ದಲಿತ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಮುಂದಾಗಲಿ: ಕೋಟೆ ಶ್ರೀನಿವಾಸ್

KannadaprabhaNewsNetwork |  
Published : Jan 28, 2025, 12:45 AM IST
೨೭ಕೆಎಲ್‌ಆರ್-೧೨ಜಿಲ್ಲೆಯಲ್ಲಿ ದಲಿತ ನಿಷ್ಠಾವಂತ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಹಾಗೂ ವಾಲ್ಮೀಕಿ ಸಮುದಾಯದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ದ ಅವಹೇಳನಕಾರನನ್ನು ಬಂಧಿಸುವಂತೆ ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಎಡಿಸಿ ಮಂಗಳಾ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮೊದಲಿನಿಂದಲೂ ದಕ್ಷ ಮತ್ತು ನಿಷ್ಠಾವಂತ ದಲಿತ ಅಧಿಕಾರಿಗಳ ಮೇಲೆ ವಿನಃ ಕಾರಣ ಸುಳ್ಳು ಆಪಾದನೆಗಳು, ಕಿರುಕುಳ ನಡೆಯುತ್ತಿದ್ದು, ಪ್ರಾಮಾಣಿಕವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಅಧಿಕಾರಿಗಳಿಗೆ ಬೆಲೆ ಇಲ್ಲವಾಗಿವೆ.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯಲ್ಲಿ ದಲಿತ, ನಿಷ್ಠಾವಂತ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಹಾಗೂ ವಾಲ್ಮೀಕಿ ಸಮುದಾಯದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ದ ಅವಹೇಳನ ಮಾಡಿದವರನ್ನು ಬಂಧಿಸುವಂತೆ ಒತ್ತಾಯಿಸಿ, ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಎಡಿಸಿ ಮಂಗಳಾ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ವಾಲ್ಮೀಕಿ ಸಮುದಾಯದ ಮುಖಂಡ ಕೋಟೆ ಶ್ರೀನಿವಾಸ್ ಮಾತನಾಡಿ, ದೇಶದಲ್ಲಿಯೇ ದಲಿತರು ಹೆಚ್ಚು ಇರುವ ಜಿಲ್ಲೆಗಳಲ್ಲಿ ಕೋಲಾರ ಎರಡನೇ ಸ್ಥಾನದಲ್ಲಿ ಇದೆ. ಇಂತಹ ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದೆ, ದಲಿತ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ನಿರಂತರವಾಗಿ ಅಡ್ಡಿಯುಂಟು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಉಪವಿಭಾಗಾಧಿಕಾರಿ ಡಾ.ಮೈತ್ರಿ ವಿರುದ್ಧ ನಡೆದಿರುವ ಘಟನೆಗಳೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಸಂವಿಧಾನದಡಿ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿರುವ ಅದೆಷ್ಟೋ ದಕ್ಷ ಮತ್ತು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳ ಮೇಲೆ ದೌರ್ಜನ್ಯ, ಕಿರುಕುಳ, ಹತ್ಯೆಗಳು ನಡೆದಿದ್ದು, ಅವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಅದೆಷ್ಟೋ ಕಾಣದ ಕೈಗಳು ಅವರ ವಿರುದ್ಧ ಕೆಲಸ ಮಾಡುತ್ತಿವೆ. ಜಿಲ್ಲೆಯಲ್ಲಿ ಎಸಿಯಾಗಿ ಅಧಿಕಾರ ವಹಿಸಿಕೊಂಡ ದಕ್ಷ, ನಿಷ್ಠಾವಂತ ಮತ್ತು ಪ್ರಾಮಾಣಿಕ ಅಧಿಕಾರಿ ಡಾ.ಮೈತ್ರಿ ಎಲ್ಲಾ ವರ್ಗದ ರೈತರ ಜಮೀನಿನ ಸಮಸ್ಯೆಗಳನ್ನು , ಪಿಟಿಸಿಎಲ್ ಕಾಯ್ದೆಯ ಪ್ರಕರಣಗಳನ್ನು ಸಮರ್ಪಕವಾಗಿ ಬಗೆಹರಿಸುತ್ತಿದ್ದು, ಇಂತಹ ಅಧಿಕಾರಿಯ ವಿರುದ್ಧ ಕಾಣದ ಕೈಗಳ ಮೂಲಕ ಅಪಪ್ರಚಾರ ನಡೆಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ದಲಿತ ಮುಖಂಡ ಸಂಗಸಂದ್ರ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಮೊದಲಿನಿಂದಲೂ ದಕ್ಷ ಮತ್ತು ನಿಷ್ಠಾವಂತ ದಲಿತ ಅಧಿಕಾರಿಗಳ ಮೇಲೆ ವಿನಃ ಕಾರಣ ಸುಳ್ಳು ಆಪಾದನೆಗಳು, ಕಿರುಕುಳ ನಡೆಯುತ್ತಿದ್ದು, ಪ್ರಾಮಾಣಿಕವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಅಧಿಕಾರಿಗಳಿಗೆ ಬೆಲೆ ಇಲ್ಲವಾಗಿವೆ. ಎಸಿ ಡಾ. ಮೈತ್ರಿ ಅವರಿಗೆ ನಿರ್ಭಯವಾಗಿ ಕೆಲಸ ಮಾಡಲು ಅವರ ಬೆನ್ನಿಗೆ ಜಿಲ್ಲಾಡಳಿತವು ನಿಲ್ಲುವಂತೆ ಒತ್ತಾಯಿಸಿದರು.

ಮಹರ್ಷಿ ವಾಲ್ಮೀಕಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷೆ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ಮಂಜುಳಾ ಶ್ರೀನಿವಾಸ್ ಮಾತನಾಡಿ, ವಾಲ್ಮೀಕಿ ಸಮುದಾಯದ ಅಗ್ರಗಣ್ಯ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಮಾಲೂರು ತಾಲೂಕಿನ ನಾರಾಯಣಸ್ವಾಮಿ ಎಂಬುವವರು ಏಕವಚನದಲ್ಲಿ ನಿಂದಿಸಿದ್ದು, ಕೂಡಲೇ ಸ್ವಯಂ ದೂರು ದಾಖಲಿಸಿ ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ವಾಲ್ಮೀಕಿ ಮತ್ತು ದಲಿತ ಸಂಘಟನೆಗಳ ಮುಖಂಡರಾದ ಹಾರೋಹಳ್ಳಿ ವೇಣು ವಹಿಸಿದ್ದರು. ಕೊಳ್ಳೂರು ವೆಂಕಟ್, ನರಸಿಂಹಪ್ಪ, ಛತ್ರಕೋಡಿಹಳ್ಳಿ ಸುರೇಶ್, ಹೂಹಳ್ಳಿ ಹನುಮಪ್ಪ, ಶಿವಕುಮಾರ್, ವೆಂಕಟಸ್ವಾಮಿ, ಪ್ರವೀಣ್, ಸುರ್ಜೀತ್, ಸುರೇಶ್, ಶ್ರೀನಿವಾಸ್, ನಾಗರಾಜ್, ಗೋವಿಂದಪ್ಪ, ಶೇಷಾದ್ರಿ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌