ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಗೆ ಅಗತ್ಯವಿದ್ದ ವರ್ತುಲ ರಸ್ತೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಆಸ್ಪತ್ರೆ, ದಂತ ವೈದ್ಯಕೀಯ ಕಾಲೇಜು, ಹೃದ್ರೋಗ ಆಸ್ಪತ್ರೆ, ಕೃಷಿ ವಿಶ್ವವಿದ್ಯಾನಿಲಯ, ಮಂಡ್ಯ ವಿವಿ ಬಲವರ್ಧನೆಗೆ ಅನುದಾನ, ಆಯುರ್ವೇದ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗೆ ಶೀತಲಗೃಹಗಳ ನಿರ್ಮಾಣ, ಕೆಆರ್‌ಎಸ್‌ನಿಂದ ಸಿಗಬಹುದಾದ ಹೆಚ್ಚುವರಿ ನೀರಿನ ಬಳಕೆಗೆ ಪೂರಕವಾದ ಯೋಜನೆಗಳು, ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ಎಲ್ಲಾ ಕೆರೆಗಳಿಗೆ ನಾಲಾ ಸಂಪರ್ಕ ಜಾಲ, ಮೈಷುಗರ್ ಕಾರ್ಖಾನೆ ನವೀಕರಣಕ್ಕೆ ಅನುದಾನ, ಆಹಾರ ಸಂಸ್ಕರಣಾ ಘಟಕ, ಮಹಾ ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಇನ್ನಿತರ ಮಹತ್ವಾಕಾಂಕ್ಷಿ ಯೋಜನೆಗಳು ಮಂಡ್ಯ ಜಿಲ್ಲೆಗೆ ಇನ್ನೂ ಗಗನಕುಸುಮವಾಗಿಯೇ ಉಳಿದಿದೆ.
ಜಿಲ್ಲೆಯ ಪ್ರತಿಯೊಂದು ತಾಲೂಕಿಗೆ ಸಾವಿರಾರು ಕೋಟಿ ರು. ಅನುದಾನ ನೀಡಿರುವುದಾಗಿ ಸಚಿವರು, ಶಾಸಕರು ಹೇಳುತ್ತಿದ್ದಾರೆ. ಆದರೆ, ರಸ್ತೆ, ಚರಂಡಿ, ಸಿಮೆಂಟ್ ರಸ್ತೆ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ಕೆರೆಗಳ ಹೂಳೆತ್ತುವುದು, ಕುಡಿಯುವ ನೀರು ಪೂರೈಕೆ, ಕೆಲವೊಂದು ತಾಲೂಕುಗಳ ನಾಲೆಗಳ ಆಧುನೀಕರಣ ಇವುಗಳನ್ನೇ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಎಂಬಂತೆ ಬಿಂಬಿಸಲಾಗುತ್ತಿದೆ.ನವ ಪೀಳಿಗೆಯ ಯುವಜನರ ಬೇಡಿಕೆಗಳು-ಅಭಿಪ್ರಾಯಗಳೇನು, ಅವರ ಶೈಕ್ಷಣಿಕ ಅಭಿವೃದ್ಧಿಗೆ ನೀಡಬಹುದಾದ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಒತ್ತು ನೀಡುವುದು, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಪೂರಕವಾದ ಉತ್ಪಾದನಾ ಘಟಕಗಳನ್ನು ತೆರೆಯುವ, ಪ್ರವಾಸೋದ್ಯಮವನ್ನು ಗುರಿಯಾಗಿಸಿಕೊಂಡು ಹೊಸತನವನ್ನು ಪರಿಚಯಿಸುವ ಆಲೋಚನೆಗಳು ಸ್ಥಳೀಯ
೧. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವ್ಯಾಪ್ತಿಯ ಸಿಡಿಎಸ್ ನಾಲೆಗಳ ಅಭಿವೃದ್ಧಿ ಕಾಮಗಾರಿ.
೨. ಶ್ರೀರಂಗಪಟ್ಟಣ ತಾಲೂಕಿನಲ್ಲಿ ಅರೆಕೆರೆ ಬಳಿ ೧೨ ಕೆರೆಗಳಿಗೆ ಕಾವೇರಿ ನದಿಯಿಂದ ಏತ ನೀರಾವರಿ.೩. ಜಿಲ್ಲೆಯ ಪಾಂಡವಪುರ ತಾಲೂಕನ್ನು ಸಂಪೂರ್ಣ ಸಾವಯವ ತಾಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
೪. ರಾಯಚೂರು, ವಿಜಯಪುರ, ಬಾಗಲಕೋಟೆ, ಬೀದರ್, ಕೊಪ್ಪಳ, ಚಿತ್ರದುರ್ಗ, ಮಂಡ್ಯ, ಭದ್ರಾವತಿ, ಕೆಜಿಎಫ್ ಮತ್ತು ಚಿಕ್ಕಮಗಳೂರಿನಲ್ಲಿರುವ ಕಾರ್ಮಿಕ ರಾಜ್ಯ ವಿಮಾ (ಇಎಸ್‌ಐ) ಚಿಕಿತ್ಸಾಲಯಗಳನ್ನು ಉನ್ನತೀಕರಿಸಲಾಗುವುದು.೫.ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾರವರಿಂದ ಮಂಡ್ಯದಲ್ಲಿ ೫೦೦ ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆಗಳ ಪರೀಕ್ಷಾ ಘಟಕವನ್ನು ಸ್ಥಾಪಿಸಲು ರಾಜ್ಯ ಸರ್ಕಾರದಿಂದ ೧೦೦ ಎಕರೆ ಜಮೀನನ್ನು ನೀಡಲಾಗುವುದು.
ಸಮತೋಲಿತ ಬಜೆಟ್ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ವರನ್ನು ಒಳಗೊಂಡ ಚಾರಿತ್ರಿಕ ಬಜೆಟ್ ಆಗಿದೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರೈತರ ಸಬಲೀಕರಣಕ್ಕೆ ಒತ್ತು ಕೊಡಲಾಗಿದೆ. ಬಡವರು ಜನಸಾಮಾನ್ಯರಿಗೆ ಇನ್ನಷ್ಟು ಶಕ್ತಿ ತುಂಬುವಂತಹ ಅತ್ಯಂತ ಕಡಿಮೆ ತೆರಿಗೆಯ ಬಜೆಟ್ ಇದಾಗಿದೆ. ಶಿಕ್ಷಣ, ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಮೀಸಲಿರಿಸುವುದು ಸ್ವಾಗತಾರ್ಹ.
- ಎನ್.ಚಲುವರಾಯಸ್ವಾಮಿ, ಕೃಷಿ, ಜಿಲ್ಲಾ ಉಸ್ತುವಾರಿ ಸಚಿವರುಉತ್ತಮ ಬಜೆಟ್ಸಿದ್ದರಾಮಯ್ಯನವರು ಉತ್ತಮ ಬಜೆಟ್ ನೀಡಿದ್ದಾರೆ. ಕಾರ್ಮಿಕರ ವಸತಿ ಶಾಲೆ, ಪಾಂಡವಪುರ ತಾಲೂಕನ್ನು ಸಾವಯವ ತಾಲೂಕಾಗಿ ಪರಿವರ್ತಿಸುವ ಮಹತ್ವದ ಯೋಜನೆ ಕೊಟ್ಟು, ಕೈಗಾರಿಕೆ ಸ್ಥಾಪನೆಗೆ ೧೦೦ ಎಕರೆ ಭೂಮಿ ದೊರಕಿಸಿದ್ದಾರೆ. ಬಜೆಟ್‌ನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ಅನುದಾನದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ
ದೊರಕಿದೆ. ನಾಲೆಗಳ ಆಧುನೀಕರಣ, ಕೆರೆಗಳನ್ನು ತುಂಬಿಸುವ ಯೋಜನೆಗೆ ಒತ್ತು ನೀಡಿರುವುದು ಸ್ವಾಗತಾರ್ಹವಾಗಿದೆ.- ಪಿ.ರವಿಕುಮಾರ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರ
ಶಿಕ್ಷಣ ಕ್ಷೇತ್ರಕ್ಕೆ ಒತ್ತು
ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ೪೭,೨೨೪ ಕೋಟಿ ರು. ಅನುದಾನ ಮೀಸಲಿಟ್ಟು, ೮೦೦ ಪಬ್ಲಿಕ್ ಶಾಲೆಗಳನ್ನು ತೆರೆಯುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಕಲಿಯಲು ಅನುಕೂಲವಾಗಲಿದೆ.ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ೧೫ ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ನಿರ್ಧಾರ ಕೈಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ.
- ಡಾ. ಮೀರಾ ಶಿವಲಿಂಗಯ್ಯ, ಕಾರ್ಯದರ್ಶಿಗಳು, ಎಸ್ಬಿಇಟಿ, ಮಂಡ್ಯಕೃಷಿ ಕ್ಷೇತ್ರಕ್ಕೆ ಆದ್ಯತೆ
ಇದೊಂದು ಉತ್ತಮ ಆಯವ್ಯಯ. ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ. ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಇದಲ್ಲದೆ ನೀರಾವರಿ ಕ್ಷೇತ್ರ ಹಾಗೂ ನಾಲೆಗಳ ಆಧುನೀಕರಣಕ್ಕೆ ಪ್ರಾಮುಖ್ಯತೆ ನೀಡಿರುವುದು ಉತ್ತಮ ವಿಷಯ. ಪಾಂಡವಪುರ ತಾಲೂಕನ್ನು ಸಾವಯವ ತಾಲೂಕಾಗಿ ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ ಕೈಗಾರಿಕೆ ಸ್ಥಾಪನೆಗೆ ೧೦೦ ಎಕರೆ ಜಮೀನನ್ನು ಬಜೆಟ್‌ನಲ್ಲೇ ಘೋಷಣೆ ಮಾಡಲಾಗಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನಾದರೂ ಕೈಗಾರಿಕೆ ಪ್ರಾರಂಭಿಸಲು ಮುಂದಾಗಲಿ.
- ಸಿ.ತ್ಯಾಗರಾಜು. ಮಾಜಿ ಅಧ್ಯಕ್ಷರು. ಮಂಡ್ಯ ತಾಲೂಕು ಪಂಚಾಯಿತಿನಿರೀಕ್ಷೆಯಂತೆ ನಿರಾಸದಾಯಕ
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಿರಾಸದಾಯಕ. ಇದು ನಿರೀಕ್ಷೆ ಕೂಡ ಆಗಿತ್ತು. ರಾಜ್ಯದ ಬೊಕ್ಕಸವೆಲ್ಲ ಖಾಲಿ ಮಾಡಿರುವ ಕಾಂಗ್ರೆಸ್ ಸರ್ಕಾರ ಉತ್ತಮ ಯೋಜನೆ ನೀಡಲಿದೆ ಎಂದುಕೊಳ್ಳುವುದು ತಪ್ಪು. ಹಣವಿಲ್ಲದೆ ಅಭಿವೃದ್ಧಿ ಯೋಜನೆ ಹೇಗೆ ಅನುಷ್ಠಾನಗೊಳಿಸಲು ಸಾಧ್ಯ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಭಿವೃದ್ಧಿಯನ್ನು ನಿಲ್ಲಿಸಲಾಗಿದೆ. ಗ್ಯಾರಂಟಿ ಯೋಜನೆಗೆ ಅನುದಾನ ಒದಗಿಸಲು ಜನಸಾಮಾನ್ಯರ ಮೇಲೆ ಹೊರೆ ಹಾಕಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿಯೂ ವಿಶೇಷ ಕಾರ್ಯಕ್ರಮಗಳಿಲ್ಲ.
- ಎಸ್.ಸಚ್ಚಿದಾನಂದ, ಬಿಜೆಪಿ ಮುಖಂಡರು, ಶ್ರೀರಂಗಪಟ್ಟಣರೈತರ ನಿರೀಕ್ಷೆ ಹುಸಿ
ರೈತರ ನಿರೀಕ್ಷೆಗಳನ್ನ ಹುಸಿಗೊಳಿಸಿದ ಬಜೆಟ್. ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಸಂಕಷ್ಟ, ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡದೆ ಪ್ಯಾಚ್ ಆಫ್ ವರ್ಕ್ ಬಜೆಟ್ ಆಗಿದೆ. ರಾಜ್ಯದ ರೈತರು ಬೆಳೆ ನಷ್ಟ, ಸಾಲದ ಒತ್ತಡ, ನೀರಾವರಿ ಸಮಸ್ಯೆ ಹಾಗೂ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದ ಕಾರಣ ಸಂಕಷ್ಟದಲ್ಲಿದ್ದಾರೆ. ರೈತರಿಗೆ ನೇರ ಪ್ರಯೋಜನವಾಗುವ ಹೊಸ ಯೋಜನೆಗಳು, ಸಾಲ ಪರಿಹಾರ ಕ್ರಮಗಳು ಮತ್ತು ಕೃಷಿಗೆ ಹೆಚ್ಚಿನ ಅನುದಾನ ಘೋಷಿಸಬೇಕಾಗಿತ್ತು. ಆದರೆ ಈ ಬಜೆಟ್ನಲ್ಲಿ ರೈತರಿಗೆ ಸ್ಪಷ್ಟವಾದ ನೆರವು ಕಾಣಿಸುತ್ತಿಲ್ಲ.
- ಎನ್.ಎಲ್. ಭರತ್ ರಾಜ್, ಜಿಲ್ಲಾ ಸಂಚಾಲಕರು, ಜಿಲ್ಲಾ ಪ್ರಾಂತ ರೈತ ಸಂಘ