ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಿರಿ

| Published : Jul 09 2025, 12:27 AM IST

ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಹವಾಮಾನ ಬದಲಾವಣೆಯಿಂದ ರೈತರಿಗೆ ಬೆಳೆ ನಷ್ಟವಾಗುತ್ತಿರುವ ಕಾರಣ ಕೃಷಿಯಿಂದ ವಿಮುಖರಾಗುತ್ತಿದ್ದಾರೆ,

ಕನ್ನಡಪ್ರಭ ವಾರ್ತೆ ಸುತ್ತೂರು

ರೈತರು ಹವಾಮಾನಕ್ಕೆ ತಕ್ಕಂತೆ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯುವಂತೆ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಬಿ.ಎನ್. ಜ್ಞಾನೇಶ್ ಹೇಳಿದರು.

ಐಟಿಸಿ ಮೈಕ್ಯಾಪ್ಸ್ ಸಹಯೋಗದೊಂದಿಗೆ ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಔಟ್‌ ರೀಚ್, ಮೈಕ್ಯಾಪ್ಸ್ ಮತ್ತು ಬೈಫ್‌ಸಂಸ್ಥೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಹವಾಮಾನ ಆಧಾರಿತ ಕೃಷಿ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹವಾಮಾನ ಬದಲಾವಣೆಯಿಂದ ರೈತರಿಗೆ ಬೆಳೆ ನಷ್ಟವಾಗುತ್ತಿರುವ ಕಾರಣ ಕೃಷಿಯಿಂದ ವಿಮುಖರಾಗುತ್ತಿದ್ದಾರೆ, ಮತ್ತೆ ಅವರನ್ನು ಕೃಷಿಯತ್ತ ಒಲವು ಮೂಡಿಸಲು ಸುಧಾರಿತ ಬೆಳೆ ಪದ್ಧತಿಗಳ ಮಾಹಿತಿ ನೀಡಬೇಕು, ಜಾಗತಿಕ ತಾಪಮಾನದಿಂದಾಗಿ ಕೃಷಿಗೆ ತೊಂದರೆಯಾಗುತ್ತಿದ್ದು, ಪ್ರತಿ ಹಂಗಾಮಿನಲ್ಲಿಯೂ ಏಕಬೆಳೆ ಪದ್ಧತಿ ಅನುಸರಿಸದೆ ವೈವಿಧ್ಯತೆ ಅಳವಡಿಸಿಕೊಳ್ಳಬೇಕು, ಸಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ ಕಳೆನಾಶಕಗಳ ಉಪಯೋಗ ಕಡಿಮೆ ಮಾಡಬೇಕು ಎಂದರು.

ಐಟಿಸಿ ಎಂಎಸ್.ಕೆ ಕರ್ನಾಟಕದ ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಆರ್. ಹರೀಶ್ ಬಾಬು ಮಾತನಾಡಿ, ಐಟಿಸಿ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ಮೈಸೂರು ಜಿಲ್ಲೆಯ 800 ಹಳ್ಳಿಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ, ಶಾಲೆ ಮತ್ತು ಅಂಗನವಾಡಿ ಅಭಿವೃದ್ದಿ, ರೈತರ ಅಭಿವೃದ್ಧಿಗಾಗಿ ಕೆರೆ ಹೂಳೆತ್ತುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಸೇರಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ, ಹವಾಮಾನ ಆಧಾರಿತ ಕೃಷಿ ಮಾಹಿತಿ ತರಬೇತಿಯನ್ನು ರೈತರಿಗೆ ನೀಡಲು ಐಟಿಸಿ ಸಹಯೋಗದ ವಿವಿಧ ಸರ್ಕಾರೇತರ ಸಂಸ್ಥೆ ಸಿಬ್ಬಂದಿಗೆ ಪದಾಧಿಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.

ಸುತ್ತೂರು ಕೃಷಿ ವಿಜ್ಞಾನ ಕೇಂದ್ರ ವಿಷಯ ತಜ್ಞರಾದ ಡಾ. ಶ್ಯಾಮರಾಜು ಮಾತನಾಡಿ, ಭತ್ತ ಮತ್ತು ರಾಗಿ ಬೆಳೆಯಲ್ಲಿ ಸುಧಾರಿತ ಪದ್ಧತಿ ಅಳವಡಿಸಿಕೊಂಡು ರೈತರು ಹೆಚ್ಚು ಇಳುವರಿ ಪಡೆಯುವ ಬಗ್ಗೆ ಮಾಹಿತಿ ನೀಡಿದರು.

ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಡಾ.ಜಿ.ಎಂ ವಿನಯ್‌ ಅವರು ತೆಂಗು ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತ ಮಾಹಿತಿ ನೀಡಿದರು.

ಮೈಕ್ಯಾಪ್ಸ್ ಸಂಸ್ಥೆ ಕೃಷಿ ಅಧಿಕಾರಿ ವೀಣಾ ಅವರು ಪಿಎಂ ಕಿಸಾನ್ ಯೋಜನೆ ಬಗ್ಗೆ, ಔಟ್ ರೀಚ್ ಸಂಸ್ಥೆ ಕೃಷಿ ಅಧಿಕಾರಿ ಯಶಸ್ವಿನಿ ಅವರು ಪಿಎಂ ಕೃಷಿ ಸಿಂಚಾಯಿ ಯೋಜನ ಬಗ್ಗೆ ಮತ್ತು ಬೈಫ್‌ಸಂಸ್ಥೆ ಕೃಷಿ ಅಧಿಕಾರಿ ಪವಿತ್ರ ಅವರು ರೈತ ಪಿಂಚಣಿ ಮತ್ತು ಬೆಳೆ ವಿಮೆಗಳ ಬಗ್ಗೆ ಮಾಹಿತಿ ನೀಡಿದರು.

ಐಟಿಸಿ ಕಾರ್ಯಕ್ರಮಾಧಿಕಾರಿ ವಿಶ್ವಜಿತ್, ಮೈಕ್ಯಾಪ್ಸ್ ಸಂಸ್ಥೆ ನಂಜನಗೂಡು ಕಾರ್ಯಕ್ರಮ ಅಧಿಕಾರಿ ಮಹದೇವಯ್ಯ, ಔಟ್ ರಿಚ್ ಸಂಸ್ಥೆ ಕಾರ್ಯಕ್ರಮ ಅಧಿಕಾರಿ ನಂಜುಂಡಸ್ವಾಮಿ, ಬೈಫ್ ಸಂಸ್ಥೆ ಕಾರ್ಯಕ್ರಮ ಅಧಿಕಾರಿ ಗಿರೀಶ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.