ಬೆಂಗಳೂರು : ಕೃತಕ ಬುದ್ಧಿಮತ್ತೆಯಂತಹ ಅದ್ಭುತ ತಂತ್ರಜ್ಞಾನಗಳಿಂದ ಎದುರಾಗುವ ಸವಾಲು, ಸಮಸ್ಯೆಗಳನ್ನು ಬಹುಶಿಸ್ತೀಯ, ಅತ್ಯಂತ ನವೀನ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಎಐ ಬಳಕೆ ಕುರಿತು ನೈತಿಕತೆ ಕಾಪಾಡಿಕೊಳ್ಳಲು ಸರ್ಕಾರಗಳು ಸೂಕ್ತ ನೀತಿ ರೂಪಿಸಬೇಕು ಎಂದು ಅಮೆರಿಕದ ಪ್ರಿನ್ಸ್‌ಟನ್ ವಿವಿಯ ಗಣಿತ ಉಪನ್ಯಾಸಕ ಪ್ರೊ. ಮಂಜುಲ್ ಭಾರ್ಗವ ಹೇಳಿದ್ದಾರೆ.
ಶುಕ್ರವಾರ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) 2024-25ನೇ ಸಾಲಿನ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಸ್ತುತ ಗಣಿತ ಮತ್ತು ವಿಜ್ಞಾನದ ವಿಷಯಗಳನ್ನು ಎಐ ಸರಿಯಾಗಿ ಪರಿಹರಿಸುತ್ತಿಲ್ಲ. ಅನೇಕ ತಪ್ಪುಗಳು, ಕ್ರಮಬದ್ಧತೆ ಇಲ್ಲದ ಕಾರಣ ಜಾಲತಾಣಗಳಲ್ಲಿ ಟೀಕೆಗಳು ಹರಿದಾಡುತ್ತಿವೆ. ಆದರೆ, ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇರುವುದಿಲ್ಲ. ಮುಂದಿನ ಒಂದು ವರ್ಷದಲ್ಲಿ ಪದವಿ ಮಟ್ಟದ ವಿಜ್ಞಾನ, ಗಣಿತ ಸೇರಿದಂತೆ ಎಲ್ಲ ಸಮಸ್ಯೆಗಳನ್ನು, ಹೋಂ ವರ್ಕ್‌ಗಳನ್ನು ನಿಖರವಾಗಿ ಪರಿಹರಿಸುವಂತೆ ಎಐ ಅಭಿವೃದ್ಧಿ ಕಾಣಲಿದೆ, ಗಣಿತದ ತ್ರಿಕೋನಮಿತಿ ಸೇರಿದಂತೆ ಎಲ್ಲವನ್ನು ಎಐಗಳು ನಿಖರವಾಗಿ ಪರಿಹರಿಸುತ್ತವೆ ಎಂದರು. ಶೈಕ್ಷಣಿಕ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುವ ಇಂತಹ ತಂತ್ರಜ್ಞಾನ ಅಭಿವೃದ್ಧಿಯಿಂದ ಐಐಎಸ್ಸಿ ಸೇರಿದಂತೆ ಇನ್ನಿತರ ಬೋಧನ ಸಂಸ್ಥೆಗಳ ಪರಿಸ್ಥಿತಿ ಏನಾಗಬಹುದು ಎನ್ನುವ ಪ್ರಶ್ನೆಗಳು ಉದ್ಭವ ಆಗುತ್ತವೆ. ಬೋಧಕರಿಗಿಂತ ಉತ್ತಮವಾಗಿ ಮತ್ತು ತ್ವರಿತವಾಗಿ ಸಮಸ್ಯೆ ಪರಿಹರಿಸುವ ಕಾರಣ, ಮಕ್ಕಳಿಗೆ ಶಾಲೆಯಲ್ಲಿ ಏನನ್ನು ಬೋಧಿಸಬೇಕು ಎಂಬ ಬಗ್ಗೆ ಶಿಕ್ಷಕರು ಮರುಮೌಲ್ಯಮಾಪನ ಮಾಡಿಕೊಳ್ಳಬೇಕು ಎಂದು ಪ್ರೊ. ಮಂಜುಲ್ ಹೇಳಿದರು.
ಐಐಎಸ್ಸಿ ಕೌನ್ಸಿಲ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣ ಮಾತನಾಡಿ, ಸ್ನಾತಕೋತ್ತರ ಕೋರ್ಸ್ ಮತ್ತು ಸಂಶೋಧನೆಗೆ ಒತ್ತು ನೀಡುವ ನಮ್ಮ ಹೊಸ ಮೆಡಿಕಲ್ ಕಾಲೇಜು ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ 1,487 ಪಿಎಚ್‌ಡಿ ಮತ್ತು ಸ್ನಾತಕೋತ್ತರ ಪದವಿ ಹಾಗೂ 106 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 84 ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು.
ಫೋಟೋ... ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) 2024-25ನೇ ಸಾಲಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಮೆರಿಕದ ಪ್ರಿನ್ಸ್‌ಟನ್ ವಿವಿಯ ಗಣಿತ ಉಪನ್ಯಾಸಕ ಪ್ರೊ. ಮಂಜುಲ್ ಭಾರ್ಗವ, ಐಐಎಸ್ಸಿ ಕೌನ್ಸಿಲ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣ, ಐಐಎಸ್ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಉಪಸ್ಥಿತರಿದ್ದರು.