ರಾಮನಾಥಪುರದಲ್ಲಿ ಅದ್ಧೂರಿ ತುಳುಷಷ್ಠಿ ಮಹಾ ರಥೋತ್ಸವ

KannadaprabhaNewsNetwork |  
Published : Dec 28, 2025, 03:00 AM IST
26ಎಚ್ಎಸ್ಎನ್11 :  | Kannada Prabha

ಸಾರಾಂಶ

ರಾಮನಾಥಪುರದ ತುಳುಷಷ್ಠಿ ರಥೋತ್ಸವದ ವಿಶೇಷ ಆಕರ್ಷಣೆಯಾಗಿ ಪ್ರತಿವರ್ಷದಂತೆ ಈ ವರ್ಷವೂ ರಥ ಎಳೆಯುವ ಸಂದರ್ಭದಲ್ಲಿ ನಾಲ್ಕಾರು ಗರುಡಗಳು ರಥದ ಮೇಲೆ ಹಾಗೂ ದೇವಾಲಯದ ಗೋಪುರದ ಸುತ್ತ ಪ್ರದಕ್ಷಣೆ ಹಾಕಿದವು. ಗರುಡಗಳ ಆಗಮನವನ್ನು ಕಣ್ಣಾರೆ ಕಂಡ ಭಕ್ತರು ಭಕ್ತಿ ಮತ್ತು ಆನಂದದಿಂದ ಪುನೀತರಾದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

"ದಕ್ಷಿಣ ಕಾಶಿ " ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ತುಳುಷಷ್ಠಿ ಮಹಾ ರಥೋತ್ಸವವು ಭಕ್ತಿಭಾವ, ವೈಭವ ಹಾಗೂ ಸಂಪ್ರದಾಯದೊಂದಿಗೆ ಅದ್ಧೂರಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ತೇರು ಎಳೆದು ಭಕ್ತಿ ಪರವಶರಾದರು.

ಮಹಾ ರಥೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲವನ್ನು ವಿವಿಧ ಬಗೆಯ ಹೂಗಳು ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ೪೦ ಅಡಿ ಎತ್ತರದ, ಬಣ್ಣಬಣ್ಣದ ವಸ್ತ್ರಗಳು ಹಾಗೂ ಪುಷ್ಪಗಳಿಂದ ಅಲಂಕರಿಸಿದ ಭವ್ಯ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎ. ಮಂಜು ಅವರು ವಿಶೇಷ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಿದರು.ಛತ್ರಿ-ಚಾಮರ, ಚಂಡೆ ವಾದ್ಯ, ಹಾಗೂ ವಿವಿಧ ಜನಪದ ಕಲಾತಂಡಗಳೊಂದಿಗೆ ರಥವು ದೇವಸ್ಥಾನದ ಮುಂಭಾಗದಿಂದ ರಥಬೀದಿಯಲ್ಲಿ ಸಂಚರಿಸಿ ಕಾವೇರಿ ನದಿ ಸೇತುವೆಯವರೆಗೆ ತೆರಳಿ, ಅಲ್ಲಿಂದ ಜೈಘೋಷಗಳೊಂದಿಗೆ ಪುನಃ ಸ್ವಸ್ಥಾನಕ್ಕೆ ಮರಳಿತು. ಭಕ್ತರ ಜಯಘೋಷ, ವಾದ್ಯಗಳ ನಾದ ಮತ್ತು ಸಂಭ್ರಮದಿಂದ ರಾಮನಾಥಪುರ ಸಂಪೂರ್ಣವಾಗಿ ಧಾರ್ಮಿಕ ಉತ್ಸವದ ವಾತಾವರಣದಲ್ಲಿ ಮಿಂದೆದಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಸಂಪ್ರದಾಯಬದ್ಧವಾಗಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ನವ ವಧುವರರು ಶ್ರೀ ಸುಬ್ರಹ್ಮಣ್ಯಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ ಬಾಳೆಹಣ್ಣು ಹಾಗೂ ದವನವನ್ನು ಸಮರ್ಪಿಸುವ ಮೂಲಕ ದಾಂಪತ್ಯ ಜೀವನದ ಶುಭಾಶಯ ಕೋರಿದರು.ಶ್ರೀ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳ ಆಶೀರ್ವಾದದೊಂದಿಗೆ ಬ್ರಹ್ಮಶ್ರೀ ತಂತ್ರಸಾರ ಆಗಮ ಕುಶಲ ಭಾರತೀರಮಣ ಆಚಾರ್ಯ ದಿವಾನರಾದ ಸುದರ್ಶನ ಜೋಯಿಸ್, ಪತ್ತೇಗಾರ್ ರಮೇಶ್ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ವೈಭವದಿಂದ ನಡೆಯಿತು. ಈ ಸಂದರ್ಭದಲ್ಲಿ ನುಗ್ಗೆಹಳ್ಳಿ ಹಿರೇಮಠದ ಶ್ರೀ ಡಾ. ಮಹೇಶ್ವರ ಶಿವಚಾರ್ಯಸ್ವಾಮೀಜಿ, ಮೈಸೂರು ಮಾನಸಗಂಗೋತ್ರಿ ಪ್ರಾಧ್ಯಾಪಕರಾದ ಕೆರಗೋಡು ಕೆ.ಸಿ. ಬಸವರಾಜು, ಮೈಸೂರು ಮೆಡಿಕಲ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಬಿ.ಆರ್. ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೊಡ್ಡಮಗ್ಗೆ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದರಾಜು, ನಾಡಕಚೇರಿ ಧರ್ಮೇಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಉತ್ಸವದ ವೇಳೆ ಹೊಳೆನರಸೀಪುರ ಉಪವಿಭಾಗದ ಪಿಎಸ್‌ಐ ಶಾಲು, ಕೊಣನೂರು ಠಾಣೆಯ ಪಿಎಸ್‌ಐ ಮರಿಯಪ್ಪ ಆರ್‌. ಬ್ಯಾಳಿ ಹಾಗೂ ಸಿಬ್ಬಂದಿ ಸಮರ್ಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಗರುಡಗಳ ಪ್ರದಕ್ಷಿಣೆ:ರಾಮನಾಥಪುರದ ತುಳುಷಷ್ಠಿ ರಥೋತ್ಸವದ ವಿಶೇಷ ಆಕರ್ಷಣೆಯಾಗಿ ಪ್ರತಿವರ್ಷದಂತೆ ಈ ವರ್ಷವೂ ರಥ ಎಳೆಯುವ ಸಂದರ್ಭದಲ್ಲಿ ನಾಲ್ಕಾರು ಗರುಡಗಳು ರಥದ ಮೇಲೆ ಹಾಗೂ ದೇವಾಲಯದ ಗೋಪುರದ ಸುತ್ತ ಪ್ರದಕ್ಷಣೆ ಹಾಕಿದವು. ಗರುಡಗಳ ಆಗಮನವನ್ನು ಕಣ್ಣಾರೆ ಕಂಡ ಭಕ್ತರು ಭಕ್ತಿ ಮತ್ತು ಆನಂದದಿಂದ ಪುನೀತರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡೂರು ಉತ್ಸವ ಆಚರಣೆ ಮುಂದೂಡಿಕೆ: ಜಿಮ್ ಚೇತನ್
ನಗರದ ವಿದ್ಯಾರ್ಥಿಗಳಿಗೆ ಹಳ್ಳಿಯಜೀವನದ ಪಠ್ಯ ಅಗತ್ಯ: ಡಿಸಿಎಂ