ನಗರದ ವಿದ್ಯಾರ್ಥಿಗಳಿಗೆ ಹಳ್ಳಿಯಜೀವನದ ಪಠ್ಯ ಅಗತ್ಯ: ಡಿಸಿಎಂ

KannadaprabhaNewsNetwork |  
Published : Dec 28, 2025, 03:00 AM IST
RAITHA SANTE | Kannada Prabha

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ರೈತ ಸಂತೆ ಹಾಗೂ ರೈತ ದಿನಾಚರಣೆಗೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃಷಿ ಉತ್ಪನ್ನಗಳನ್ನು ವೀಕ್ಷಿಸಿದರು. ಕೃಷಿ ಸಚಿವ ಚಲುವರಾಯಸ್ವಾಮಿ, ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ ಮತ್ತಿತರರು ಹಾಜರಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವಿದ್ಯಾರ್ಥಿಗಳಿಗೆ ಹಳ್ಳಿ ಬದುಕಿನ ಬಗ್ಗೆ ಅರಿವು ಮೂಡಿಸಲು ಪಠ್ಯಕ್ರಮ ರೂಪಿಸಬೇಕು. ಈ ಬಗ್ಗೆ ಕೃಷಿ ಸಚಿವರು ಹಾಗೂ ಕೃಷಿ ವಿವಿ ಕುಲಪತಿಗಳು ರೂಪುರೇಷೆ ಸಿದ್ಧಪಡಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ರೈತ ಸಂತೆ ಹಾಗೂ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವರ್ಷದ ಹಿಂದೆ ನಾನು ಅಮೆರಿಕಾಕ್ಕೆ ತೆರಳಿದ್ದಾಗ ಉದ್ಯಮಿ ಸ್ಯಾಮ್ ಪಿತ್ರೋಡಾ ಅವರನ್ನು ಭೇಟಿ ಮಾಡಿದ್ದೆ. ಬೆಂಗಳೂರು ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಎರಡ್ಮೂರು ದಿವಸ ಹಳ್ಳಿ ಬದುಕಿನ ಪ್ರವಾಸ ಆಯೋಜಿಸಬೇಕು. ಹಳ್ಳಿ ಬದುಕಿನ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ನಿಮ್ಮ ಸರ್ಕಾರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದ್ದರು. ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತು ಕೃಷಿ ವಿವಿ ಉಪಕುಲಪತಿಗಳು ಈ ಸಂಬಂಧ ತಿಂಗಳೊಳಗೆ ರೂಪುರೇಷೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಕೋಳಿ ಸಾಕಾಣಿಕೆ ತರಬೇತಿ ಪಡೆದಿದ್ದೆ: ನಾನು ಸಹ ರೈತನ ಮಗ. ಖುದ್ದಾಗಿ ವ್ಯವಸಾಯ ಮಾಡದಿದ್ದರೂ ನೂರಾರು ಎಕರೆ ಆಸ್ತಿ ಹೊಂದಿದ್ದೇನೆ. ಆರನೇ ತರಗತಿಯಲ್ಲಿದ್ದಾಗ ನ್ಯಾಷನಲ್ ಸ್ಕೂಲ್ ನಿಂದ ಕಾರ್ಮೆಲ್ ಶಾಲೆಗೆ ಸೇರಿದೆ. ಆಗ ‘ರೈತರು ಮುಖ್ಯವೋ, ಜವಾನರು ಮುಖ್ಯವೋ’ ಎಂಬ ಚರ್ಚಾ ಸ್ಪರ್ಧೆಯಲ್ಲಿ ರೈತನ ಪರವಾಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದೆ. ವಿದ್ಯಾರ್ಥಿಯಾಗಿದ್ದಾಗ ಈ ಕೃಷಿ ಕಾಲೇಜಿಗೆ ಬಂದು ಕೋಳಿ ಸಾಕಾಣೆ ಬಗ್ಗೆ ತರಬೇತಿ ಪಡೆದಿದ್ದೆ ಎಂದು ನೆನಪಿಸಿಕೊಂಡರು.

ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಸರ್ಕಾರ, ವಿಶ್ವವಿದ್ಯಾಲಯಗಳು ರೈತರ ಬೆನ್ನೆಲುಬಾಗಿ ನಿಂತಿವೆ. ಯೋಜನೆ, ಅನುದಾನ, ಪರಿಹಾರ ನೀಡಲು ಮಾತ್ರ ಸರ್ಕಾರ ಸೀಮಿತವಾಗಿಲ್ಲ. ಕಬ್ಬು, ಮೆಕ್ಕೆಜೋಳಕ್ಕೂ ಬೆಂಬಲ ಬೆಲೆ ನೀಡಿದ್ದೇವೆ. ಕೇಂದ್ರ ಸರ್ಕಾರ ಜವಾಬ್ದಾರಿ ನಿರ್ವಹಿಸದಿದ್ದರೂ ಅದನ್ನು ನಾವು ನಿರ್ವಹಿಸುತ್ತಿದ್ದೇವೆ. ರೈತರು ಸದೃಢವಾದರೆ ರಾಜ್ಯ, ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ 9 ಜಿಲ್ಲೆಗಳ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಕೃಷಿ ವಿವಿ ಕುಲಪತಿ ಡಾ.ಎಸ್‌.ವಿ. ಸುರೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ್‌ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡೂರು ಉತ್ಸವ ಆಚರಣೆ ಮುಂದೂಡಿಕೆ: ಜಿಮ್ ಚೇತನ್
ರಾಮನಾಥಪುರದಲ್ಲಿ ಅದ್ಧೂರಿ ತುಳುಷಷ್ಠಿ ಮಹಾ ರಥೋತ್ಸವ