ಕನ್ನಡಪ್ರಭ ವಾರ್ತೆ ಚಳ್ಳಕೆರೆ
ದಾವಣಗೆರೆಯ ಪ್ರತಿಷ್ಠಿಯ ಬಿಐಇಟಿ ಕಾಲೇಜಿನಲ್ಲಿ ಕಳೆದ 2024-25ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭ ಸೆ.27ರ ಶನಿವಾರ ನಡೆದಿದ್ದು, ಚಳ್ಳಕೆರೆ ನಗರದ ಸಿ.ಎನ್.ನಾಗಶ್ರೀರವರು ಮಾಸ್ಟರ್ ಆಫ್ ಕಂಪ್ಯೂಟರ್ ಆಪ್ಲಿಕೇಷನ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕಾಲೇಜಿನ ಮಹಿಳಾ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದು ಎರಡು ಬಂಗಾರದ ಪದಕ ಮತ್ತು ಪ್ರಮಾಣಪತ್ರ ಪಡೆದು ಕಾಲೇಜಿಗೆ ಕೀರ್ತಿತಂದಿರುತ್ತಾರೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದೊಂದಿಗೆ ವಿಶೇಷ ಸ್ಥಾನ ಪಡೆದಿದ್ದಾರೆ.ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಏರ್ಪಡಿಸಿದ್ದ 43ನೇ ಪದವಿ ಸಮಾರಂಭದಲ್ಲಿ ಸಿ.ಎನ್.ನಾಗಶ್ರೀರವರಿಗೆ ಪ್ರಶಸ್ತಿ ಪತ್ರ ಹಾಗೂ ಬಂಗಾರದ ಪದಕವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಾಗಶ್ರೀರವರ ಪೋಷಕರಾದ ಶೈಲಜಾ ಗೌತಮ್ ಮತ್ತು ನಾಗ ಶಯನ ಗೌತಮ್ ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಸ್ವಪ್ರ ಎಂಜಿನಿಯರಿಂಗ್ ಪ್ರೈ.ಲಿ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಬೆಳ್ಳೂಡಿ ಮಾತನಾಡಿ, ದಾವಣಗೆರೆಯ ಬಿಐಇಟಿ ಎಂಜಿನಿಯರಿಂಗ್ ಕಾಲೇಜು ರಾಜ್ಯದಲ್ಲಿ ತನ್ನದೇಯಾದ ಮೌಲ್ಯಹೊಂದಿದೆ. ವಿಶೇಷವಾಗಿ ಇಲ್ಲಿ ವ್ಯಾಸಂಗ ಮಾಡಿ ಪದವಿ ಪಡೆಯುವ ಎಲ್ಲರೂ ಉತ್ತಮ ಫಲಿತಾಂಶ ನೀಡುತ್ತಾ ಬಂದಿದ್ದಾರೆ. ವಿಶೇಷವಾಗಿ ಸಿ.ಎನ್.ನಾಗಶ್ರೀ ಕಾಲೇಜಿಗೆ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇಂತಹ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಬೇಕಿದೆ. ಸಾಧನೆಯಿಂದಲೇ ಗುರುತಿಸಿಕೊಳ್ಳುವವರು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾರೆ ಎಂದರು.ಬೆಂಗಳೂರು ರ‍್ಯಾಪಿಡೋ ಸಿಟಿಒ ಶ್ರೀವತ್ಸ ಕಟ್ಟಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಂದರ್ಭದಲ್ಲಿ ಹೆಚ್ಚು ಜಾಗೃತಿಯನ್ನು ವಹಿಸಿದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಬಿಐಇಟಿ ಕಾಲೇಜಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಪ್ರತಿವರ್ಷ ಈ ಕಾಲೇಜು ತನ್ನ ಸಾಧನೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ನಿಗದಿಪಡಿಸಿದ ಅವಧಿಯಲ್ಲಿ ಕೇವಲ ಕಲಿಕೆಗೆ ಮಾತ್ರ ಆಸಕ್ತಿ ತೋರಿದರೆ ಉತ್ತಮ ಫಲಿತಾಂಶ ಬರಲು ಸಾಧ್ಯ. ಕಠಿಣ ಸಾಧನೆಯಿಂದ ಪಡೆಯುವ ತೃಪ್ತಿ ಸದಾಕಾಲ ಶಾಶ್ವತವಾಗಿರುತ್ತದೆ. ನಮ್ಮ ಕಾಲೇಜಿನ ವಿವಿಧ ವಿಭಾಗದ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್.ಬಿ.ಅರವಿಂದ ಮಾತನಾಡಿ, ಕಾಲೇಜಿನ ಬೆಳವಣಿಗೆಯ ದೃಷ್ಠಿಯಿಂದ ಪ್ರತಿ ವರ್ಷವೂ ಉತ್ತಮ ಫಲಿತಾಂಶವನ್ನು ನಮ್ಮ ಹೆಮ್ಮೆಯ ವಿದ್ಯಾರ್ಥಿಗಳು ದಾಖಲಿಸುತ್ತಾ ಬಂದಿದ್ದಾರೆ. ಬೋಧಕ ವರ್ಗವೂ ಸಾಕಷ್ಟು ಪರಿಶ್ರಮ ವಹಿಸಿದೆ. ಪೋಷಕರು ಸಹ ನಮ್ಮ ಕಾಲೇಜಿನ ಅಭಿವೃದ್ದಿಯ ಬಗ್ಗೆ ಹೆಮ್ಮೆಪಡುವಂತಾಗಿದೆ ಎಂದರು.ದಾವಣಗೆರೆಯ ಪ್ರತಿಷ್ಠಿತ ಬಿಐಇಟಿ ಕಾಲೇಜಿನಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಆಪ್ಲಿಕೇಷನ್ಸ್ ವಿಭಾಗದಲ್ಲಿ ಕಾಲೇಜು ಮತ್ತು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ ಚಳ್ಳಕೆರೆ ಸಿ.ಎನ್.ನಾಗಶ್ರೀರವರ ಸಾಧನೆಗೆ ಅಖಿಲ ಕರ್ನಾಟಕ ತ್ರಿಮತಸ್ಥ ಬ್ರಾಹ್ಮಣ ಆರ್ಚಕ, ಪುರೋಹಿತರ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ವೈ.ಮುರುಳಿಕೃಷ್ಣ ಅಭಿನಂದಿಸಿದ್ದಾರೆ.