ಚಂದ್ರು ಕೊಂಚಿಗೇರಿ
ಇದಕ್ಕಾಗಿ ಆಯಾ ಗ್ರಾಮ ಆಡಳಿತಾಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ, ಸೂಕ್ತ ದಾಖಲೆಗಳನ್ನು ಪಡೆದು ಪರಿಶೀಲನೆ ಮಾಡಿ, ಸಂಬಂಧ ಪಟ್ಟವರ ಹೆಸರಿನಲ್ಲಿ ಪಹಣಿ ಮಾಡುವ ಕಾಯಕ ನಿರಂತರವಾಗಿ ರಾಜ್ಯದ ಪ್ರತಿ ತಾಲೂಕಿನಲ್ಲಿ ನಡೆಯುತ್ತಿದೆ.ಈಗಾಗಲೇ ಕಂದಾಯ ಸಚಿವರು, ಜಿಲ್ಲಾಧಿಕಾರಿ ಮಟ್ಟದಲ್ಲಿ, ಆಯಾ ತಾಲೂಕಿನ ತಹಸೀಲ್ದಾರ್, ಗ್ರಾಮ ಆಡಳಿತಾಧಿಕಾರಿಗಳ ಜತೆ ಗೂಗಲ್ ಮೀಟ್ ನಡೆಸಿ ಇ-ಪೌತಿ ಆಂದೋಲನವನ್ನು ಯಶಸ್ವಿಗೊಳಿಸಲು ಸರ್ಕಾರ ಬದ್ಧವಾಗಿದೆ. ಆದರೆ ನಮ್ಮ ನಿರೀಕ್ಷೆಗೆ ತಕ್ಕಂತೆ ಗುರಿ ಸಾಧನೆ ತೃಪ್ತಿ ತರುತ್ತಿಲ್ಲ ಎಂಬಿತ್ಯಾದಿ ಮಾತು ಕೇಳಿ ಬರುತ್ತಿದೆ.
ಸರ್ಕಾರದ ನಿರ್ದೇಶನದಂತೆ ಆಯಾ ಜಿಲ್ಲಾಧಿಕಾರಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ, ಪ್ರತಿ ಗ್ರಾಮ ಆಡಳಿತಾಧಿಕಾರಿ ಮುಂದಿನ ಜನವರಿ ಮೊದಲ ವಾರದೊಳಗೆ ಕನಿಷ್ಠ 100 ಇ-ಪೌತಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಗುರಿ ನಿಗಧಿಪಡಿಸಿದ್ದಾರೆ.15 ಸಾವಿರ ಪ್ರಕರಣ ಬಾಕಿ: ತಾಲೂಕಿನಲ್ಲಿ 3 ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿ 15 ಸಾವಿರ ಪೌತಿ ಪ್ರಕರಣಗಳು ಬಾಕಿ ಉಳಿದಿವೆ. 14362 ಪ್ರಕರಣಗಳಲ್ಲಿ ಈವರೆಗೂ 1414 ಪ್ರಕರಣ ವಿಲೇವಾರಿಯಾಗಿವೆ. ಇನ್ನು 12948 ಪ್ರಕರಣ ಬಾಕಿ ಇವೆ. ಇದರಲ್ಲಿ ಇ-ಪೌತಿ ಅರ್ಜಿ ಹಾಕಿ ತಹಸೀಲ್ದಾರ್ ಲಾಗಿನ್‌ನಲ್ಲಿ ಉಳಿದಿರುವ, 58 ಅರ್ಜಿಗೆ ತಕರಾರು ಹಾಗೂ ದಾಖಲೆಗಳು ಸರಿ ಇಲ್ಲದಿರುವುದರಿಂದ ಹಾಗೆಯೇ ಉಳಿದಿವೆ.
ಗುರಿ ಸಾಧನೆಗೆ ಹತ್ತಾರು ಅಡ್ಡಿ ಆತಂಕ: ಸದ್ಯದ ಪರಿಸ್ಥಿತಿಯ ಪಹಣಿಯಲ್ಲಿ 3-4 ತಲೆಮಾರಿನ ತಾತ, ಮುತ್ತಾತ ಹೆಸರಿನಲ್ಲಿದ್ದು, ಕುಟುಂಬ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದ ಇ-ಪೌತಿಗೆ ಜನ ನಿರಾಸಕ್ತಿ ತೋರುತ್ತಿದ್ದಾರೆ.ಕೆಲ ಪಹಣಿಯಲ್ಲಿ ಪಟ್ಟಾದಾರರ ಹೆಸರು ಮಾತ್ರ ಇದೆ, ಆದರೆ ತಂದೆಯ ಹೆಸರಿಲ್ಲ, ಇ-ಪೌತಿ ಆಂದೋಲನಕ್ಕೆ ಅರ್ಜಿ ಸಲ್ಲಿಸಿದಾಗ ಪ್ರಕರಣವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟವರ ಮೊಬೈಲ್‌ಗೆ ಬರುವ ಒಟಿಪಿ ಹೇಳಲು ಆಧಾರ್ ಕಾರ್ಡ್ ಪೋನ್ ನಂಬರ್‌ಗೆ ಲಿಂಕ್ ಮಾಡಿಲ್ಲ. ಇ-ಪೌತಿ ಅರ್ಜಿಯಲ್ಲಿ ಅಕ್ಕ- ತಂಗಿಯರ ಹೆಸರು ಬಿಟ್ಟು ಅರ್ಜಿ ಹಾಕುತ್ತಾರೆ. ಪಹಣಿಯಲ್ಲಿ ಹೆಸರಿರುವ ಆಸ್ತಿ ಮಾಲೀಕರು ಗ್ರಾಮದಲ್ಲಿ ವಾಸ ಇಲ್ಲ. ಅಂತಹವರಿಗೆ ದೂರವಾಣಿ ಕರೆ ಮಾಡಿದರೂ ಬರುತ್ತಿಲ್ಲ. ಕೆಲವು ಕೃಷಿ ಭೂಮಿ ಕೃಷಿಯೇತರವಾಗಿ ಮಾರ್ಪಟ್ಟಿವೆ. ಈ ರೀತಿ ಪರಿಸ್ಥಿತಿ ಇರುವಾಗ ಸರ್ಕಾರ ಗುರಿ ನಿಗದಿ ಮಾಡಿ ಪ್ರಗತಿ ಸಾಧಿಸಲು ಹೇಳುತ್ತಾರೆ. ಆದರೆ ವಾಸ್ತವವೇ ಬೇರೆ ಇದೆ. ಇದರಿಂದ ವಿಲೇವಾರಿ ಪ್ರಕರಣ ಸಂಖ್ಯೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಗ್ರಾಮ ಆಡಳಿತಾಧಿಕಾರಿಗಳು ಆಯಾ ಕಂದಾಯ ಗ್ರಾಮದ ರೈತರ ಮನೆ ಬಾಗಿಲಿಗೆ ಹೋಗಿ ತಿಳಿವಳಿಕೆ ನೀಡಿ ಇ-ಪೌತಿ ಆಂದೋಲನಕ್ಕೆ ಅರ್ಜಿ ಹಾಕಿ ಎಂದು ಹೇಳಿದರೂ ಕೇಳುವ ಸ್ಥಿತಿಯಲ್ಲಿ ರೈತರಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕಾಗಿ ಅಧಿಕಾರಿಗಳು ತಿಳಿವಳಿಕೆ ಪತ್ರ ನೀಡಿದ್ದರೂ ಕಚೇರಿ ಕಡೆಗೆ ಸುಳಿವೇ ಇಲ್ಲ. ಇಂತಹ ಹಲವು ಅಡ್ಡಿ ಆತಂಕಗಳ ನಡುವೆ ಕಂದಾಯ ಇಲಾಖೆಯಲ್ಲಿ ವಿಎ ಮಾಡುತ್ತಿದ್ದಾರೆ.ಗ್ರಾಮ ಆಡಳಿತಾಧಿಕಾರಿಗಳಿಗೆ ಕಂದಾಯ ಸಚಿವರೇ ಜನವರಿ ಮೊದಲ ವಾರದೊಳಗೆ 100 ಪೌತಿ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು ಎಂದು ಗುರಿ ನಿಗದಿ ಮಾಡಿದ್ದಾರೆ. ನ್ಯಾಯಾಲಯ, ಇನ್ನಿತರ ಸಮಸ್ಯೆಗಳು ಇರುವ ಪ್ರಕರಣಗಳನ್ನು ಬಿಟ್ಟು ಉಳಿದ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ನಾವೇನು ಶೇ.100ರಷ್ಟು ಅರ್ಜಿ ವಿಲೇವಾರಿ ಮಾಡಿ ಎಂದು ಹೇಳಿಲ್ಲ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ.