ನೀರಾವರಿ ಸ್ಕೀಂ ಜಾರಿಗೆ ಸರ್ಕಾರ ಬದ್ಧ: ರಾಜ್ಯಪಾಲ

KannadaprabhaNewsNetwork |  
Published : Jan 27, 2024, 01:16 AM ISTUpdated : Jan 27, 2024, 11:40 AM IST
Governor Thawarchand Gehlot

ಸಾರಾಂಶ

ಮೇಕೆದಾಟು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಗಣರಾಜ್ಯೋತ್ಸವದ ಭಾಷಣದ ವೇಳೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಅಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳ ಜಾರಿಯ ಜತೆಜತೆಗೆ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಸೇರಿದಂತೆ ಇನ್ನಿತರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. 

ಅದರಲ್ಲೂ ಮೇಕೆದಾಟು ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಪೂರ್ವಭಾವಿ ಸಿದ್ಧತೆ ಆರಂಭಿಸಲಾಗಿದೆ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ತಿಳಿಸಿದರು.

ಗಣರಾಜ್ಯೋತ್ಸವ ಅಂಗವಾಗಿ ಮಾಣಿಕ್‌ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

 ಶಕ್ತಿ ಯೋಜನೆಯಿಂದ ₹134 ಕೋಟಿಗೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ.

ಅನ್ನಭಾಗ್ಯ ಅಡಿಯಲ್ಲಿ ನವೆಂಬರ್‌ವರೆಗೆ ಫಲಾನುಭವಿಗಳಿಗೆ 2,900 ಕೋಟಿ ರು. ಹಣ ವರ್ಗಾಯಿಸಲಾಗಿದೆ. ಗೃಹ ಜ್ಯೋತಿ ಅಡಿಯಲ್ಲಿ 1.50 ಕೋಟಿ ಗ್ರಾಹಕರು ಲಾಭ ಪಡೆದಿದ್ದರೆ, ಗೃಹ ಲಕ್ಷ್ಮೀ ಯೋಜನೆಯಲ್ಲಿ 1.17 ಕೋಟಿ ಮಹಿಳೆಯರಿಗೆ 8,181 ಕೋಟಿ ರು. ಹಣ ವರ್ಗಾಯಿಸಲಾಗಿದೆ. 

ಇದೀಗ ಯುವನಿಧಿಯನ್ನೂ ಜಾರಿಗೊಳಿಸಲಾಗಿದ್ದು, ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದರು.

ನೀರಾವರಿ ಯೋಜನೆಗಳಿಗೆ ಒತ್ತು: ಪ್ರಸಕ್ತ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಗೆ 16,735 ಕೋಟಿ ರು. ಅನುದಾನ ಮೀಸಲಿಡಲಾಗಿತ್ತು. ಅದರಲ್ಲಿ ನವೆಂಬರ್‌ ಅಂತ್ಯದವರೆಗೆ 9,223.34 ಕೋಟಿ ರು. ಆರ್ಥಿಕ ಪ್ರಗತಿ ಸಾಧಿಸಿ, 31,117.98 ಎಕರೆ ಪ್ರದೇಶದಕ್ಕೆ ನೀರಾವರಿ ಕಲ್ಪಿಸಲಾಗಿದೆ. 

ಅದರ ಜತೆಗೆ ಬೃಹತ್‌ ಯೋಜನೆಗಳಾದ ಮೇಕೆದಾಟು, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಜಾರಿಗೆ ಶ್ರಮಿಸಲಾಗುತ್ತಿದೆ. ಅದರಲ್ಲೂ ಮೇಕೆದಾಟು ಯೋಜನೆ ಜಾರಿಗಾಗಿ ಅಗತ್ಯವಿರುವ ಭೂಮಿ ಪಡೆಯಲು ಅರಣ್ಯ ಇಲಾಖೆಗ ಅರಣ್ತ ವೃದ್ಧಿ ಭೂಮಿ ನೀಡಲಾಗಿದೆ. 

ಶೀಘ್ರದಲ್ಲಿ ಯೋಜನಾ ಕಾಮಗಾರಿ ಮತ್ತು ಭೂ ಸ್ವಾಧಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ರಾಜ್ಯಪಾಲರು ವಿವರಿಸಿದರು.

ಬರ ನಿರ್ವಹಣೆಯಲ್ಲೂ ಮುಂದು: ರಾಜ್ಯದಲ್ಲಿನ ಬರ ಪರಿಸ್ಥಿತಿ ನಿರ್ವಹಣೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಅದರಲ್ಲಿ ತೀವ್ರ ಬರವಿರುವ 195 ತಾಲೂಕುಗಳಲ್ಲಿ ಬರ ನಿರ್ವಹಣೆಗಾಗಿ ಎನ್‌ಡಿಆರ್‌ಎಫ್‌ನಿಂದ ಅನುದಾನ ನೀಡುವಂತೆ ಕೋರಲಾಗಿದೆ. 

30 ಲಕ್ಷ ರೈತರಿಗೆ ಇನ್ಪುಟ್‌ ಸಬ್ಸಿಡಿ ನೀಡಲು 580 ಕೋಟಿ ರು. ಬಿಡುಗಡೆ ಮಾಡಲಾಗುತ್ತಿದೆ. ಹಾಗೆಯೇ, ಬಿತ್ತನೆ ವೈಫಲ್ಯದಡಿ ಮತ್ತು ಮಧ್ಯಂತರ ಬೆಳೆ ವಿಮೆ ಪರಿಹಾರದಡಿ ಈವರೆಗೆ 6.77 ಲಕ್ಷ ರೈತರಿಗೆ 459.59 ಕೋಟಿ ರು. ಬೆಳೆ ವಿಮೆ ಪರಿಹಾರ ನೀಡಲಾಗಿದೆ. 

2023-24ನೇ ಸಾಲಿನಲ್ಲಿ 17.24 ಲಕ್ಷಕ್ಕೂ ಹೆಚ್ಚಿನ ರೈತರಿಗೆ 13,672 ಕೋಟಿ ರು. ಬೆಳೆ ಸಾಲ ವಿತರಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ 2 ಸಾವಿರ ಕೋಟಿ ರು.: ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ 2 ಸಾವಿರ ಕೋಟಿ ರು. ವೆಚ್ಚದ ವಿವಿದ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. 

ಅದರಲ್ಲಿ ವೈಟ್‌ಟಾಂಪಿಗ್‌ ರಸ್ತೆಗಳ ಅಭಿವೃದ್ಧಿ ಸೇರಿ ಇನ್ನಿತರ ಯೋಜನೆ ರೂಪಿಸಲಾಗುವುದು. ಅದರ ಜತೆಗೆ ಆಯ್ದ ರಸ್ತೆಳಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ ಎಂದು ಥಾವರಚಂದ್‌ ಗೆಹಲೋಥ್‌ ತಿಳಿಸಿದರು.

ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಈವರೆಗೆ 165 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಅವುಗಳಿಂದ 45,325 ಕೋಟಿ ರು. ಬಂಡವಾಳ ಹೂಡಿಕೆಯಾಗಿ, 42,292 ಉದ್ಯೋಗ ಸೃಷ್ಟಿಯಾಗಲಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರಿದ್ದರು.

ವಿವಿಧತೆಯಲ್ಲಿ ಏಕತೆ: ಭಾರತವು ಮಾನವೀಯತೆಯ ನೆಲೆಯಿರುವ ರಾಷ್ಟ್ರವಾಗಿದೆ. ಇಲ್ಲಿ ವಿಭಿನ್ನ ಧರ್ಮ, ಸಮಾಜ, ಸಂಸ್ಕೃತಿ ಮತ್ತು ಭಾಷೆಗಳನ್ನು ಹೊಂದಿದೆ. ಎಲ್ಲವೂ ಸೌಹಾರ್ದತೆಯಿಂದ ಪರಸ್ಪರ ಸಂಬಂಧ ಹೊಂದಿದೆ. 

ಜಗತ್ತಿಗೆ ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಭಾರತ ನೀಡಿದೆ. ಅದನ್ನು ಉಳಿಸಲು ಶಾಂತಿ ಮತ್ತು ಸಾಮರಸ್ಯ ಸ್ಥಾಪಿಸಬೇಕು ಹಾಗೂ ರಾಷ್ಟ್ರೀಯ ಏಕತೆಯನ್ನು ಬಲವರ್ಧನೆಗೊಳಿಸಬೇಕು. 

ಕರ್ನಾಟಕದ ಎಲ್ಲ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!