ಗದಗ: ಕೊಳಗೇರಿ ಪ್ರದೇಶಗಳಲ್ಲಿ ಸುಮಾರು ದಶಕಗಳಿಂದ ವಸತಿ, ನಾಗರಿಕ ಸೌಲಭ್ಯಗಳು ಇಲ್ಲದೇ ನಗರದ ಸಾವಿರಾರು ಸ್ಲಂ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಸ್ಲಂ ಸಮಿತಿಯ ನಿರಂತರ ಹೋರಾಟಗಳ ಪರಿಣಾಮ ಕೊಳಗೇರಿಗಳಲ್ಲಿ ಅನೇಕ ಬದಲಾವಣೆ ಕಾಣಲು ಸಾಧ್ಯವಾಗಿದೆ. ನಗರಗಳ ಉಸಿರು ಆಗಿರುವ ಸ್ಲಂಗಳಲ್ಲಿ ಬದುಕುತ್ತಿರುವ ಅಳಿವಿನ ಅಂಚಿನಲ್ಲಿರುವ ಶ್ರಮಜೀವಿಗಳ ಅಭಿವೃದ್ಧಿ ಹಾಗೂ ಭದ್ರತೆಗೆ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕೆಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಇಮ್ತಿಯಾಜ ಆರ್. ಮಾನ್ವಿ ಹೇಳಿದರು.
ನಗರದ ರಾಚೋಟೇಶ್ವರ ನಗರ ಸ್ಲಂ ಪ್ರದೇಶದಲ್ಲಿ ಜಿಲ್ಲಾ ಸ್ಲಂ ಸಮಿತಿಯಿಂದ ಸ್ಲಂ ಜನಾಂದೋಲನ-ಕರ್ನಾಟಕದ ೧೪ನೇ ಸಂಸ್ಥಾಪನ ದಿನಾಚರಣೆ ಅಂಗವಾಗಿ ವಿವಿಧ ಯೋಜನೆಗಳ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸ್ಲಂ ಜನಾಂದೋಲನ-ಕರ್ನಾಟಕ ಸಂಘಟನೆ ಕಳೆದ ೧೪ ವರ್ಷಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಮಿತಿಯನ್ನು ರಚನೆ ಮಾಡಿ ರಾಜ್ಯ ಮಟ್ಟದ ಹೋರಾಟಗಳನ್ನು ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರಿಂದ ವಸತಿ, ಹಕ್ಕು-ಪತ್ರ ಹಾಗೂ ರಾಜ್ಯ ಸರ್ಕಾರ ರಾಜ್ಯದ ಕೊಳಗೇರಿಗಳಲ್ಲಿ ಮನೆಗಳನ್ನು ನಿರ್ಮಿಸಲು ೬,೧೭೦ ಕೋಟಿ ಬೃಹತ್ ಅನುದಾನ ಮಂಜೂರು ಮಾಡಿರುವುದು ಸ್ಲಂ ಜನಾಂದೋಲನ_ ಕರ್ನಾಟಕದ ನಿರಂತರ ಹೋರಾಟ ಹಾಗೂ ಸರ್ಕಾರದ ಒತ್ತಡ ತಂದಿದ್ದರಿಂದ ಸಾಧ್ಯವಾಗಿದೆ ಎಂದರು.ರಾಜ್ಯದ ಸ್ಲಂ ನಿವಾಸಿಗಳ ಬದುಕುವ ಹಕ್ಕು ಮತ್ತು ಸಂವಿಧಾನ ಬದ್ಧ ಹಕ್ಕು ದೂರಕಿಸಿ ಕೊಡುವಲ್ಲಿ ರಾಜ್ಯ ಸಮಿತಿ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದ ಸುಮಾರು ಜಿಲ್ಲೆಗಳಲ್ಲಿ ಸಂಘಟನೆಗಳನ್ನು ಕಟ್ಟುವ ಮೂಲಕ ಜಿಲ್ಲೆಯ ಸ್ಲಂ ನಿವಾಸಿಗಳ ಸಮಸ್ಯೆಗಳ ಆಧಾರದಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಸಹಕಾರ ನೀಡಿ ಅನೇಕ ಸ್ಲಂಗಳಲ್ಲಿ ಭೂ ಒಡೆತನ ಪಡೆದುಕೊಳ್ಳಲು ರಾಜ್ಯ ಸಮಿತಿ ಎಲ್ಲಾ ಜಿಲ್ಲೆಗಳ ಸಮಿತಿಗೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಜಿಲ್ಲಾ ಸಮಿತಿಗಳ ಹೋರಾಟಗಳಲ್ಲಿ ಸಂವಿಧಾನ ಬದ್ಧ ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯ ಸಮಿತಿಯಿಂದ ಕಾಲ-ಕಾಲಕ್ಕೆ ಸಹಾಯ ಸಹಕಾರ ನೀಡುವ ಜೊತೆಗೆ ಸ್ಲಂ ನಿವಾಸಿಗಳಿಗೆ ರಾಜ್ಯ ಸಮಿತಿ ಬೆನ್ನೆಲಬು ಆಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂರಾರು ಕುಟುಂಬಗಳಿಗೆ ಮನೆಗಳ ಕ್ರಯ ಪತ್ರ ಹಾಗೂ ಅನೇಕ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್‌ಗಳನ್ನು ವಿತರಿಸಲಾಯಿತು.ರಾಚೋಟೇಶ್ವರ ನಗರ ಶಾಖೆ ಸಮಿತಿ ಅಧ್ಯಕ್ಷ ಇಬ್ರಾಹಿಂ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ಮಲೇಶಪ್ಪ ಕಲಾಲ, ಮಕ್ತುಮಸಾಬ ಮುಲ್ಲಾನವರ, ಮಮ್ತಾಜಬೇಗಂ ಮಕಾನದಾರ, ವಂದನಾ ಶ್ಯಾವಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಶಂಕ್ರಪ್ಪ ಹದ್ಲಿ, ಫಾರುಖ ಮಕಾನದಾರ, ಜಾಫರ ಮಲಬಾರ, ಮೆಹರುನಿಸಾ ಡಂಬಳ, ದಾವಲ ಯಾದಗೇರಿ, ಶೇಖಪ್ಪ ನರೇಗಲ್ಲ, ಪ್ರೇಮಾ ಮಣ್ಣವಡ್ಡರ, ರಾಧಾ ಬೋಡಗಲ್ಲ, ವಿಶಾಲಕ್ಷಿ ಹಿರೇಗೌಡ್ರ ಹಾಗೂ ವಿವಿಧ ಸ್ಲಂ ಪ್ರದೇಶದ ನಿವಾಸಿಗಳು ಇದ್ದರು. ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ ನಿರೂಪಿಸಿ, ವಂದಿಸಿದರು.