ನಿಯಮ ಮೀರಿ ಸಾಲ ವಸೂಲಿ ಮಾಡದಂತೆ ಮೈಕ್ರೋ ಫೈನಾನ್ಸ್‌ಗಳಿಗೆ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ

KannadaprabhaNewsNetwork | Published : Jan 28, 2025 12:45 AM

ಸಾರಾಂಶ

ಮೈಕ್ರೋಫೈನಾನ್ಸ್‌ಗಳು ಬಡ್ಡಿ ವಿಧಿಸುವ ಬಗ್ಗೆ ಆರ್‌ಬಿಐನ ಸ್ಪಷ್ಟ ಆದೇಶ ಇಲ್ಲದಿದ್ದರೂ ಶೇ. 25ರಷ್ಟು ಬಡ್ಡಿ ವಿಧಿಸಲು ಅಧಿಕಾರ ಕೊಟ್ಟವರ್ಯಾ ರು? ನಿಮ್ಮ ತಪ್ಪಿನಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಜನಸಾಮಾನ್ಯರು ಜಿಲ್ಲಾಡಳಿತ ಸತ್ತು ಹೋಗಿದೆ ಎಂದೆಲ್ಲಾ ಮಾತನಾಡುತ್ತಾರೆ. ಆದ್ದರಿಂದ ನಿಯಮ ಮೀರಿ ಸಾಲ ವಸೂಲಿ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಾಕೀತು ಮಾಡಿದರು.

ಹಾವೇರಿ: ಮೈಕ್ರೋಫೈನಾನ್ಸ್‌ಗಳು ಬಡ್ಡಿ ವಿಧಿಸುವ ಬಗ್ಗೆ ಆರ್‌ಬಿಐನ ಸ್ಪಷ್ಟ ಆದೇಶ ಇಲ್ಲದಿದ್ದರೂ ಶೇ. 25ರಷ್ಟು ಬಡ್ಡಿ ವಿಧಿಸಲು ಅಧಿಕಾರ ಕೊಟ್ಟವರ‍್ಯಾರು? ನಿಮ್ಮ ತಪ್ಪಿನಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಜನಸಾಮಾನ್ಯರು ಜಿಲ್ಲಾಡಳಿತ ಸತ್ತು ಹೋಗಿದೆ ಎಂದೆಲ್ಲಾ ಮಾತನಾಡುತ್ತಾರೆ. ಆದ್ದರಿಂದ ನಿಯಮ ಮೀರಿ ಸಾಲ ವಸೂಲಿ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಾಕೀತು ಮಾಡಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸಗಳು ಆರ್‌ಬಿಐ ಮಾರ್ಗಸೂಚಿ ಉಲ್ಲಂಘಿಸಿ ಒಬ್ಬನೇ ಗ್ರಾಹಕನಿಗೆ ಹತ್ತಾರು ಫೈನಾನ್ಸ್‌ಗಳು ಲಕ್ಷಾಂತರ ರು. ಸಾಲ ಕೊಟ್ಟು, ಈಗ ನಿಯಮ ಮೀರಿ ವಸೂಲಾತಿಗೆ ಕ್ರಮ ಕೈಗೊಂಡಿವೆ. ಇವುಗಳ ನ್ಯೂನ್ಯತೆ ಕುರಿತು ಡಿಸಿ, ಎಸ್ಪಿ ಹಾಗೂ ಲೀಡ್ ಬ್ಯಾಂಕ್‌ನವರು ಆರ್‌ಬಿಐಗೆ ಪತ್ರ ಬರೆಯಿರಿ ಎಂದು ಸೂಚಿಸಿದರು.

ಒಬ್ಬ ವ್ಯಕ್ತಿಯ ಸಾಲ ತುಂಬುವ ಶಕ್ತಿಯನ್ನು ನೋಡದೇ ಐದಾರು ಮೈಕ್ರೋಫೈನಾನ್ಸಗಳು ಸಾಲ ಕೊಟ್ಟಿವೆ. ಹಲಗೇರಿಯ ವ್ಯಕ್ತಿಯೊಬ್ಬರಿಗೆ 13 ಸಂಸ್ಥೆಗಳು ಸಾಲ ಕೊಟ್ಟಿವೆ. ಈಗ ಏಕಾಏಕಿ ಸಾಲ ಕಟ್ಟಲು ಕಿರಿಕಿರಿ ಮಾಡಿದರೆ ಹೇಗೆ? ಎಂದು ಹರಿಹಾಯ್ದರು.ಸಭೆಯಲ್ಲಿ ಮೈಕ್ರೋಫೈನಾನ್ಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ 1.97ಲಕ್ಷ ಗ್ರಾಹಕರು ಈ ಫೈನಾನ್ಸಗಳಲ್ಲಿ ವ್ಯವಹರಿಸುತ್ತಿದ್ದು, 1235 ಕೋಟಿ ರು. ಸಾಲ ವಿತರಿಸಲಾಗಿದೆ. ಇಷ್ಟೇ ಪ್ರಮಾಣದಲ್ಲಿ ಬಡ್ಡಿ ಆಕರಿಸಬೇಕು ಎಂಬ ನಿಯಮವಿಲ್ಲ, ಯಾವುದೇ ಜಾಮೀನು ಇಲ್ಲದೇ ಮಹಿಳೆಯರ ಗುಂಪಿನ ನಂಬಿಕೆ ಸಾಲ ನೀಡಲಾಗುತ್ತಿದೆ ಎಂದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸಾಲ ಕೊಟ್ಟು ವಸೂಲಾತಿಗೆ ಯಾವುದೇ ಕಿರುಕುಳ ನೀಡಬಾರದು ಎಂಬ ನಿಯಮ ಇದೆ. ಆದರೆ, ಇದು ಪಾಲನೆ ಆಗುತ್ತಿಲ್ಲ ಎಂಬ ದೂರುಗಳಿವೆ ಎಂದರು.ಎಸ್ಪಿ ಅಂಶುಕುಮಾರ ಮಾತನಾಡಿ, ಮೈಕ್ರೋಫೈನಾನ್ಸಗಳು ಆರ್‌ಬಿಐ ನಿಯಮ ಪಾಲಿಸುತ್ತಿಲ್ಲ, ರಾತ್ರಿ ವೇಳೆಯೂ ಮನೆಗಳಿಗೆ ಹೋಗಿ ಸಾಲ ಕಟ್ಟುವಂತೆ ಒತ್ತಾಯಿಸುತ್ತಿರುವ ಪ್ರಕರಣಗಳು ನಮ್ಮ ಗಮನಕ್ಕೆ ಬರುತ್ತಿವೆ ಎಂದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸಾಲ ಬೇಕಾದವರು ಬ್ಯಾಂಕಿಗೆ ಹೋಗಿ ಸಾಲ ತಗೋತಾರೆ ಬಿಡಿ. ಸುಮ್ನೆ ಸಾಲ ಕೊಟ್ಟು ಈಗ ವಸೂಲಿಗೆ ಕಿರುಕುಳ ಕೊಡುತ್ತಿದ್ದೀರಿ. ಇದಕ್ಕೆ ಜನಪ್ರತಿನಿಧಿಗಳು, ಸರ್ಕಾರ ಉತ್ತರ ಕೊಡಬೇಕು. ಇದೆಲ್ಲಾ ಏಕೆ ಬೇಕು ಎಂದು ಕಿಡಿಕಾರಿದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮೈಕ್ರೋಫೈನಾನ್ಸನವರ ಕಿರುಕುಳದಿಂದ ಬೇಸತ್ತು ಗುಡ್ಡದ ಬೇವಿನಹಳ್ಳಿ ಗ್ರಾಮದ ಅನೇಕರು ಊರು ಬಿಟ್ಟು ಹೋಗಿದ್ದಾರೆ. ಅವರನ್ನು ಮರಳಿ ಗ್ರಾಮಕ್ಕೆ ಕರೆಸಿ. ಮಾನವೀಯತೆಯಿಂದ ಸಾಲ ವಸೂಲಿ ಮಾಡಿ. ಸಾಲ ವಸೂಲಿ ಮಾಡುವಾಗ ಮಾನವೀಯತೆ ಮರೆಯಬೇಡಿ ಎಂದರು.ಆಗ ಪ್ರತಿಕ್ರಿಯಿಸಿದ ಸಚಿವರು, ಮೈಕ್ರೋಫೈನಾನ್ಸ್‌ಗಳ ಬಗ್ಗೆ ಜಿಲ್ಲಾಡಳಿತವೂ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಬೇಕು. 2005-06ರಿಂದ ಜಿಲ್ಲೆಯಲ್ಲಿ ಈ ಫೈನಾನ್ಸಗಳಿಂದ ಎಷ್ಟು ಸಾಲ ವಿತರಣೆ ಮಾಡಿದ್ದೀರಿ. ಎಷ್ಟು ಸಾಲ ವಸೂಲಿ ಮಾಡಿದ್ದೀರಿ ಎಂಬುದರ ಕುರಿತು ಸಮಗ್ರ ಅಡಿಟ್ ವರದಿ ಕೊಡಿ ಅದರನ್ವಯ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದರು. ಸರ್ವೀಸ್ ರಸ್ತೆ ದುರಸ್ತಿ ಪಡಿಸಿ: ಮೋಟೆಬೆನ್ನೂರು ಬಳಿ ಕುಂಟುತ್ತಾ ಸಾಗಿರುವ ಹೆದ್ದಾರಿ ರಸ್ತೆ ಕಾಮಗಾರಿಯ ವೇಗ ಹೆಚ್ಚಿಸಿ, ಸರ್ವೀಸ್ ರಸ್ತೆಯ ತಡೆಗೋಡೆಗಳ ಬಳಿ ಎಲ್ಲಿ ಬೇಕೆಂದರಲ್ಲಿ ವಾಹನ ಹೋಗಲಿಕ್ಕೆ ಅವಕಾಶ ನೀಡಿದ್ದೀರಿ. ಕೊಟ್ಟರೆ ಎಲ್ಲಾ ಸಣ್ಣ ಪುಟ್ಟ ಹೋಟೆಲ್ ಉದ್ಯಮಿಗಳಿಗೂ, ಪೆಟ್ರೋಲ್ ಉದ್ಯಮಿಗಳಿಗೂ ಅನುಕೂಲ ಆಗುವಂತೆ ಕೊಡಿ, ಇಲ್ಲದಿದ್ದರೆ ಯಾರಿಗೂ ಅವಕಾಶ ಕೊಡಬೇಡಿ. ಹದಗೆಟ್ಟಿರುವ ಸರ್ವೀಸ್ ರಸ್ತೆಗಳನ್ನು ದುರಸ್ತಿಪಡಿಸಿ ಎಂದು ಸಚಿವ ಪಾಟೀಲ ತಾಕೀತು ಮಾಡಿದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಣ್ಣಿಗೆ ಜನಪ್ರತಿನಿಧಿಗಳು ಕಾಣುವುದಿಲ್ಲ, ಏನು ಸಮಸ್ಯೆ, ಪರಿಹಾರ ಹೇಗೆ ಎಂಬುದರ ಬಗ್ಗೆ ಶಾಸಕರ ಜತೆಗೆ ಚರ್ಚೆ ಮಾಡಬೇಕು. ಹಾವೇರಿಯ ಹಾನಗಲ್ ರಸ್ತೆ ಬೈಪಾಸ್‌ನಿಂದ ಆಲದಕಟ್ಟಿವರೆಗೆ ರಸ್ತೆ ಹದಗೆಟ್ಟಿದೆ. ದುರಸ್ತಿ ಮಾಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಯಾಸೀರ್‌ಖಾನ್ ಪಠಾಣ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಪಂಚ ಗ್ಯಾರಂಟಿ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಜಿಲ್ಲಾಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಅಂಶುಕುಮಾರ, ಜಿಪಂ ಉಪಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಟೋಲ್‌ಗಳಲ್ಲಿ ಕಿರಿಕಿರಿ: ಬಂಕಾಪುರದ ಟೋಲ್‌ನಲ್ಲಿ ಸರ್ಕಾರಿ ವಾಹನಗಳನ್ನೂ ಬಿಡೋದಿಲ್ಲ, ನಮ್ಮ ಕಾರ್ಡ್ ತೋರಿಸಿದರೂ ಕಿರಿಕಿರಿ ಮಾಡ್ತಾರೆ. ಇತ್ತೀಚೆಗೆ ನಡೆದ ಶಿಗ್ಗಾಂವಿ ಉಪಚುನಾವಣೆಗೆ ಬಂದಿದ್ದ ರಾಜಸ್ಥಾನದ ಚುನಾವಣಾ ಉಸ್ತುವಾರಿಗಳನ್ನೂ ತಡೆದು ಕಿರಿಕಿರಿ ಮಾಡಿದರು. ಹೀಗಾಗಿ ಅವರೂ ಸಿಟ್ಟಿಗೆದ್ದಿದ್ದರು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಶೋಕ ಗದ್ದಿಗೌಡರ ಸಭೆಯ ಗಮನಕ್ಕೆ ತಂದರು. ಆಗ ಡಿಸಿ ದಾನಮ್ಮನವರ ಮಾತನಾಡಿ, ಟೋಲ್‌ಗೆ ಹೊಸ ಏಜೆನ್ಸಿ ಬಂದಾಗಿನಿಂದ ಈ ಸಮಸ್ಯೆ ಆಗಿದೆ ಎಂದರು. ಆಗ ಸಚಿವರು ಸರ್ಕಾರಿ ವಾಹನಗಳಿಗೆ ಹೀಗೆ ಮಾಡೋದು ಸರಿಯಲ್ಲ ಎಂದರು. ಆಗ ಶಾಸಕ ಯಾಸೀರ್‌ಪಠಾಣ ಸ್ಥಳೀಯರಿಗೂ ಟೋಲ್‌ನಲ್ಲಿ ಸಂಚಾರಕ್ಕೆ ಅವಕಾಶ ಕೊಡುತ್ತಿಲ್ಲ, ಟೋಲ್ ಸಿಬ್ಬಂದಿ ಇದೇ ರೀತಿ ವರ್ತಿಸಿದರೆ ಟೆಂಟ್ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Share this article