಳು, ಅಧಿಕಾರಿಗಳ ಭ್ರಷ್ಟಾಚಾರ ಮಿತಿಮಿರಿದ್ದು ಇದಕ್ಕೆಲ್ಲಾ ಹೋರಾಟವೆ ಮೂಲವಾಗಿದ್ದು ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಸಿಐಟಿಯು ತಾ. ಅಧ್ಯಕ್ಷೆ ಅನುಸೂಯ, ರೈತ ಸಂಘದ ರಾಜಮ್ಮ, ಎಪಿಎಂಸಿ ಹಮಾಲರ ಸಂಘದ ಜಯರಾಮ್, ಸೌಹಾರ್ದ ಅಲ್ಲಾಭಕಾಶ್, ಬೆಲೆಕಾವಲು ಸಮಿತಿ ಶ್ರೀಕಾಂತ್‌ಕೆಳಹಟ್ಟಿ ಸೇರಿದಂತೆ ಹಮಾಲಾರ ಸಂಘ, ರಾಜ್ಯ ರೈತ ಸಂಘ, ಹಸಿರುಸೇನೆ, ಅಂಗನವಾಡಿ ನೌಕರರ ಸಂಘ, ಸ್ವಚ್ಛತಾ ಕಾರ್ಮಿಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಭಾಗವಹಿಸಿದ್ದವು.