ಡ್ರಗ್ಸ್‌ ವಿರುದ್ಧ ಜಾಗೃತಿಗೆ ಯುವ ಶುದ್ಧಿ ಅಭಿಯಾನಕ್ಕೆ ರಾಜ್ಯಪಾಲರ ಚಾಲನೆ

KannadaprabhaNewsNetwork | Published : Nov 24, 2024 1:48 AM

ಸಾರಾಂಶ

ಯುವಕಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿರುವ ಯುವ ಶುದ್ಧಿ ಅಭಿಯಾನಕ್ಕೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋತ್‌ ಚಾಲನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಭಿವೃದ್ಧಿ ಹೊಂದಿದ ಹಾಗೂ ಉತ್ತಮ ಭಾರತಕ್ಕಾಗಿ ಯುವಕರಿಗೆ ಆರೋಗ್ಯಕರ ಮತ್ತು ಮೌಲ್ಯಾಧಾರಿತ ವಾತಾವರಣ ಒದಗಿಸುವುದು ಅವಶ್ಯಕವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋತ್‌ ಹೇಳಿದರು.

ರಾಜಭವನದಲ್ಲಿ ಶನಿವಾರ ಭಾರತೀಯ ನರ್ಸಸ್ ಮತ್ತು ಅಲೈಡ್ ಸಂಘದ ವತಿಯಿಂದ ಕಾಲೇಜು ಆವರಣದಲ್ಲಿ ಮಾದಕ ದ್ರವ್ಯ ಸೇವನೆ ವಿರುದ್ಧ ಆಯೋಜಿಸಿರುವ ‘ಯುವ ಶುದ್ಧಿ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರು ರಾಷ್ಟ್ರದ ಭವಿಷ್ಯ ಮತ್ತು ಸಮಾಜದ ಆಧಾರ ಸ್ತಂಭ. ಯುವಕರ ಶಕ್ತಿ, ಉತ್ಸಾಹ ಮತ್ತು ನಾಯಕತ್ವದ ಸಾಮರ್ಥ್ಯಗಳು ಸಮಾಜವನ್ನು ಮಾದಕ ವ್ಯಸನ ಮುಕ್ತ ಮತ್ತು ಸಬಲೀಕರಣಗೊಳಿಸಲು ಬಲವಾದ ಅಡಿಪಾಯವನ್ನು ಒದಗಿಸುತ್ತವೆ ಎಂದರು.

ಬಾಲ್ಯದಿಂದಲೇ ಯುವಕರು ಸರಿಯಾದ ಮಾರ್ಗವನ್ನು ಅನುಸರಿಸಲು ಶಿಕ್ಷಣವನ್ನು ಪಡೆಯುತ್ತಾರೆ. ಗುರುಗಳು, ಪೋಷಕರು ಉತ್ತಮ ವಾತಾವರಣದಿಂದ ಯುವಕರು ಮಾದಕ ವ್ಯಸನದಿಂದ ಮುಕ್ತರಾಗುತ್ತಾರೆ. ಆಧುನಿಕ ಜೀವನಶೈಲಿ, ಒತ್ತಡ ಇತ್ಯಾದಿಗಳು ಮನುಷ್ಯನನ್ನು ಚಟದ ಕಡೆಗೆ ಕೊಂಡೊಯ್ದಿವೆ. ಆದರೆ, ಈ ರೀತಿ ಚಟ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂಬ ಜಾಗೃತಿಯನ್ನು ಯುವಕರಲ್ಲಿ ಮೂಡಿಸಬೇಕಿದೆ ಎಂದು ಹೇಳಿದರು.

ಮಾದಕ ವ್ಯಸನವು ಸಮಾಜಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ನಮ್ಮ ದೇಹಕ್ಕೆ ಹಾನಿಯುಂಟು ಮಾಡುವುದು ಮಾತ್ರವಲ್ಲದೆ ನಮ್ಮ ಮಾನಸಿಕ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದೇ ರೀತಿ ಪ್ರತಿಯೊಬ್ಬರು ವ್ಯಸನದ ಅಪಾಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಈ ಅಭಿಯಾನವನ್ನು ಜಂಟಿಯಾಗಿ ಕೈಗೊಂಡಿರುವ ಭಾರತೀಯ ನರ್ಸಸ್ ಮತ್ತು ಅಲೈಡ್ ಸಂಘ, ವಿಶ್ವ ಹಿಂದೂ ಪರಿಷದ್, ನಾರ್ಕೋಟಿಕ್ ಕಂಟೋಲ್ ಬ್ಯೂರೋ ಬೆಂಗಳೂರು ವಲಯ ಹಾಗೂ ದಿಶಾ ಬೋಧ್ ಸಸ್ಟೈನೆಬಲ್ ಕಮ್ಯೂನಿಟಿ ಫೌಂಡೇಶನ್‌ಗೆ ಅಭಿನಂದನೆಗಳು. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಹಾಗೂ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.

ವಿಶ್ವ ಹಿಂದೂ ಪರಿಷತ್ತು ರಾಜ್ಯಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬೆಂಗಳೂರು ವಲಯ ಸಹಾಯಕ ನಿರ್ದೇಶಕ ದೇವಾನಂದ್, ಭಾರತೀಯ ನರ್ಸೇಜ್ ಮತ್ತು ಅಲೈಡ್ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಜೀಜೂ ಥಾಮಸ್ ಉಪಸ್ಥಿತರಿದ್ದರು.

Share this article