ಸರ್ಕಾರ ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುತ್ತಿದೆ: ಸಾ.ರಾ.ಮಹೇಶ್ ಆರೋಪ

KannadaprabhaNewsNetwork |  
Published : Mar 19, 2026, 01:15 AM IST
36 | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿತ್ತು. ಆದರೆ, ಸರ್ಕಾರ ಈಗ ಮಾಡುತ್ತಿರುವುದಾದರೂ ಏನು? ದೇವಸ್ಥಾನದಲ್ಲೂ ಲಂಚ ಪಡೆಯುತ್ತಿದೆ. ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆದ ಧನುರ್ಮಾಸದ ಜಾತ್ರಾ ಮಹೋತ್ಸವದಲ್ಲಿ ಕೇವಲ ಪೇಂಟಿಂಗ್ ಕೆಲಸಕ್ಕೆ ಜಿ.ಎಸ್‌.ಟಿ ಹೊರತುಪಡಿಸಿ 5,27,639 ರು. ಬಿಲ್ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ, ಈಗ ಭ್ರಷ್ಟಾಚಾರದಲ್ಲೇ ಮುಳುಗಿದ್ದು ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುವ ದರಿದ್ರ ಸ್ಥಿತಿಗೆ ತಲುಪಿದೆ ಎಂದು ಮಾಜಿ ಸಚಿವ, ಜೆಡಿಎಸ್‌ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿತ್ತು. ಆದರೆ, ಸರ್ಕಾರ ಈಗ ಮಾಡುತ್ತಿರುವುದಾದರೂ ಏನು? ದೇವಸ್ಥಾನದಲ್ಲೂ ಲಂಚ ಪಡೆಯುತ್ತಿದೆ. ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆದ ಧನುರ್ಮಾಸದ ಜಾತ್ರಾ ಮಹೋತ್ಸವದಲ್ಲಿ ಕೇವಲ ಪೇಂಟಿಂಗ್ ಕೆಲಸಕ್ಕೆ ಜಿ.ಎಸ್‌.ಟಿ ಹೊರತುಪಡಿಸಿ 5,27,639 ರು. ಬಿಲ್ ಮಾಡಲಾಗಿದೆ. ಈ ಹಿಂದೆ ಇದೇ ಕೆಲಸಕ್ಕೆ ಗರಿಷ್ಠ ಎಂದರೆ ಕೇವಲ 1 ಲಕ್ಷ ರು. ವೆಚ್ಚವಾಗುತ್ತಿತ್ತು ಎಂದರು.

ಇನ್ನು ಲೈಟಿಂಗ್, ಸೌಂಡ್ ಸಿಸ್ಟಮ್ ಮತ್ತು ಬ್ಯಾರಿಕೇಡ್ ವ್ಯವಸ್ಥೆಗೆ 14.74 ಲಕ್ಷ ರು. ಬಿಲ್ ಮಾಡಿದ್ದಾರೆ. ನಿರ್ಮಿತಿ ಕೇಂದ್ರದಿಂದ ಈ ಜಾತ್ರೆಗಾಗಿ 32 ಲಕ್ಷ ರು. ತೆಗೆದುಕೊಳ್ಳಲಾಗಿದೆ. ರೈತರು ಜಾನುವಾರುಗಳನ್ನು ಕಟ್ಟುತ್ತಾರೆ. ವ್ಯಾಪಾರಿಗಳು ಅಂಗಡಿಗಳನ್ನು ಹಾಕುತ್ತಾರೆ. ಅಂದ ಮೇಲೆ 32 ಲಕ್ಷ ರೂ. ಖರ್ಚು ಮಾಡಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.

2019ರಲ್ಲಿ ಈ ಜಾತ್ರೆಗೆ 4.47 ಲಕ್ಷ ರು. 2020-21 ರಲ್ಲಿ ಕೋವಿಡ್‌ ಸಮಯವಾದ್ದರಿಂದ ಕೇವಲ 21 ಸಾವಿರ ರು. ವೆಚ್ಚ ಮಾಡಲಾಗಿತ್ತು. ನಾನು ಶಾಸಕನಾಗಿದ್ದಾಗ 2022- 23ರಲ್ಲಿ 3,74600 ರು. ಖರ್ಚು ಮಾಡಲಾಗಿತ್ತು. ಈ ಬಾರಿ 32 ಲಕ್ಷ ಎಂದರೆ ಸರ್ಕಾರ ಎಷ್ಟು ಪರ್ಸೆಂಟ್ ಭ್ರಷ್ಟಾಚಾರ ಮಾಡುತ್ತಿದೆ ಎಂದು ಜನರೇ ತೀರ್ಮಾನಿಸಬೇಕು. ಅಲ್ಲದೇ, ದೇವಸ್ಥಾನದ ಅಭಿವೃದ್ಧಿಗೆ ಬಳಸಬೇಕಿದ್ದ ಸುಮಾರು 80 ಲಕ್ಷ ರು. ಹುಂಡಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಈ ರೀತಿಯಾದರೆ ರಾಜ್ಯದ ಗತಿಯೇನು?, ಈ ಭ್ರಷ್ಟಾಚಾರಗಳ ಹಿಂದೆ ಯಾರಿದ್ದಾರೆ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

17 ಬಾರಿ ದಾಖಲೆಯ ಬಜೆಟ್ ಮಂಡಿಸಿದ್ದೇನೆ. ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಈ ಬಾರಿಯ ಬಜೆಟ್‌ ನಲ್ಲಿ ಸರ್ಕಾರ ದಿವಾಳಿ ಆಗಿರುವುದು ತಿಳಿಯುತ್ತದೆ. 2018 -19 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಜೆಟ್‌ನ ಶೇ. 24ರಷ್ಟು ಹಣ ಅಭಿವೃದ್ಧಿ ಕೆಲಸಗಳಿಗೆ (ಬಂಡವಾಳ ವೆಚ್ಚ) ಮೀಸಲಿಡಲಾಗುತ್ತಿತ್ತು. ಆದರೆ, 2026 -27ರ ಬಜೆಟ್‌ ನಲ್ಲಿ ಇದು ಕೇವಲ ಶೇ. 16.7ಕ್ಕೆ ಕುಸಿದಿದೆ. ಅಂದರೆ ಅಭಿವೃದ್ಧಿ ಕೆಲಸಗಳಿಗೆ ಶೇ.10ರಷ್ಟು ಹಣ ಕಡಿತವಾಗಿದೆ ಎಂದರು.

ಹಿಂದಿನ ಎಲ್ಲಾ ಸಿಎಂಗಳು ಸೇರಿ ಮಾಡಿದ್ದ ಒಟ್ಟು ಸಾಲ 3.27 ಲಕ್ಷ ಕೋಟಿ ರು. ಇದನ್ನು ಸಿದ್ದರಾಮಯ್ಯ 8.24 ಲಕ್ಷ ಕೋಟಿಗೆ ಏರಿಸಿದ್ದಾರೆ. ಹಿಂದೆ ಪ್ರತಿ ವ್ಯಕ್ತಿಯ ಮೇಲೆ 50 ಸಾವಿರ ರು. ಸಾಲವಿದ್ದರೆ, ಇಂದು ಹುಟ್ಟುವ ಮಗುವಿನ ತಲೆಯ ಮೇಲೂ 1.18 ಲಕ್ಷ ರು. ಸಾಲವಿದೆ. ಸಿದ್ದರಾಮಯ್ಯ ವೋಟಿನ ದುರಾಸೆಗೆ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇನ್ನಾದರೂ ಎಚ್ಚೆತ್ತುಕೊಳ್ಳಿ. ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟು ಅಭಿವೃದ್ಧಿ ಮಾಡಿ. ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತನ್ನಿ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಕಡೆ ಗಮನಹರಿಸಿ ಎಂದು ಹೇಳಿದರು.

ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಶುಲ್ಕ ಏರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹಿಂದೆ ಶುಲ್ಕವಿರಲಿಲ್ಲ. ಈಗ 10 ರು. ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ 5 ರು. ಇದ್ದ ಶುಲ್ಕವನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆಯಲ್ಲಿದ್ದ ಸುಮಾರು 60 ಲಕ್ಷ ರು. ಹಣ ಎಲ್ಲಿ ಖರ್ಚಾಗಿದೆ ಎಂಬ ಮಾಹಿತಿಯೇ ಇಲ್ಲ. ಸಾಲಿಗ್ರಾಮ ಗ್ರಾಪಂ ಪಿಡಿಒ ಒಬ್ಬರನ್ನು ರಜೆಯ ಮೇಲೆ ಕಳುಹಿಸಿ ಕೇವಲ 15 ದಿನಗಳಲ್ಲಿ ಹಳೆಯ ದಿನಾಂಕ ಹಾಕಿ ಗ್ರಾಪಂ ಖಾತೆಯಿಂದ 44 ಲಕ್ಷ ರು. ಹಣ ಡ್ರಾ ಮಾಡಲಾಗಿದೆ. ಇದು ಈ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯಂಗ ಸ್ನಾನಕ್ಕೆ ಒತ್ತು ನೀಡುವುದು ಅಗತ್ಯ: ಡಾ.ಚಂದ್ರಕಾಂತ್ ನಾಗಸಮುದ್ರ
2024ನೇ ಸಾಲಿನ ಶ್ರೀಶಿವರಾತ್ರೀಶ್ವರ ಪ್ರಶಸ್ತಿಗೆ ಪ್ರೊ.ಬಾಲಚಂದ್ರ ಜಯಶೆಟ್ಟಿ ಆಯ್ಕೆ