ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಾಂಗ್ರೆಸ್ ನ ಬಿ.ಎನ್.ಚಂದ್ರಪ್ಪ ಅವರ ಕೈಲಿದ್ದ ಕ್ಷೇತ್ರವನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಎ.ನಾರಾಯಣಸ್ವಾಮಿ ಕಸಿದಿದ್ದರು. ಈ ಬಾರಿ ಬಿಜೆಪಿಯಿಂದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣಕ್ಕಿಳಿದಿದ್ದು ಎಂದಿನಂತೆ ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ ನಿಂದ ಎದುರಾಳಿಯಾಗಿದ್ದಾರೆ. ಮತದಾನದಲ್ಲಿ ತುಸು ಏರಿಕೆ ಕಂಡು ಬಂದಿದ್ದರಿಂದ ಫಲಿತಾಂಶ ಏನಾಗುತ್ತದೋ ಎಂಬ ಸಹಜ ಕುತೂಹಲ ಮನೆ ಮಾಡಿತ್ತು. ಎಕ್ಸಿಟ್ ಪೋಲ್ ವರದಿಗಳು ಬಂದ ನಂತರ ಅಭ್ಯರ್ಥಿಗಳಲ್ಲಿ ಕುತೂಹಲ ಮಾಯವಾಗಿ ಆತಂಕಗಳು ಮನೆ ಮಾಡಿವೆ.
ಎಣಿಕೆಗೆ ಸಕಲ ಸಿದ್ಧತೆ: ಲೋಕಸಭೆ ಚುನಾವಣೆ ಮತಗಳ ಎಣಿಕೆಗೆ ಜಿಲ್ಲಾಡಳಿತ ಪೂರ್ಣ ಪ್ರಮಾಣದಲ್ಲಿ ಸನ್ನದ್ದವಾಗಿದೆ. ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಮನೋಹರ್ ಮರಂಡಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ ಅವರು ಸೋಮವಾರ ನಗರದ ಸರ್ಕಾರಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ಮತ ಎಣಿಕೆಗೆ ಮಾಡಿರುವ ಸಿದ್ಧತೆಯನ್ನು ಪರಿಶೀಲಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್, ಮಂಗಳವಾರ ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಚುನಾವಣಾ ವೀಕ್ಷಕರ, ಅಭ್ಯರ್ಥಿಗಳ, ಪ್ರತಿನಿಧಿಗಳ ಸಮಕ್ಷಮದಲ್ಲಿ ತೆರೆಯಲಾಗುವುದು. ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದರು.
ಅಂಚೆ ಮತಪತ್ರಗಳ ಎಣಿಕೆಯ ಜೊತೆಜೊತೆಗೆ ಇವಿಎಂ ಮತ ಎಣಿಕೆ ಕಾರ್ಯವೂ ನಡೆಯಲಿದ್ದು, ಮಧ್ಯಾಹ್ನ 12 ರ ವೇಳೆಗೆ ಮತ ಎಣಿಕೆಯ ಸ್ಪಷ್ಟ ಚಿತ್ರಣ ದೊರೆಯಲಿದೆ. ಪ್ರತಿ ಟೇಬಲ್‍ಗೆ ಎಣಿಕೆ ಮೈಕ್ರೋ ಅಬ್ಸರ್ವರ್, ಎಣಿಕೆ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದ್ದು, 141 ಎಣಿಕೆ ಮೈಕ್ರೋ ಅಬ್ಸರ್ವರ್ , 141 ಜನ ಎಣಿಕೆ ಮೇಲ್ವಿಚಾರಕರು ಹಾಗೂ 154 ಜನ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ ಎಂದರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 285 ಮತಗಟ್ಟೆಗಳ ಎಣಿಕೆಯು 21 ಸುತ್ತುಗಳಲ್ಲಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260 ಮತಗಟ್ಟೆಗಳ ಎಣಿಕೆ 19 ಸುತ್ತು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 288 ಮತಗಟ್ಟೆಗಳ ಎಣಿಕೆಯು 21 ಸುತ್ತು, ಹಿರಿಯೂರು ವಿಧಾನಸಭಾ ಕ್ಷೇತ್ರದ 287 ಮತಗಟ್ಟೆಗಳ ಎಣಿಕೆ 21 ಸುತ್ತು, ಹೊಸದುರ್ಗ ವಿಧಾನಸಭಾ ಕ್ಷೇತ್ರದ 242 ಮತಗಟ್ಟೆಗಳ ಎಣಿಕೆ 18 ಸುತ್ತು, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 299 ಮತಗಟ್ಟೆಗಳ ಎಣಿಕೆ 22 ಸುತ್ತುಗಳಲ್ಲಿ, ಶಿರಾ ವಿಧಾನಸಭಾ ಕ್ಷೇತ್ರದ 267 ಮತಗಟ್ಟೆಗಳ ಎಣಿಕೆ 20 ಸುತ್ತುಗಳಲ್ಲಿ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಗಳ ಎಣಿಕೆ 18 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಎಣಿಕೆ ಕೇಂದ್ರದೊಳಗೆ ಮೊಬೈಲ್ ಪೋನ್‍ಗಳು, ಪೇಜರ್, ಎಲೆಕ್ಟ್ರಾನಿಕ್, ಕ್ಯಾಲ್ಕುಲೇಟರ್ಸ್, ಸಿಗರೇಟ್, ಬೀಡಿ, ಬೆಂಕಿಪೊಟ್ಟಣ ಹಾಗೂ ಲೈಟರ್ಸ್‍ಗಳು, ನೀರಿನ ಬಾಟಲ್ ಗಳು ಹಾಗೂ ಇನ್ನೂ ಯಾವುದೇ ಬಾಟಲ್ ಗಳು, ಛತ್ರಿ, ಯಾವುದೇ ಹರಿತವಾದ ಆಯುಧಗಳು, ಯಾವುದೇ ರೀತಿಯ ಸ್ಪೋಟಕ ವಸ್ತುಗಳು ಹಾಗೂ ಸಿಡಿಮದ್ದುಗಳು, ಯಾವುದೇ ರೀತಿಯ ಬೆಂಕಿ ಹತ್ತುವ ಪದಾರ್ಥಗಳು, ಯಾವುದೇ ಬಗೆಯ ಆಯುಧಗಳು, ಇಂಕ್‍ಪೆನ್ ವಸ್ತುಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.