ರಾಷ್ಟ್ರಕವಿ ಗೋವಿಂದ ಪೈಯವರದ್ದು ವಿಶ್ವಾತ್ಮಕ ಚಿಂತನೆ: ಪ್ರೊ.ವಿವೇಕ ರೈ

KannadaprabhaNewsNetwork | Published : Mar 28, 2024 12:45 AM

ಸಾರಾಂಶ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಅಫ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗೋವಿಂದ ಪೈ ಅವರ 141ನೇ ಜನ್ಮದಿನೋತ್ಸವದಂದು ಕನಕ ಚಿಂತನ ವಿಸ್ತರಣ ಉಪನ್ಯಾಸ ಕೃತಿಯನ್ನು ಎಂ.ಜಿ.ಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಧರ್ಮವನ್ನು ತುಂಡುತುಂಡಾಗಿ ನೋಡದೇ ಸಂಸ್ಕೃತಿಯೊಂದಿಗೆ ಧರ್ಮವನ್ನು ಬೆಸೆದ ವಿಶ್ವಾತ್ಮಕತೆಯ ಚಿಂತನೆ, ಆದರೆ ಇಂದು ಇಂತಹ ವಿಶಾಲ ಮನೋಧರ್ಮ ಇಲ್ಲವಾಗಿದ್ದು ಸಂಕುಚಿತತೆ ಮರೆದಾಡುತ್ತಿದೆ, ಕ್ಷಮಾಗುಣ ಎಲ್ಲೂ ಕಾಣುತ್ತಿಲ್ಲ ಎಂದು ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಅಫ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗೋವಿಂದ ಪೈ ಅವರ 141ನೇ ಜನ್ಮದಿನೋತ್ಸವದಂದು ಕನಕ ಚಿಂತನ ವಿಸ್ತರಣ ಉಪನ್ಯಾಸ ಕೃತಿಯನ್ನು ಶನಿವಾರ ಎಂ.ಜಿ.ಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.ಗೋವಿಂದ ಪೈ ಅವರು ಇಡೀ ಜಗತ್ತನ್ನು ಸಾಹಿತ್ಯದ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಸ್ಥಳೀಯವಾಗಿ ಸಮಗ್ರತೆಯೊಂದಿಗೆ ಜಗತ್ತಿನೆಡೆಗೆ ಸಾಗುವ ಅವರ ದೃಷ್ಟಿಕೋನಕ್ಕೆ ಅವರ ಸಾಹಿತ್ಯಗಳೇ ನಿದರ್ಶನ ಎಂದು ಬಣ್ಣಿಸಿದರು.ಕನ್ನಡಕ್ಕೆ ಮೊದಲ ರಾಷ್ಟ್ರಕವಿ ಪಟ್ಟ ತಂದುಕೊಟ್ಟ ಗೋವಿಂದ ಪೈ ವರ್ಷಕ್ಕೊಮ್ಮೆ ನೆನಪಾಗುವ ವ್ಯಕ್ತಿತ್ವವಲ್ಲ. ಅವರು ಸದಾಸ್ಮರಣೀಯರು. ಅವರ ವಿಶ್ವಬಂಧುತ್ವದ ಆಶಯ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ಪೈ ಅವರ ಮೂಲಕ ಗಾಂಧಿ ನೆನಪು ಮಾಡಬೇಕು. ಶ್ರೀಕೃಷ್ಣ, ಬುದ್ಧ, ಯೇಸು, ಗಾಂಧೀಜಿ ಹೀಗೆ ಎಲ್ಲರನ್ನು ತಮ್ಮ ಸಾಹಿತ್ಯದಲ್ಲಿ ತಂದಿದ್ದರು ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ವಿ. ನಾವಡ ಅವರು, ಗೋವಿಂದ ಪೈ ಅವರ ಸಾಹಿತ್ಯಾತ್ಮಕ ಬದುಕಿನ ಬಗ್ಗೆ ಬೆಳಕು ಚೆಲ್ಲಿದರು. ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು ‘ತುಳುವ ಇತಿಹಾಸ ಗೋವಿಂದ ಪೈ ಅವರ ದೃಷ್ಟಿಸೃಷ್ಟಿ’ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಶಿವಾಜಿ ಜೋಯಿಸ್ ಅವರು ‘ಗೋವಿಂದ ಪೈ ಸಾಹಿತ್ಯಿಕ ಕೊಡುಗೆ: ಅಲಭ್ಯ ಬರಹಗಳು - ಕೆಲವು ಟಿಪ್ಪಣಿಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಎಂ.ಜಿ.ಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಯಕ್ಷಗಾನ ಕೇಂದ್ರ ಇಂದ್ರಾಳಿಯ ಗುರು ಉಮೇಶ್ ಸುವರ್ಣ ಯಕ್ಷಗಾನ ಶೈಲಿಯಲ್ಲಿ ಗಣಪತಿ ಸ್ತುತಿ ಹಾಡಿದರು. ಎಂ.ಜಿ.ಎಂ ಕಾಲೇಜು ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿ ವಂದಿಸಿದರು.

Share this article