ಭ್ರಷ್ಟಾಚಾರವಿಲ್ಲದೆ ಶಿಕ್ಷಕರ ನೇರ ನೇಮಕಾತಿ ಮಾಡಿದ್ದ ಗೋವಿಂದೇಗೌಡರು: ರಾಜಶೇಖರ್

KannadaprabhaNewsNetwork | Published : Mar 7, 2025 11:45 PM

ಸಾರಾಂಶ

ನರಸಿಂಹರಾಜಪುರ, ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ 1996 ರಿಂದ 99 ರ ವರೆಗೂ ಯಾವುದೇ ಭ್ರಷ್ಟಾಚಾರವಿಲ್ಲದೆ ಲಕ್ಷಾಂತರ ಶಿಕ್ಷಕರನ್ನು ನೇರ ನೇಮಕಾತಿ ಮಾಡಿದ್ದರು ಎಂದು ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲ ಪ್ರತಿಭಾ ಪುರಸ್ಕಾರ ಸಮಿತಿ ಸದಸ್ಯ ರಾಜಶೇಖರ್ ತಿಳಿಸಿದರು.

- ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋವಿಂದೇಗೌಡರ ಬಾಲ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ 1996 ರಿಂದ 99 ರ ವರೆಗೂ ಯಾವುದೇ ಭ್ರಷ್ಟಾಚಾರವಿಲ್ಲದೆ ಲಕ್ಷಾಂತರ ಶಿಕ್ಷಕರನ್ನು ನೇರ ನೇಮಕಾತಿ ಮಾಡಿದ್ದರು ಎಂದು ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲ ಪ್ರತಿಭಾ ಪುರಸ್ಕಾರ ಸಮಿತಿ ಸದಸ್ಯ ರಾಜಶೇಖರ್ ತಿಳಿಸಿದರು.

ಶುಕ್ರವಾರ ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಸಚಿವ ಗೋವಿಂದೇಗೌಡರ ಬಾಲ ಪ್ರತಿಭಾ ಪುರಸ್ಕಾರ ವಿತರಣೆ, ಶಾರದಾ ಪೂಜೆ, 7 ನೇ ತರಗತಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರಿಗೆ ರಾಜ್ಯ ಸರ್ಕಾರ ದೇವರಾಜು ಅರಸು ಪ್ರಶಸ್ತಿ ಹಾಗೂ ₹1 ಲಕ್ಷ ನೀಡಿತ್ತು. ಆಗ ಗೋವಿಂದೇಗೌಡರು ತಾವೂ ಓದಿದ ಕಾನೂರು ಸರ್ಕಾರಿ ಶಾಲೆಗೆ ₹1 ಲಕ್ಷ ನೀಡಿದ್ದು ಆ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಪ್ರತಿ ವರ್ಷ ಬಡ್ಡಿ ಹಣದಲ್ಲಿ ಅತಿ ಹೆಚ್ಚು ಅಂಕ ಪಡೆದ 7 ನೇ ತರಗತಿಯ 4 ಮಕ್ಕಳಿಗೆ ಬಾಲ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಸಿ.ಆರ್.ಪಿ ಓಂಕಾರಪ್ಪ ಮಾತನಾಡಿ, ಶಿಕ್ಷಕರು ಪಾಠ ಮಾತ್ರ ಮಾಡುತ್ತಾರೆ. ಆದರೆ, ಶಾಲೆ ಸಂಪೂರ್ಣ ಪ್ರಗತಿಗೋಸ್ಕರ ಸಮುದಾಯದವರು, ಶಾಲೆ ಎಸ್‌.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು ಹಾಗೂ ಪೋಷಕರು ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಆಗ ಶಾಲೆ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಖಜಾಂಚಿ ಮಂಗಳ ಗೌರಮ್ಮ ಮಾತನಾಡಿ, ಕಾನೂರು ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಶಾಲೆ ಮಕ್ಕಳು ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪ್ರಗತಿ ಸಾಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯೋಪಾಧ್ಯಾಯಿನಿ ಮಂಜುಳಾ ಮಾತನಾಡಿ, ಶಾಲೆಗಳಲ್ಲಿ ಮಕ್ಕಳು ಹಾಗೂ ಶಿಕ್ಷಕಿಯರ ಸಂಬಂಧ ತಾಯಿ ಮತ್ತು ಮಕ್ಕಳ ಸಂಬಂಧದಂತೆ ವಾತ್ಸಲ್ಯಪೂರ್ಣವಾಗಿರುತ್ತದೆ. ಶಿಕ್ಷಕರು ಸಹ ತಮ್ಮ ಮಕ್ಕಳಂತೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ 7 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 4 ವಿದ್ಯಾರ್ಥಿಗಳಿಗೆ ಬಾಲ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಭೆ ಅಧ್ಯಕ್ಷತೆಯನ್ನು ಶಾಲೆ ಎಸ್‌.ಡಿ.ಎಂ.ಸಿ.ಅಧ್ಯಕ್ಷ ಎನ್‌.ಚಂದ್ರಶೇಖರ್‌ ವಹಿಸಿದ್ದರು. ಅತಿಥಿಗಳಾಗಿ ಎಸ್.ಡಿ.ಎಂ .ಸಿ.ಉಪಾಧ್ಯಕ್ಷೆ ಸುನೀತಾ, ಸದಸ್ಯೆ ಶುಭಲತ, ಗ್ರಾಪಂ ಅಧ್ಯಕ್ಷ ರತ್ನಾಕರ್,ಕೆ.ಎಂ. ಪ್ರದೀಪ್ ಸದಸ್ಯರಾದ ವಿಜಯಕುಮಾರ್, ವಿಶಾಂತಿ ಡಿಸೋಜ, ಸುಮಲತ, ಭಡ್ತಿ ಮುಖ್ಯೋಪಾಧ್ಯಾಯ ರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್, ಗ್ರಾಮದ ಹಿರಿಯರಾದ ಹಿಣಚಿ ಅಶೋಕಗೌಡ, ಶಿವರಾಜಕುಮಾರ್, ಸುಮಿತ್ರ ಇದ್ದರು.

Share this article