ಜವಳಿ ಪಾರ್ಕ್ ನಿರ್ಮಾಣ ಪ್ರಸ್ತಾವನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್: ಆನಂದ್‌

KannadaprabhaNewsNetwork |  
Published : Feb 11, 2024, 01:45 AM IST
 ಆನಂದ್‌ | Kannada Prabha

ಸಾರಾಂಶ

ಚೌಳ ಹಿರಿಯೂರಿನ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್ .ಆನಂದ್ ಮಾತನಾಡಿ,ತಾಲೂಕಿನ ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗ ದೊರಕಿಸಲು 25 ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಾಣ ಪ್ರಸ್ತಾವನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗ ದೊರಕಿಸಲು 25 ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಾಣ ಪ್ರಸ್ತಾವನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದೆ ಎಂದು ಶಾಸಕ ಕೆ.ಎಸ್ .ಆನಂದ್ ಹೇಳಿದರು.

ಶನಿವಾರ ಕಡೂರು ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ ಚೌಳ ಹಿರಿಯೂರಿನ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯುವಕರಿಗೆ ಉದ್ಯೋಗ ದೊರಕಿಸಲು 25 ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು. ಜವಳಿ ಪಾರ್ಕ್ ಉದ್ಘಾಟನೆ ನಂತರ ಪ್ರತಿ ಹೋಬಳಿ ಕೇಂದ್ರದಲ್ಲೂ ಗಾರ್ಮೆಂಟ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.

ತಾಲೂಕು ಆಡಳಿತ ಯಂತ್ರದ ಮೂಲಕ ಸರ್ಕಾರವೇ ನೇರವಾಗಿ ಜನರ ಬಳಿಗೆ ತೆರಳಿ ಮಹತ್ತರ ಗ್ಯಾರೆಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಮತ್ತು ಸ್ತ್ರೀ ಶಕ್ತಿಯನ್ನು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಲು ಮನೆ ಬಾಗಿಲಿಗೆ ಬಂದಿದೆ.

ಬಹು ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆ ಜಾರಿಗೆ ತಂದ ಕಾಂಗ್ರೆಸ್‌ ಸರ್ಕಾರ ಇದಾಗಿದೆ. ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದವರು, ವಿವಿಧ ಇಲಾಖೆಗಳ ಸಹಕಾರದಿಂದ ಹಬ್ಬದ ವಾತಾವರಣ ಕಲ್ಪಿಸಿ ತಮಗೆ ಸ್ವಾಗತ ಕೋರಿದ್ದು ಸಂತಸ ತಂದಿದೆ. ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ತಪ್ಪದೇ ಜಾರಿ ಮಾಡಿದೆ. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯಾದ್ಯಂತ ಶೇ. 90ರಷ್ಟು ಜನರು ಸವಲತ್ತು ಪಡೆಯುತ್ತಿದ್ದಾರೆ ಎಂದರು. --- ಬಾಕ್ಸ್ --- ಒಂದು ತಿಂಗಳಿಗೆ ಗೃಹಲಕ್ಷ್ಮಿಗ್ಯಾರಂಟಿಯಲ್ಲಿ 130 ಕೋಟಿ ರು. ಕಡೂರು ತಾಲೂಕಿನ ಕುಟುಂಬಗಳಿಗೆ ಸಿಗುತ್ತಿದೆ. ಚೌಳಹಿರಿಯೂರು ಹೋಬಳಿಯಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 4251 ಜನ ಅರ್ಜಿ ಹಾಕಿದ್ದು ಇದರಲ್ಲಿ 4018 ಜನರಿಗೆ ಸವಲತ್ತು ದೊರೆತು 80.30 ಲಕ್ಷ ರು. ಖಾತೆಗೆ ಜಮಾ ಆಗುತ್ತಿದೆ. 3750 ರೇಶನ್ ಕಾರ್ಡುಗಳು ಇದ್ದು 12.130 ಜನರಿಗೆ ಅಕ್ಕಿ ದುಡ್ಡು 21.38 ಲಕ್ಷ ರು. ನೀಡಲಾಗುತ್ತಿದೆ. ಕಡೂರು ತಾಲೂಕಿಗೆ 21 ಕೋಟಿ ರು. ಅನ್ನಭಾಗ್ಯಕ್ಕೆ ಖರ್ಚಾಗುತ್ತಿದೆ. ಗೃಹ ಜ್ಯೋತಿಯಲ್ಲಿ 3148 ಕುಟುಂಬಗಳ 20876 ಮನೆಗೆ ಉಚಿತ ವಿದ್ಯುತ್ ಸಿಕ್ಕಿದ್ದು ಇದಕ್ಕೆ 56 ಲಕ್ಷ ರು. ಖರ್ಚಾಗಲಿದೆ. ಶಕ್ತಿ ಯೋಜನೆಯಲ್ಲಿ ನಮ್ಮ ಅಕ್ಕ ತಂಗಿಯರು ಓಡಾಡುತ್ತಿದ್ದಾರೆ. ಶೀಘ್ರ ಹೊಸ ಬಸ್ಸುಗಳು ಬರಲಿದ್ದು ಚೌಳ ಹಿರಿಯೂರು ಭಾಗಕ್ಕೂ ಬಿಡಲಾಗುವುದು.

ಮಹಿಳೆಯರು ಸಂಕಷ್ಠದಲ್ಲಿರುವುದನ್ನು, ಮನಗಂಡು ಸರಕಾರ ವರ್ಷಕ್ಕೆ 29 ಸಾವಿರ ರು. ಸವಲತ್ತು ಪ್ರತಿ ಕುಟುಂಬಕ್ಕೆ ನೀಡುತ್ತಿದೆ. ಜನ ಸಾಮಾನ್ಯರು ಹಸಿವಿನಿಂದ ಇಬಾರದೆಂದು ಮುಖ್ಯಮಂತ್ರಿ ಗ್ಯಾರಂಟಿ ಯೋಜನೆಗಳ ಜಾರಿಗೆ ಮುಂದಾಗಿದ್ದು, ಫಲಾನುಭವಿ ಗಳೇ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳಬೇಕು ಎಂದರು.

ಬರಪೀಡಿತ ಗಡಿ ಗ್ರಾಮ ಚೌಳಹಿರಿಯೂರಲ್ಲಿ ಕುಡಿವ ನೀರಿಗೆ ತೊಂದರೆ ಇದೆ, ಭದ್ರಾ ಯೋಜನೆಯಿಂದ ಕುಕ್ಕಸಮುದ್ರ ಕೆರೆಗೆ ನೀರು ಹರಿಸುವ ಕುರಿತು ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅದಕ್ಕೆ ಸಂಭಂದ ಪಟ್ಟ ಕಾಮಗಾರಿ ಮುಂದುವರಿಸುವ ಕೆಲಸ ಮಾಡುತ್ತೇನೆ. ಇಂದು ಕ್ಷೇತ್ರದ ಪಂಚನ ಹಳ್ಳಿಯಲ್ಲಿ ಮತ್ತು ಕಡೂರಿನಲ್ಲೂ ನೋಂದಣಿ ಆರಂಭವಾಗಿದೆ ಎಂದರು.

ಶಾಸಕನಾಗಿ ಆಯ್ಕೆ ಮಾಡಿದ್ದು ಅದಕ್ಕೆ ಚ್ಯುತಿ ಬಾರದಂತೆ ರಸ್ತೆಗಳು, ಚೆಕ್ ಡ್ಯಾಮ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಸಂದಿ. ಚೌಳಹಿರಿಯೂರು, ಚಿಕ್ಕಬಳ್ಳೇಕೆರೆ, ಕಲ್ಕೆರೆ ಮತ್ತು ಅಂತರಘಟ್ಟೆ ಗ್ರಾಪಂ ಅಧ್ಯಕ್ಷ ಪ್ರಸನ್ನ, ರಘು, ತಹಸೀಲ್ದಾರ್ ಕವಿರಾಜ್ , ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್. ಪ್ರವೀಣ್, ಸುನಿಲ್,ವಿಜಯಕುಮಾರ್, ಹಾಜರಿದ್ದರು.

PREV

Recommended Stories

ಮಾಧ್ಯಮ ಸಾಧಕರಿಗೆ ನ್ಯೂ ಇಂಡಿಯನ್‌ ಟೈಮ್ಸ್‌ ಪ್ರಶಸ್ತಿ
ಡಿಕೆಶಿ ಅವರು ಬಿಜೆಪಿಗೆ ಹೋಗುತ್ತಾರೆ ಎಂಬ ಸಂಶಯ ಸರಿಯಲ್ಲ : ಸತೀಶ್‌