ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ- 2024ರ ಸಂಬಂಧ ವಿವಿಧ ಸ್ವೀಪ್ ಚಟುವಟಿಕೆಗಳ ಕುರಿತು ಜಿಲ್ಲಾ ಮಟ್ಟದ ಸ್ವೀಪ್ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಕರ್ತವ್ಯ ನಿರ್ವಹಿಸಬೇಕು. ಜಿಲ್ಲೆಯ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರ ಪಟ್ಟಿಯಲ್ಲಿ ನೋಂದಣಿಯಾಗಿರುವಂತೆ ನೋಡಿಕೊಳ್ಳಬೇಕು. ತುಮಕೂರು ಲೋಕಸಭಾ ಚುನಾವಣಾ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಜ.4, 2024ಕ್ಕೆ ಅನ್ವಯಿಸುವಂತೆ ಒಟ್ಟು 25,65,869 ಮತದಾರರಿದ್ದಾರೆ. 2019ರ ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣ, ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ರ ಅಂಕಿ ಅಂಶಗಳು, ಇಲಾಖೆಗಳ ಮೂಲಕ ಕೈಗೊಳ್ಳಬಹುದಾದ ಮತದಾರರ ಜಾಗೃತಿ ಕ್ರಮಗಳ ವಿವರ, ಮೊದಲಾದ ಮಾಹಿತಿಗಳನ್ನು ಪರಿಶೀಲಿಸಿದ ಅವರು ಜಿಲ್ಲೆಯಲ್ಲಿ ಮತದಾನ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ತುಮಕೂರು ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆ ಉಪ ಆಯುಕ್ತೆ ಸುಮತಿ ಅವರಿಗೆ ಸೂಚಿಸಿದರು..ಜಿಲ್ಲೆಯಲ್ಲಿರುವ ಶಾಲೆಗಳು, ಪದವಿಪೂರ್ವ, ಸ್ನಾತಕ/ಸ್ನಾತಕೋತ್ತರ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿ ಪಡೆದ ಅವರು, 18 ವರ್ಷ ಮೀರಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಜಿಲ್ಲೆಯ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಜನಸಂದಣಿ ಪ್ರದೇಶದಲ್ಲಿ ಮತದಾನದ ಕುರಿತು ಅರಿವು ಮೂಡಿಸಬೇಕು. ಈ ಬಗ್ಗೆ ಸರ್ಕಾರಿ/ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಡಿಡಿಪಿಐ ರಂಗಧಾಮಯ್ಯ ಅವರಿಗೆ ಸೂಚಿಸಿದರು.
ವೋಟರ್ ಹೆಲ್ಫ್ ಲೈನ್ ತಂತ್ರಾಂಶ: ಈ ಹಿಂದೆ ನಾಗರಿಕರು ಸೇವೆಗಳನ್ನು ಪಡೆಯಲು ಭೌತಿಕವಾಗಿ ಅರ್ಜಿ ಸಲ್ಲಿಸಬೇಕಾಗಿತ್ತು ಹಾಗೂ ದೂರು ನೀಡುವುದು ಕಷ್ಟಕರವಾಗಿತ್ತು. ಪ್ರಸ್ತುತ ಈ ಎಲ್ಲಾ ಸಮಸ್ಯೆಗಳನ್ನು ವೋಟರ್ ಹೆಲ್ಫ್ ಲೈನ್ ತಂತ್ರಾಂಶ ಬಗೆಹರಿಸಿದ್ದು, ನಾಗರಿಕರು ಈ ಅಪ್ಲಿಕೇಶನ್ ಅನ್ನು ಸ್ಮಾರ್ಟ್ ಫೋನ್‌ನಲ್ಲಿ ಡೌನ್ಲೋಡ್ ಮಾಡಿಕೊಂಡು ಮತದಾನ ಕೇಂದ್ರಗಳ ವಿವರ, ಎಪಿಕ್ ಕಾರ್ಡ್ ಅಭ್ಯರ್ಥಿಗಳ ಮಾಹಿತಿ, ಇವಿಎಂ ಮಾಹಿತಿ ಹಾಗೂ ಚುನಾವಣಾ ಆಯೋಗದ ನಿಯಮಗಳು, ಚಟುವಟಿಕೆಗಳ ಮಾಹಿತಿಯನ್ನು ಪ್ರತಿಯೊಬ್ಬರು ಸುಲಭ ವಿಧಾನದಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಮತಗಟ್ಟೆ ಅಧಿಕಾರಿ, ಚುಣಾವಣಾ ಅಧಿಕಾರಿಗಳ ಮಾಹಿತಿಯನ್ನು ವೀಕ್ಷಿಸಿ ಅವರಿಗೆ ನೇರವಾಗಿ ಕರೆ ಮಾಡಬಹುದಾಗಿದೆ.
ಇವಿಎಂ: ವಿದ್ಯುನ್ಮಾನ ಮತಯಂತ್ರದ ಮೂಲಕ ಮತದಾನ ಪ್ರಕ್ರಿಯೆ ಸರಳವಾಗಿದ್ದು, ಮತದಾರನು ತಮ್ಮ ಮತವು ಸರಿಯಾಗಿ ದಾಖಲಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದಾಗಿದೆ. ಮತ ಎಣಿಕೆ ಪ್ರಕ್ರಿಯೆಯು ತ್ವರಿತವಾಗಿಸಿ ಇದು ಮುದ್ರಣ, ಸಾರಿಗೆ ಮೊದಲಾದ ವೆಚ್ಚಗಳನ್ನು ಕಡಿಮೆ ಮಾಡಿದೆ. ಇವಿಎಂ ಬಾಹ್ಯ ವಿದ್ಯುತ್ ಸಂಪರ್ಕ ಹೊಂದಿರುವುದಿಲ್ಲ. ಇದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಇವಿಎಂಗಳ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಅವಾಸ್ತವಿಕ ತಪ್ಪು ಕಲ್ಪನೆ ಸಲ್ಲದು ಎಂದರು.