ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟದಿಂದ ಸರ್ಕಾರ ಪತನವಾಗುವುದು ಖಚಿತ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ, ಸಿಎಂ ಸಿದ್ದರಾಮಯ್ಯ, ಸಚಿವ ಜಿ. ಪರಮೇಶ್ವರ ಸೇರಿದಂತೆ ಅನೇಕರು ಸಿಎಂ ಕುರ್ಚಿಗೆ ಗುದ್ದಾಟ ನಡೆಸುತ್ತಿದ್ದಾರೆ. ಒಂದಲ್ಲ ಒಂದು ದಿನ ಅವರ ಮುಸುಕಿನ ಗುದ್ದಾಟ ಹೊರಗೆ ಬರುತ್ತದೆ ಎಂದು ನಾನು ಈ ಹಿಂದೆಯೇ ಹೇಳಿದ್ದೇ ಎಂದರು.
ಸಿಎಂ ರೇಸ್‌ನಲ್ಲಿ ಇರುವವರಿಂದ ಈಗಾಗಲೇ ಔತಣಕೂಟ ಆರಂಭವಾಗಿದೆ. ಕೆಲ ಸಚಿವರು ಸೇರಿ ಔತಣಕೂಟ ಮಾಡಿದರು. ಎಸ್ಸಿ, ಎಸ್ಟಿ ಶಾಸಕರು, ಮಂತ್ರಿಗಳ ಔತಣಕೂಟಕ್ಕೆ ಕೆಲವರು ಅಡ್ಡಗಾಲು ಹಾಕಿದರು. ಅಡ್ಡಗಾಲು ಹಾಕುವ ಕೆಲಸವನ್ನು ಡಿ.ಕೆ. ಶಿವಕುಮಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ಅವರ ಎರಡು ಗುಂಪುಗಳು ಎದ್ದು ಕಾಣುತ್ತಿವೆ. ಇವುಗಳ ಒಳಜಗಳದಿಂದಲೇ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂದು ಶೆಟ್ಟರ್ ಭವಿಷ್ಯ ನುಡಿದರು.
ಸಚಿವ ಪರಮೇಶ್ವರ ಡಿನ್ನರ್ ಮೀಟಿಂಗ್ ಬ್ರೇಕ್ ಹಾಕುವುದರ ಹಿಂದೆ ರಾಜಕೀಯ ಅಡಗಿದೆ. ಡಿಸಿಎಂ ಡಿ.ಕೆ. ಶಿವಕುಮಾರಗೆ ತಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಅನಿಸಿದೆ. ಹೀಗಾಗಿ ಅವರು ಶತ್ರು ಸಂಹಾರದ ಪೂಜೆ-ಪುನಸ್ಕಾರ ಆರಂಭಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಬಯಲಲ್ಲೇ ಗುದ್ದಾಟ ನಡೆಯುತ್ತದೆ ಎಂದರು.
ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕಾರಣ ಹಾಗೂ ಔತಣಕೂಟದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ನಮ್ಮಲ್ಲಿನ ಸಮಸ್ಯೆಯನ್ನು ಸರಿಪಡಿಸುವ ಕೆಲಸವನ್ನು ಬಿಜೆಪಿ ಹೈಕಮಾಂಡ್ ಮಾಡುತ್ತದೆ ಎಂದು ಶೆಟ್ಟರ್ ಹೇಳಿದರು.
ಶಾ ವಿರುದ್ಧ ಸುಳ್ಳು ಆರೋಪ
ಕಾಂಗ್ರೆಸ್ ದೇಶದ ಸಂವಿಧಾನ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಲೆ ಬರುತ್ತಿದೆ. ಅಂಬೇಡ್ಕರ್ ಅವರ ವಿಚಾರಧಾರೆ, ಮಾರ್ಗದರ್ಶನ ಹಾಗೂ ಸಂವಿಧಾನ ಪಾಲನೆಯನ್ನು ಬಿಜೆಪಿ ಮಾಡಿಕೊಂಡು ಬರುತ್ತಿದೆ. ಇದು ದೇಶದ ಜನತೆಗೂ ಗೊತ್ತಿದೆ. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ದೂರಿದರು.