ಕನ್ನಡಪ್ರಭ ವಾರ್ತೆ ಸೊರಬ
ರಾಜ್ಯ ಸರ್ಕಾರ ಜಾತಿ ಗಣತಿ ನಡೆಸಿ, ವರದಿ ಬಿಡುಗಡೆ ಮುಂದಾಗಿದ್ದು, ಈ ಮೂಲಕ ಹಿಂದುಳಿದ ಸಮುದಾಯಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಆದ್ದರಿಂದ ಚನ್ನಯ್ಯ ಸಮಾಜಕ್ಕೆ ಒಳಮೀಸಲಾತಿ ನೀಡಬೇಕು ಎಂದು ಅಖಿಲ ಕರ್ನಾಟಕ ಚನ್ನಯ್ಯ (ಬಲಗೈ) ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ದೊಡ್ಮನಿ ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಅಖಿಲ ಕರ್ನಾಟಕ ಚನ್ನಯ್ಯ(ಬಲಗೈ) ಸಮಾಜ ಹಾಗೂ ಅಭಿವೃದ್ಧಿ ಹೋರಾಟ ರಾಜ್ಯ ಸಮಿತಿಯಿಂದ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚನ್ನಯ್ಯ ಸಮಾಜದವರಿಗೆ ದೊರೆಯಬೇಕಾದ ಸೌಲಭ್ಯಗಳು ಪ್ರಬಲ ಜಾತಿಗಳ ಪಾಲಾಗುತ್ತಿರುವುದು ದುರ್ಧೈವದ ಸಂಗತಿ. ಇದರಿಂದ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಹೋರಾಟ ಮತ್ತು ಒಗ್ಗಟ್ಟು ಶಕ್ತಿ ಪ್ರದರ್ಶನವಾಗಬೇಕು. ಮುಖ್ಯವಾಗಿ ಜಿಲ್ಲೆ ಸೇರಿದಂತೆ ವಿವಿಧಡೆ ಚನ್ನಯ್ಯ ಸಮಾಜದವರನ್ನು ಆದಿ ಕರ್ನಾಟಕ ಎಂದು ಗುರುತಿಸಲಾಗುತ್ತಿದೆ. ಚನ್ನಯ್ಯ ಸಮಾಜದ ಸಂಸ್ಕಾರ, ಕಾರ್ಯಕ್ರಮ, ವಿಧಿವಿಧಾನಗಳನ್ನು ಅನುಸರಿಸುತ್ತಿರುವವರಿಗೆ ಸರ್ಕಾರ ಜಾತಿ ಪ್ರಮಾಣ ಪತ್ರದಲ್ಲಿಯೂ ಚನ್ನಯ್ಯ ಸಮಾಜವೆಂದೇ ನಮೂದಿಸಬೇಕು ಎಂದು ಆಗ್ರಹಿಸಿದರು.ಚನ್ನಯ್ಯಸಮಾಜ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಚನ್ನಯ್ಯ ಸಮಾಜವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿ ನೀಡಿದ್ದರೂ ಸಹ ಸೌಲಭ್ಯಗಳು ಪ್ರಬಲ ಜಾತಿಗಳ ಪಾಲಾಗುತ್ತಿದೆ. ಚನ್ನಯ್ಯ ಸಮಾಜದವರು ಸಂಘಟನಾತ್ಮಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ತಳಸ್ಥರದಲ್ಲಿದ್ದು ಜೀವನ ಸಾಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಖಿಲ ಕರ್ನಾಟಕ ಚನ್ನಯ್ಯ (ಬಲಗೈ) ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜಪ್ಪ ಆಲಗೇರಿಮಂಡ್ರಿ, ರಾಜ್ಯ ಉಪಾಧ್ಯಕ್ಷರಾದ ನವೀನ್ ಕುಮಾರ್ ತೀರ್ಥಹಳ್ಳಿ, ರಂಗಪ್ಪ ಹೊನ್ನೆಸರ, ಎ.ಕೆ. ನಾಗರಾಜ, ಸಲಹಾ ಸಮಿತಿ ಅಧ್ಯಕ್ಷ ಬಸವಂತಪ್ಪ ಕೋಟೆ, ಜಿಲ್ಲಾಧ್ಯಕ್ಷ ರುದ್ರಪ್ಪ ಭೈರೆಕೊಪ್ಪ, ತಾಲೂಕು ಅಧ್ಯಕ್ಷ ನಾಗರಾಜ ಕಾಸರಗುಪ್ಪೆ, ರಾಜ್ಯ ಸಮಿತಿ ಸದಸ್ಯರದ ರೇವಣಪ್ಪ ಬಿದರಗೇರಿ, ರೇವಣಪ್ಪ ಸಂಡಾ, ಪ್ರಮುಖರಾದ ಎಚ್.ಕೆ. ಶಿವಾನಂದ ಕಾಗೋಡು, ಬಿ.ಎಚ್.ಹೊಳೆಲಿಂಗಪ್ಪ, ಹರೀಶ್ ತೀರ್ಥಹಳ್ಳಿ, ಶ್ರೀಕಾಂತ್ ಚಿಕ್ಕಶಕುನ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಷಣ್ಮುಖಪ್ಪ, ಹಾವೇರಿ ಜಿಲ್ಲಾಧ್ಯಕ್ಷ ಚಂದ್ರಕಾಂತ್, ಮಂಜಪ್ಪ ಚಿಕ್ಕಶಕುನ, ಜಗದೀಶ್ ಚಿಕ್ಕಶಕುನ, ತಿಮ್ಮಪ್ಪ ಹೊಸಬೀಡು, ರಾಜು ಆಚಾರ್ ಸೊರಬ, ಹರೀಶ್ ಶಂಕರಹೊಳೆ, ವೀರಪ್ಪ ಬಾಶಿ ಸೇರಿದಂತೆ ಇತರರಿದ್ದರು.