ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ

| Published : Jul 17 2025, 01:45 AM IST

ಸಾರಾಂಶ

ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಲಿ ಎಂಬುದಾಗಿ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಹರಕೆ ಮಾಡಿಕೊಂಡು ಡಿಕೆಶಿ ಅಭಿಮಾನಿಗಳು, ಬೆಂಬಲಿಗರು ಸುರಿಯುತ್ತಿದ್ದ ಮಳೆಯಲ್ಲೂ 101 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಲಿ ಎಂಬುದಾಗಿ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಹರಕೆ ಮಾಡಿಕೊಂಡು ಡಿಕೆಶಿ ಅಭಿಮಾನಿಗಳು, ಬೆಂಬಲಿಗರು ಸುರಿಯುತ್ತಿದ್ದ ಮಳೆಯಲ್ಲೂ 101 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಪ್ರಾರ್ಥಿಸಿದರು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಡಿಕೆಶಿ ಅಭಿಮಾನಿಯಾದ ಯುವ ಮುಖಂಡ ಜಯಪ್ರಕಾಶ ಸಾರಥಿ ನೇತೃತ್ವದಲ್ಲಿ ಬೆಂಬಲಿಗರು, ಸ್ನೇಹಿತರು ಶ್ರೀ ದುರ್ಗಾಂಬಿಕಾ ದೇವಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಪ್ರಾರ್ಥಿಸಿ, 101 ತೆಂಗಿನಕಾಯಿಗಳನ್ನು ಒಡೆಯುವ ಜತೆಗೆ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜಯವಾಗಲಿ ಎಂಬುದಾಗಿ ಘೋಷಣೆ ಕೂಗಿದರು.

ಇದೇ ವೇಳೆ ಮಾತನಾಡಿದ ಜಯಪ್ರಕಾಶ ಸಾರಥಿ, ನಮ್ಮ ನೆಚ್ಚಿನ ನಾಯಕರಾದ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬೇಕೆಂಬುದಾಗಿ ಪ್ರಾರ್ಥಿಸಿ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಸನ್ನಿದಿಯಲ್ಲಿ 101 ತೆಂಗಿನ ಕಾಯಿಗಳನ್ನು ಒಡೆದಿದ್ದೇವೆ. ನಮ್ಮ ಡಿ.ಕೆ.ಶಿವಕುಮಾರ ನಮ್ಮ ಹೆಮ್ಮೆ ಎಂಬ ಫಲಕಗಳ ಸಮೇತ ಮುಂದಿನ ಮುಖ್ಯಮಂತ್ರಿ ಆಗಬೇಕೆಂಬ ನಮ್ಮ ಪ್ರಾರ್ಥನೆಯನ್ನು ತಾಯಿ ಶ್ರೀ ದುರ್ಗಾಂಬಿಕಾ ದೇವಿ ಶೀಘ್ರವೇ ಅನುಗ್ರಹಿಸುತ್ತಾರೆಂಬ ನಂಬಿಕೆ ಎಂದು ಹೇಳಿದರು.

ಯಾವುದೇ ಅಡೆತಡೆ ಇಲ್ಲದೇ, ಅಡ್ಡಿ ಆತಂಕಗಳೂ ಇಲ್ಲದೇ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗಬೇಕು. ರಾಜ್ಯದಲ್ಲಿ 136 ಕಾಂಗ್ರೆಸ್ ಶಾಸಕರು ಆಯ್ಕೆಯಾಗುವಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಪಾತ್ರ ಮಹತ್ವದ್ದು. ಅನೇಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವೇ ಇರಲಿಲ್ಲ. ಆದರೆ, ಡಿ.ಕೆ.ಶಿವಕುಮಾರ್‌ ಮಾತ್ರ 135ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ದೃಢಸಂಕಲ್ಪದಿಂದಲೇ ಹೇಳುತ್ತಿದ್ದು, ಅದರಂತೆ 136 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು, ಅಧಿಕಾರಕ್ಕೇರಿತು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತನಿಗೆ ಗೌರವ ಸಿಗಬೇಕೆಂದರೆ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿರುವ ಡಿ.ಕೆ.ಶಿವಕುಮಾರ್‌ 2025ರ ನವೆಂಬರ್‌ ವೇಳೆಗೆ ಮುಖ್ಯಮಂತ್ರಿಯಾಗುತ್ತಾರೆ. ಈ ಬಗ್ಗೆ ನಮಗೆಲ್ಲರಿಗೂ ಸಂಪೂರ್ಣ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮಂತಹ ಲಕ್ಷಾಂತರ ಕಾರ್ಯಕರ್ತರ ಆಸೆಯೂ ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕೆಂಬುದಾಗಿದೆ ಎಂದು ಅವರು ತಿಳಿಸಿದರು.