ವಿದೇಶದಿಂದ ಪ್ರತಿಭೆಗಳ ಮರಳಿ ಕರೆತರಲು ಕರ್ನಾಟಕ ರೀತಿ ಸ್ಕಿಂ

| N/A | Published : Oct 24 2025, 06:23 AM IST

central Govt

ಸಾರಾಂಶ

ಅಮೆರಿಕದಲ್ಲಿ ವಲಸಿಗರ ವಿರುದ್ಧ ದಿನಕ್ಕೊಂದು ಕಠಿಣ ನಿಯಮ ಜಾರಿಗೊಳಿಸುತ್ತಿರುವ ಹೊತ್ತಿನಲ್ಲೇ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಸಂಶೋಧಕರು, ಪ್ರಾಧ್ಯಾಪಕರನ್ನು ಸೆಳೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

  ನವದೆಹಲಿ: ಅಮೆರಿಕದಲ್ಲಿ ವಲಸಿಗರ ವಿರುದ್ಧ ದಿನಕ್ಕೊಂದು ಕಠಿಣ ನಿಯಮ ಜಾರಿಗೊಳಿಸುತ್ತಿರುವ ಹೊತ್ತಿನಲ್ಲೇ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಸಂಶೋಧಕರು, ಪ್ರಾಧ್ಯಾಪಕರನ್ನು ಸೆಳೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ವಿಶೇಷವೆಂದರೆ, ಕರ್ನಾಟಕ ಸರ್ಕಾರ 2015ರಲ್ಲೇ ‘ವೆಲ್‌ಕಮ್‌’ ಎಂಬ ಇಂಥದ್ದೇ ಯೋಜನೆ ಜಾರಿ ಮಾಡಿತ್ತು. ಇದೀಗ ಅದೇ ಮಾದರಿ ಯೋಜನೆ ಜಾರಿಗೆ ಕೇಂದ್ರ ಮುಂದಾಗಿದೆ.

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧನೆ ಅಥವಾ ಅಧ್ಯಾಪನಕ್ಕೆ ತಜ್ಞರಿಗೆ ಆಹ್ವಾನ ನೀಡಲು ಸರ್ಕಾರ ಮುಂದಾಗಿದೆ. ಜೊತೆಗೆ ಐಐಟಿಯಂಥ ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳಲ್ಲಿ ಉನ್ನತ ಹುದ್ದೆ, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ನೆರವು ನೀಡುವ ಕುರಿತೂ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ಇಂಥ ಯೋಜನೆ ಕುರಿತು ಪರಿಶೀಲನೆ ನಡೆದಿತ್ತು. ಆದರೆ ನಾನಾ ಕಾರಣಗಳಿಗಾಗಿ ಅದು ಜಾರಿಗೆ ಬರಲಿಲ್ಲ. ಆದರೆ ಇದೀಗ ಎಚ್‌1ಬಿ ವೀಸಾ ನಿರ್ಬಂಧ ಸೇರಿ ಟ್ರಂಪ್‌ ಸರ್ಕಾರದ ವಲಸೆ ನಿಯಂತ್ರಣ ಕ್ರಮಗಳಿಂದಾಗಿ ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಭಾರತೀಯ ಸಂಶೋಧಕರು, ಅಧ್ಯಾಪಕರಲ್ಲಿ ಅನಿಶ್ಚಿತತೆ ಆವರಿಸಿದೆ. ಇಂಥ ಪರಿಸ್ಥಿತಿಯಲ್ಲೇ ಕೇಂದ್ರ ಸರ್ಕಾರ ಮತ್ತೆ ಇಂಥದ್ದೊಂದು ಪ್ರಸ್ತಾಪದ ಕುರಿತು ಮರುಚಿಂತನೆ ನಡೆಸಲು ಮುಂದಾಗಿದೆ.

ಮೂಲಗಳ ಪ್ರಕಾರ ಕೇಂದ್ರ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳ ಜತೆಗೆ ಚರ್ಚಿಸಿ ಭಾರತೀಯ ಮೂಲದ ವಿಜ್ಞಾನಿಗಳು ಹಾಗೂ ಸಂಶೋಧಕರನ್ನು ಭಾರತಕ್ಕೆ ವಾಪಸ್‌ ಕರೆತರಲು ಪ್ರಯತ್ನ ನಡೆಸಲಾಗಿದೆ. ಈ ಮೂಲಕ ದೇಶದ ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶ ಸರ್ಕಾರಕ್ಕಿದೆ. ಐಐಟಿಯಂಥ ಸಂಸ್ಥೆಗಳಲ್ಲಿ ಉನ್ನತ ಹುದ್ದೆ, ಸಂಶೋಧನಾ ಲ್ಯಾಬೊರೇಟರಿಗಳು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಬಯೋಟೆಕ್ನಾಲಜಿ ಕ್ಷೇತ್ರಗಳ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಗಳಿಗೆ ವಿದೇಶದಲ್ಲಿರುವ ಭಾರತೀಯ ಮೂಲದವರನ್ನು ಆಹ್ವಾನಿಸಲು ಮುಂದಾಗಿದೆ.

12-14 ಕ್ಷೇತ್ರಗಳಿಗೆ ಆದ್ಯತೆ:

ಆರಂಭದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತಶಾಸ್ತ್ರ(ಸ್ಟೆಮ್‌) ಕ್ಷೇತ್ರದಲ್ಲಿ 12-14 ವಿಭಾಗಗಳ ಮೇಲೆ ಹೆಚ್ಚಿನ ಗಮನ ನೀಡಲು ಮುಂದಾಗಿದೆ. ಸ್ಕಾಲರ್‌ಗಳಿಗೆ ಲ್ಯಾಬ್‌ಗಳನ್ನು, ರಿಸರ್ಚ್‌ ಸ್ಕೀಂ ಸ್ಥಾಪಿಸಲು ಗ್ರ್ಯಾಂಟ್‌ಗಳನ್ನು ನೀಡುವ ಉದ್ದೇಶವೂ ಸರ್ಕಾರಕ್ಕಿದೆ ಎಂದು ಹೇಳಲಾಗಿದೆ.

ಏನಿದು ಕರ್ನಾಟಕದ ವೆಲ್‌ಕಂ ಹೋಮ್‌?

ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ವಿಜ್ಞಾನಿಗಳು ಹಾಗೂ ವಿಷಯ ತಜ್ಞರನ್ನು ಕರೆತಂದು ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಕರಾಗಿ ನೇಮಕ ಮಾಡಲು ರಾಜ್ಯ ಸರ್ಕಾರವು ‘ರುಸಾ’ ಕಾರ್ಯಕ್ರಮದ ಅಡಿ 2014ರಲ್ಲಿ ‘ವೆಲ್ಕಂ ಹೋಮ್’ ಕಾರ್ಯಕ್ರಮ ರೂಪಿಸಿತ್ತು. ವಿಜ್ಞಾನಿಗಳ ಘರ್‌ವಾಪ್ಸಿ ಎಂದೇ ಕರೆಯಲ್ಪಟ್ಟಿದ್ದ ಯೋಜನೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಉಚ್ಛತರ ಶಿಕ್ಷಣ ಅಭಿಯಾನ (ರುಸಾ) ನಿಧಿಯಿಂದ ಹಣ ಬಳಕೆ ಮಾಡಿಕೊಂಡು, ಗೌರವಧನ ನೀಡಲು ನಿರ್ಧರಿಸಲಾಗಿತ್ತು.

Read more Articles on