ಕನ್ನಡಪ್ರಭ ವಾರ್ತೆ ವಿಧಾನಸಭೆ
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಆರೋಪ-ಪ್ರತ್ಯಾರೋಪಗಳ ಬಳಿಕ ರಾಜ್ಯಪಾಲರ ನಿರ್ಗಮನ ಹಾಗೂ ರಾಷ್ಟ್ರಗೀತೆ ಕುರಿತು ಚರ್ಚೆಗೆ ಶುಕ್ರವಾರ ರೂಲಿಂಗ್ ನೀಡುವುದಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಕಟಿಸಿದರು.
ರಾಜ್ಯಪಾಲರ ಭಾಷಣದ ಬಳಿಕ ಮುಂದೂಡಿ ಪುನಃ ಸೇರಿದ ವಿಧಾನಸಭೆ ಕಲಾಪದಲ್ಲಿ ವಂದೇ ಮಾತರಂ ಬಳಿಕ ರಾಜ್ಯಪಾಲರ ಭಾಷಣವನ್ನು ವಿಧಾನಸಭೆ ಕಾರ್ಯದರ್ಶಿಗಳು ಮಂಡಿಸಿದರು. ನಂತರ ಸಂಪ್ರದಾಯದಂತೆ ಸಂತಾಪ ಸೂಚನೆ ನಿರ್ಣಯ ತೆಗೆದುಕೊಳ್ಳಲು ಸ್ಪೀಕರ್ ರೂಲಿಂಗ್ ನೀಡಿದರು. ನಡುವೆಯೇ ಸಚಿವ ಎಚ್.ಕೆ. ಪಾಟೀಲ್ ಮಾತನಾಡಲು ಯತ್ನಿಸಿದರು.ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯಪಾಲರು ನಿರ್ಗಮಿಸುವ ವೇಳೆ ಅವರಿಗೆ ಅಗೌರವ ತೋರಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನಾವು ಈಗಾಗಲೇ ಪತ್ರ ನೀಡಿದ್ದೇವೆ. ಈ ಬಗ್ಗೆ ಚರ್ಚೆಯಾಗಲಿ. ನಮಗೆ ಅವಕಾಶ ನೀಡದೆ ಅವರಿಗೆ ನೀಡುವುದು ಸರಿಯಲ್ಲ ಎಂದು ವಾದ ಮಾಡಿದರು.
ರಾಜ್ಯಪಾಲರು ಕ್ಷಮೆ ಯಾಚಿಸಬೇಕು-ಎಚ್.ಕೆ:ಇದರ ನಡುವೆ ಸ್ಪೀಕರ್ ಅವಕಾಶ ನೀಡಿದ್ದರಿಂದ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ‘ರಾಜ್ಯಪಾಲರು ಪೂರ್ಣ ಭಾಷಣ ಓದದಿರುವುದು ಅಲ್ಲದೆ ರಾಷ್ಟ್ರಗೀತೆ, ಶಾಸಕಾಂಗಕ್ಕೆ ಅಗೌರವ ತೋರಿದ್ದಾರೆ. ರಾಷ್ಟ್ರಗೀತೆಗೆ ಮೊದಲೇ ಓಡಿ ಹೋಗುವಂತೆ ಹೋಗಿದ್ದಾರೆ. ಹೀಗಾಗಿ ರಾಜ್ಯಪಾಲರು ಕ್ಷಮೆ ಯಾಚಿಸಬೇಕು. ಈ ಬಗ್ಗೆ ಚರ್ಚೆಯಾಗಬೇಕು’ ಎಂದು ಆಗ್ರಹಿಸಿದರು. ಇದು ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಆರ್. ಅಶೋಕ್ ಮಾತನಾಡಿ, ರಾಜ್ಯಪಾಲರಿಗೆ ಅಗೌರವ ತೋರಿಸಿದ್ದರಲ್ಲಿ ಎಚ್.ಕೆ.ಪಾಟೀಲರೇ ಅಪರಾಧಿ. ಸತ್ತವರಿಗೆ ಸಂತಾಪ ಸೂಚಿಸಲು ಯೋಗ್ಯತೆ ಇಲ್ಲದ ಸರ್ಕಾರ ಇದು. ಭೀಮಣ್ಣ ಖಂಡ್ರೆ ಅವರಿಗೆ ಸಂತಾಪ ಸೂಚಿಸುವ ಮೊದಲೇ ರಾಜಕೀಯ ಚರ್ಚೆ ತೆಗೆದುಕೊಂಡಿದೆ. ಸ್ಪೀಕರ್ ಕಾಂಗ್ರೆಸ್ ಚಾಂಪಿಯನ್‌ರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ನಿಯಮಾವಳಿಗಳ ಪ್ರಶ್ನೆ ಎತ್ತಿ, ನಮ್ಮ ಪತ್ರಕ್ಕೆ ಅವಕಾಶ ನೀಡದೆ ಕೇವಲ ಆಡಳಿತ ಪಕ್ಷದವರಿಗೆ ಮಾತ್ರ ಅವಕಾಶ ನೀಡುತ್ತಿರುವುದು ಪಕ್ಷಪಾತ ಎಂದು ಸಭಾಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜತೆಗೆ ರಾಜ್ಯಪಾಲರು ದಲಿತರು ಎಂದು ಅವಮಾನ ಮಾಡುತ್ತಿದ್ದೀರಾ? ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಕೂಗಿದಾಗ, ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿದಾಗ ಏನು ಮಾಡಿದಿರಿ? ಈಗ ರಾಷ್ಟ್ರಗೀತೆ ನೆನಪಾಯಿತೇ ಎಂದು ಪ್ರಶ್ನಿಸಿದರು.ಇದೇ ವೇಳೆ ಆರ್.ಅಶೋಕ್, ರಾಜ್ಯಪಾಲರು ಭಾಷಣವನ್ನು ಪೂರ್ಣವಾಗಿ ಓದಬೇಕೆಂದೇನೂ ಇಲ್ಲ. ಆದರೆ ಅವರು ನಿರ್ಗಮಿಸುವಾಗ ಅಡೆತಡೆ ಉಂಟುಮಾಡುವುದು ತಪ್ಪು. ಕಾಂಗ್ರೆಸ್ಸಿಗರ ವರ್ತನೆ ರಾಜ್ಯಪಾಲರಿಗೆ ಮಾಡಿದ ಅಪಮಾನ ಎಂದು ದೂರಿದರು.
ವಿವಾದ ತಾರಕಕ್ಕೇರುತ್ತಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಚರ್ಚೆಗೆ ಅವಕಾಶ ನೀಡುವ ಬಗ್ಗೆ ರೂಲಿಂಗ್ ನೀಡುವುದಾಗಿ ಹೇಳಿ ಸ್ಪೀಕರ್ ಅವರು ಚರ್ಚೆಗೆ ತೆರೆ ಎಳೆದರು.