ಓಪಿಎಸ್ ಜಾರಿಗೊಳಿಸುವ ನಿರ್ಧಾರಕ್ಕೆ ಸರ್ಕಾರ ಬದ್ದ: ಸಚಿವ ಎಸ್. ಮಧು ಬಂಗಾರಪ್ಪ

KannadaprabhaNewsNetwork |  
Published : May 19, 2025, 12:04 AM IST
ಪೋಟೋ: 18ಎಸ್‌ಎಂಜಿಕೆಪಿ03ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಶಾಖೆ ಶಿವಮೊಗ್ಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ  ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ( ಓಪಿಎಸ್)ಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವ ನಿರ್ಧಾರವನ್ನು ಪ್ರಕಟಿಸಲು ಸರ್ಕಾರ ಬದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು‌ ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ( ಓಪಿಎಸ್)ಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವ ನಿರ್ಧಾರವನ್ನು ಪ್ರಕಟಿಸಲು ಸರ್ಕಾರ ಬದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು‌ ಬಂಗಾರಪ್ಪ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಶಾಖೆ ಶಿವಮೊಗ್ಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಕಾನೂನುಗಳು, ಯೋಜನೆಗಳು, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸರ್ಕಾರಿ ನೌಕಕರಾದ ನೀವು ಆರೋಗ್ಯದಿಂದ, ಚೈತನ್ಯದಿಂದ ಇರಬೇಕು. ಇದಕ್ಕೆ ಇಂತಹ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಮಾಜಿ‌ ಮುಖ್ಯಮಂತ್ರಿ ದಿ.ಎಸ್‌.ಬಂಗಾರಪ್ಪನವರು ಜಾರಿಗೊಳಿಸಿದ ಗ್ರಾಮೀಣ ಕೃಪಾಂಕದಿಂದ ಹೆಚ್ಚು ಜನ ಸರ್ಕಾರಿ ನೌಕರಿಯನ್ನು ಪಡೆಯುವಂತಾಯಿತು. ಹಾಗೂ ಅವರು ಸಂಘಕ್ಕೆ ಬುನಾದಿ ಹಾಕಿಕೊಟ್ಟರು ಎಂದು ಸ್ಮರಿಸಿದ ಅವರು 2017 ರಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇದೇ ಸ್ಥಳಕ್ಕೆ ಬಂದಿದ್ದು, ಕ್ರೀಡಾಕೂಟವನ್ನು ಉದ್ಘಾಟಿಸಿದ್ದರು. ಹವಾಮಾನ ವೈಪರಿತ್ಯಗಳಿಂದ ಇಂದು ಬರಲು ಸಾಧ್ಯವಾಗಲಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾದಂತಹ ಎನ್‌ಪಿಎಸ್ ಬದಲು ಓಪಿಸ್ ಅನ್ನು ಶೀಘ್ರದಲ್ಲೇ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಜಾರಿಗೊಳಿಸುವ ಬಗ್ಗೆ ನಿರ್ಧಾರ ಪ್ರಕಟಿಸುವರು. 6ನೇ ವೇತನ ಮತ್ತು 7ನೇ ವೇತನ ಆಯೋಗವನ್ನು ಸಹ ಮಾನ್ಯ ಮುಖ್ಯ ಮಂತ್ರಿಗಳು ಜಾರಿಗೊಳಿಸಿರುವುದು ಹೆಮ್ಮೆಯ ವಿಷಯ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಾಜಿ‌ ಮುಖ್ಯಮಂತ್ರಿ ಯಡಿಯೂರಪ್ಪನವರು ನೌಕರರ ಪರವಾಗಿ ಸುಮಾರು 24 ಆದೇಶ ಜಾರಿ ಮಾಡಿದ್ದರು, ನೌಕರರ ಭವನಕ್ಕೆ ಒತ್ತು ನೀಡಿದ್ದರು. ನೌಕರರು ಒತ್ತಡ ರಹಿತರಾಗಿ, ಉತ್ತಮ ಸೇವೆ ನೀಡಬೇಕು. ನಿಮ್ಮಲ್ಲೂ ಅನೇಕ ಪ್ರತಿಭೆ ಇದ್ದು, ಅದು ಹೊರಹೊಮ್ಮಲು ಇದೊಂದು ಉತ್ತಮ ವೇದಿಕೆಯಾಗಿದೆ. ಇ- ಆಡಳಿತ ನಂ. 1 ಸ್ಥಾನ ಪಡೆಯಲು ನೀವು ಕಾರಣ ಎಂದು ಶ್ಲಾಘಿಸಿದರು.

ಸರ್ಕಾರಿ‌ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರು ಒತ್ತಡ ರಹಿತವಾಗಿ ಗುಣಮಟ್ಟದ ಸೇವೆ ಸಲ್ಲಿಸಬೇಕು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರಿ ನೌಕರರ ಸಂಘವು ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಕ್ರಿಯವಾಗಿ ಮಾಡುತ್ತಾ ಬಂದಿದೆ. ಈ ಕ್ರೀಡಾಕೂಟಕ್ಕೆ 3 ಕೋಟಿ ರು. ಅನುದಾನವನ್ನು ಸರ್ಕಾರ ನೀಡುವ ಭರವಸೆ ನೀಡಿದೆ. ಸಂಘಟನೆ ಸದೃಢವಾಗಿದೆ. ಪ್ರಸ್ತುತ 25 ಕೋಟಿ ರು. ಹಣ ಇದೆ. ಕಳೆದ 5 ವರ್ಷದಲ್ಲಿ 25 ಆದೇಶವಾಗಿದ್ದು, ನೌಕರರು ಸಂಘದ ಮೇಲೆ ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಆರೋಗ್ಯವೇ ಭಾಗ್ಯ. ಕ್ರೀಡೆಯಿಂದ ಉತ್ತಮ ಆರೋಗ್ಯ ಸಾಧ್ಯ. ಸಹಕಾರ, ಹೊಂದಾಣಿಕೆ, ಒಗ್ಗಟ್ಟು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಿಂದ ಸಾಧ್ಯ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್, ಭಾರತಿ ಶೆಟ್ಟಿ, ಬಲ್ಕೀಶ್ ಬಾನು ಮಾತನಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಮಾತನಾಡಿ, 5.5 ಲಕ್ಷ ಜನ ರಾಜ್ಯ ಸರ್ಕಾರಿ ನೌಕರರಿದ್ದು, 11 ಸಾವಿರ ಜನರು ರಾಜ್ಯ ಮಟ್ಟದ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಜಯ ಗಳಿಸಿದವರು ರಾಷ್ಟ್ರ ಮಟ್ಟದಲ್ಲಿ‌ ಸ್ಪರ್ಧಿಸಲಿದ್ದಾರೆ. ನೌಕರರು ಮುಖ್ಯವಾಗಿ ತಾಲೂಕು ಮಟ್ಟದಲ್ಲಿ ಸಕ್ರಿಯವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಎಲ್ಲ ನೌಕರರು ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಸಂಘ ಸಹ ಇದಕ್ಕೆ ಸಹಕಾರಿಯಾಗಿದ್ದು, ನೌಕರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡಿದ ರಾಜ್ಯ ಸರ್ಕಾರಿ ನೌಕರರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ರಾಜ್ಯ ಭೋವಿ‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಸೂಡಾ ಅಧ್ಯಕ್ಷ ಸುಂದರೇಶ್, ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಹೇಮಂತ್, ಎಸ್ ಪಿ ಮಿಥುನ್ ಕುಮಾರ್, ಇತರೆ ಅಧಿಕಾರಿಗಳು, ಮುಖಂಡರು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

------------------

ರಾಜ್ಯ ಸರ್ಕಾರ 7 ನೇ ವೇತನ ಜಾರಿ ಮಾಡಿರುವುದಕ್ಕೆ ಅಭಿನಂದನೆಗಳು. ಜೂನ್ ನಿಂದ ನೌಕರರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೆ ಬರಲಿದ್ದು, ಅದಕ್ಕೂ ಸಹ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ತವ್ಯನಿರತ ನೌಕರನ ಸಾವು ಸಂಭವಿಸಿದರೆ 1 ಕೋಟಿ ರು. ಕುಟುಂಬಕ್ಕೆ ನೀಡುವ ಯೋಜನೆಯನ್ನು ಸಂಘದಿಂದ ಜಾರಿ ಮಾಡಲಾಗುತ್ತಿದೆ. ಸರ್ಕಾರಿ ನೌಕರರಿಗೆ ಎನ್ ಪಿ ಎಸ್ ಬದಲು ಓಪಿಎಸ್ ಜಾರಿ ಮಾಡಿದಲ್ಲಿ ನೌಕರರು ಸರ್ಕಾರಕ್ಕೆ ಋಣಿಯಾಗಿರುತ್ತಾರೆ. ನಾವು ಅಭಿವೃದ್ಧಿಯಲ್ಲಿ ಮುಂದಿದ್ದೇವೆ. ಆದರೆ, ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಇನ್ನೂ ಜಾರಿ ಆಗಿಲ್ಲ. 2025-27 ನೇ ಸಾಲಿನಲ್ಲಿ ಕೇಂದ್ರ ಮಾದರಿ‌ ವೇತನ ಆಗಬೇಕು.

-ಸಿ.ಎಸ್.ಷಡಾಕ್ಷರಿ, ಸರ್ಕಾರಿ‌ ನೌಕರರ ಸಂಘದ ರಾಜ್ಯಾಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ