ಕನ್ನಡಪ್ರಭ ವಾರ್ತೆ ಕಲಬುರಗಿ
ಸಾಮಾನ್ಯವಾಗಿ ಶೈಕ್ಷಣಿಕ ಪ್ರವಾಸವೆಂದು ಶಾಲಾ ಮಕ್ಕಳನ್ನ ಬಸ್, ರೈಲಿನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವುದನ್ನು ಕಂಡಿದ್ದೇವೆ. ಆದರೆ ಕಲಬುರಗಿ ಜಿಲ್ಲೆಯ ಆಳಂದ ಗಡಿಗೆ ಹೊಂದಿಕೊಂಡಿರುವ ಅಕ್ಕಲಕೋಟೆ ತಾಲೂಕಿನಲ್ಲಿ ಬರುವ ಮೈಂದರ್ಗಿ ಗ್ರಾಮದ ಕನ್ನಡ ಭಾಷೆಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ತಮ್ಮ ಶಾಲಾ ಮಕ್ಕಳನ್ನ ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಸರ್ವರ ಗಮನ ಸೆಳೆದಿದ್ದಾರೆ.ಮೈಂದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ವಿಮಾನ ಭಾಗ್ಯ ದೊರಕಿದೆ. ಮಕ್ಕಳಿಂದ ಅಲ್ಪ ಹಣ ಪಡೆದು ಶಾಲೆಯ ಮುಖ್ಯಗುರು ಮಹಾಂತೇಶ್ವರ ಕಟ್ಟೀಮನಿ ಉಳಿದಂತೆ ಹಣವನ್ನು ತಾವೇ ಹಾಕಿ ಮಕ್ಕಳಿಗೆಲ್ಲರಿಗೂ ವಿಮಾನದಲ್ಲಿ ಹಾರುವ ಅವಕಾಶ ಕಲ್ಪಿಸಿದ್ದಾರೆ.
ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಗ್ರಾಮದಿಂದ ಸೊಲ್ಲಾಪುರಕ್ಕೆ ಹೋದ ಮಕ್ಕಳು ಅಲ್ಲಿಂದ ರೈಲಿನ ಮೂಲಕ ಮುಂಬೈ ಸೇರಿದ್ದಾರೆ. ಅಲ್ಲಿ ಗೇಟ್ ವೇ ಆಫ್ ಇಂಡಿಯಾ, ಸಮುದ್ರ, ಸಿದ್ದಿ ವಿನಾಯಕ ಮಂದಿರ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಮಕ್ಕಳಿಗೆ ತೋರಿಸಿದ್ದಾರೆ.ನಂತರ ಅಲ್ಲಿಂದ ಮಕ್ಕಳನ್ನು ವಿಮಾನದ ಮೂಲಕ ನೇರವಾಗಿ ದೆಹಲಿಗೆ ಕರೆದೊಯ್ದಿದ್ದಾರೆ. ದೆಹಲಿಯಲ್ಲಿ ಸಂಸತ್ ಭವನ, ಕೆಂಪುಕೋಟೆ, ರಾಷ್ಟ್ರಪತಿ ಭವನ, ಇಂಡಿಯಾ ಗೇಟ್ ನೋಡಿ ಮಕ್ಕಳು ಸಂಭ್ರಮಿಸಿದ್ದಾರೆ.
ಮಕ್ಕಳಿಂದ ಅಲ್ಪ ಹಣ ಸಂಗ್ರಹಿಸಿದ್ದೇನೆ. ಉಳಿದ ಹಣವನ್ನ ನನ್ನ ಜೇಬಿನಿಂದ ಹಾಕುವೆ. ಶಾಲೆಯಲ್ಲಿ ಯಾರಿಗೂ ಯಾವುದೇ ರೀತಿಯ ಭಾರ ಆಗದಂತೆ ನಾನು ಶ್ರಮಿಸಿರುವೆ, ನಾನು ಈ ಮುಂಚೆ ಸೊಲ್ಲಾಪುರದಿಂದ ಬೆಂಗಳೂರಿಗೆ ಮಕ್ಕಳನ್ನ ಕರೆದೊಯ್ದಿದ್ದೆ. ಆಗಲೂ ಮಕ್ಕಳು ಖುಷಿ ಪಟ್ಟಿದ್ದರು. ಈಗಂತೂ ವಿಮಾನದಲ್ಲೇ ಹಾರಾಟ ನಡೆಸಿರೋ ಮಕ್ಕಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಮಕ್ಕಳ ಖುಷಿ ಕಂಡು ನನಗೂ ಸಂತಸವಾಗಿದೆ ಎನ್ನುತ್ತಾರೆ ಮುಖ್ಯಗುರು ಮಾಹಂತೇಶ್ವರ ಕಟ್ಟೀಮನಿ.ಸರಕಾರಿ ಶಾಲೆ, ಅದರಲ್ಲೂ ಗಡಿಯಲ್ಲಿರೋ ಶಾಲೆಗಳನ್ನು ಅಲಕ್ಷಿಸೋದೇ ಅಧಿಕ. ಈ ಹಂತದಲ್ಲಿ ಅಲ್ಲಿನ ಸಾಲೆಯ ಮಕ್ಕಳನ್ನೆಲ್ಲ ವಿಮಾನದಲ್ಲಿ ದರಾಷ್ಟ್ರ ರಾಜಧಾನಿ ದೆಹಲಿಗೆ ಕರೆದೊಯ್ದು ಹೊಸ ಅನುಭವ ನೀಡಿರುವ, ಶೈಕ್ಷಣಿಕವಾಗಿ ಮಕ್ಕಳಿಗೆ ಅಲ್ಲಿರುವ ಎಲ್ಲಾ ಪ್ರಮುಖ ಸ್ಥಳಗಳನ್ನು ಮುಖ್ಯೋಪಾಧ್ಯಾಯ ಕಟ್ಟೀಮನಿ ತೋರಿಸುವ ಮೂಲಕ ಮಕ್ಕಳ, ಊರವರ ಹಾಗೂ ಪೋಷಕರಎಲ್ಲರ ಮನ ಗೆದ್ದಿದ್ದಾರೆ.