ಕನ್ನಡಪ್ರಭ ವಾರ್ತೆ ಹಾಸನ
ಹೊಯ್ಸಳರ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ಹಂಪಿಯ ಮಾದರಿಯಲ್ಲಿ ಪ್ರತಿವರ್ಷ ಹೊಯ್ಸಳ ಉತ್ಸವವನ್ನು ಜಿಲ್ಲೆಯಲ್ಲಿ ಸರ್ಕಾರದ ಪ್ರೋತ್ಸಾಹದೊಂದಿಗೆ ಆಚರಿಸಬೇಕೆಂದು ಒತ್ತಾಯಿಸಿ ನವಕರ್ನಾಟಕ ಯುವಶಕ್ತಿ ವತಿಯಿಂದ ಭಾನುವಾರ ಹಾಸನದಲ್ಲಿ ಭವ್ಯ ಹೊಯ್ಸಳ ಉತ್ಸವ ಮೆರವಣಿಗೆ ನಡೆಯಿತು.ನಗರದ ಪೃಥ್ವಿ ಥಿಯೇಟರ್ ಬಳಿಯಿಂದ ಹೊರಟ ಹೊಯ್ಸಳ ಉತ್ಸವದಲ್ಲಿ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಆಟೋ ಮೇಲೆ ಹಿರಿಯ ಸಾಹಿತಿಗಳು, ಕನ್ನಡ ಚಲನಚಿತ್ರ ನಾಯಕ ನಟರ ಭಾವಚಿತ್ರಗಳು ಗಮನಸೆಳೆದವು. ನಗರದ ಬಿ.ಎಂ. ರಸ್ತೆ, ಎನ್.ಆರ್. ವೃತ್ತದ ಮೂಲಕ ಹಾಸನಾಂಬೆ ಕಲಾಕ್ಷೇತ್ರಕ್ಕೆ ಬಂದು ತಲುಪಿತು. ನವಕರ್ನಾಟಕ ಯುವಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ಕೆ.ಎನ್. ಲಿಂಗೇಗೌಡ ಮಾತನಾಡಿ, ನಮ್ಮ ಹೊಯ್ಸಳ ಉತ್ಸವದ ಉದ್ದೇಶ. ಕೇವಲ ಮನರಂಜನೆಯಷ್ಟೇ ಅಲ್ಲದೆ, ಮುಂದಿನ ಪೀಳಿಗೆಗೆ ನಾಡಿನ ಶ್ರೇಷ್ಠ ಪರಂಪರೆ, ಕಲೆ ಮತ್ತು ಸಂಸ್ಕೃತಿ ಪರಿಚಯಿಸುವ ಪ್ರಯತ್ನವೂ ಆಗಲಿದೆ. ಈ ನಾಡು ಹೊಯ್ಸಳರ ನಾಡು, ೧೧ ಶತಮಾನದಿಂದ ೧೬ನೇ ಶತಮಾನದವರೆಗೂ ಕನ್ನಡಿಗರು ಹೆಮ್ಮೆಪಡುವ ರೀತಿಯಲ್ಲಿ ಪಕ್ಕದ ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ನಮ್ಮ ಕನ್ನಡಿಗರ ಹಿರಿಯ ಗರಿಮೆಯನ್ನು ಎತ್ತಿ ಹಿಡಿದಂತಹ ಹೊಯ್ಸಳರು ನಮಗೆ ಅನೇಕ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ, ಕನ್ನಡಿಗರಾದ ನಾವು ಹೆಮ್ಮೆ ಪಡುವಂತಹ ಕೊಡುಗೆ ಹೊಯ್ಸಳರದ್ದು ಎಂದು ಬಣ್ಣಿಸಿದರು.
ಇಂತಹ ವೈಭವ ಉಳಿಸಬೇಕಾದರೆ ಅದಕ್ಕೊಂದು ಪ್ರಾಧಿಕಾರ ಬರಬೇಕು. ಬೇಲೂರು, ಹಳೇಬೀಡು ದೇವಸ್ಥಾನಗಳು ದೇವಲ ದೇವಾಲಯಗಳಲ್ಲ. ಅವು ಕನ್ನಡ ನಾಡಿನ ಕಾವ್ಯ, ಕಲ್ಲಿನಲ್ಲಿ ಕೆತ್ತಿರುವ ಕಾವ್ಯ. ಹೊಯ್ಸಳರು ಬೇಲೂರು, ಹಳೇಬೀಡಿನಲ್ಲಿ ಮಹಾಶಿಲ್ಪದ ಮೂಲಕ ಮಹಾಕಾವ್ಯವನ್ನು ಬರೆದಿದ್ದಾರೆ. ಉಳಿಸಬೇಕಾದುದು ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವಿದೆ. ಆ ಕಾವ್ಯಕ್ಕೋಸ್ಕರ ಹೊಯ್ಸಳರ ಉತ್ಸವವನ್ನು ಸರ್ಕಾರ ಮಾಡಬೇಕು ಎಂಬುವುದು ನವಕರ್ನಾಟಕ ಯುವಶಕ್ತಿಯ ಆಗ್ರಹವಾಗಿದೆ. ಈ ವರ್ಷ ಸಾಂಕೇತಿಕವಾಗಿ ಸಣ್ಣಪ್ರಯತ್ನವಾಗಿ ಮಾಡಲಾಗಿದೆ. ಬೇಲೂರು- ಹಳೇಬೀಡು ಸೇರಿದಂತೆ ೨೫ ಅತ್ಯದ್ಭುತವಾದಂತಹ ದೇವಾಲಯಗಳಿದ್ದು, ಅವುಗಳ ಸಂರಕ್ಷಣೆ ಮಾಡಬೇಕು ಎಂಬ ಕಾರಣಕ್ಕೆ ಸರ್ಕಾರವು ಹೊಯ್ಸಳ ಪ್ರಾಧಿಕಾರ ರಚನೆ ಮಾಡಲೇಬೇಕು. ಜೊತೆಗೆ ಪ್ರತಿವರ್ಷ ಸರ್ಕಾರವು ಹಂಪಿಯ ಉತ್ಸವದ ಮಾದರಿಯಲ್ಲಿ ಹೊಯ್ಸಳ ಉತ್ಸವವನ್ನೂ ನಡೆಸಬೇಕು ಜೊತೆಗೆ ಹಾಸನದಲ್ಲಿ ಕನ್ನಡ ಭವನ ನಿರ್ಮಿಸಬೇಕು ಎಂಬುದು ನವಕರ್ನಾಟಕ ಯುವ ಶಕ್ತಿಯ ಆಗ್ರಹವಾಗಿದೆ ಎಂದು ಹೇಳಿದರು.ಉತ್ಸವ ಮೆರವಣಿಗೆಯಲ್ಲಿ ನವಕರ್ನಾಟಕ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ಶಂಕರ್ ಗೌಡ, ಜಿಲ್ಲಾ ಅಧ್ಯಕ್ಷ ಬಿ.ಆರ್. ನಂದೀಶ್, ಉದ್ಯಮ ಘಟಕದ ರಾಜ್ಯಾಧ್ಯಕ್ಷ ಸಂದೇಶ್ ಶೆಟ್ಟಿ, ಕೃಷ್ಣಪ್ಪ, ಸಂತೋಷ್ ಗೌಡ, ಪವನ್ ಶೆಟ್ಟಿ, ಆಟೋ ಘಟಕದ ಜಾನು, ಹರೀಶ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.