ಮಂಡ್ಯ ನಗರದ ಒಳಾಂಗಣ ಕ್ರೀಡಾಂಗಣ ಜಾಗವು ಹಿಂದೆಯೇ ವಾಲಿಬಾಲ್ ಕ್ರೀಡಾಂಗಣಕ್ಕೆ ಅಂದಿನ ಉಸ್ತುವಾರಿ ಸಚಿವರು, ಶಾಸಕರು ಅಧಿಕಾರಿಗಳ ನೇತೃತ್ವದಲ್ಲಿ ನಿರ್ಣಯ ಮಾಡಲಾಗಿದೆ. ಆದರೂ ಡೀಸಿ ಅವರು ಭವನ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದು ಕಾನೂನುಬಾಹಿರ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡಭವನ ನಿರ್ಮಾಣ ಮಾಡುವುದನ್ನು ವಿರೋಧಿಸಿ ಜಿಲ್ಲಾ ವಾಲಿಬಾಲ್ ಅಸೋಶಿಯನ್ ಹಾಗೂ ಕ್ರೀಡಾಪಟುಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ವಾಲಿಬಾಲ್ ಮತ್ತು ಕಬಡ್ಡಿ ಸೇರಿದಂತೆ ವಿವಿಧ ಆಟಗಳನ್ನು ಆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ನಗರದ ಕಲಾಮಂದಿರ ಹಿಂಭಾಗದ ಒಳಾಂಗಣ ಕ್ರೀಡಾಂಗಣ ಆವರಣದಲ್ಲಿ ಕನ್ನಡಭವನ ನಿರ್ಮಾಣವನ್ನು ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರಿಸುವ ಜಾಗದಿಂದ ಬೇರೆಡೆ ವರ್ಗಾಯಿಸಿ ಕ್ರೀಡೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಜಿಲ್ಲಾಡಳಿತವನ್ನು ಎಂದು ಒತ್ತಾಯಿಸಿದರು.
ಕನ್ನಡ ಭವನ ನಿರ್ಮಾಣ ವಿರೋಧಿಸಿ ಡೀಸಿ ಕಚೇರಿ ಬಳಿ ನೆಟ್ ಕಟ್ಟಿ ವಾಲಿಬಾಲ್ ಆಡಿದರು. ಕಬಡ್ಡಿ, ಖೋಖೋ ಹಾಗೂ ಥ್ರೋ ಬಾಲ್ ಸೇರಿದಂತೆ ವಿವಿಧ ಆಟಗಳನ್ನು ಆಡಿ ಕನ್ನಡ ಭವನ ನಿರ್ಮಾಣವನ್ನು ವಿರೋಧಿಸಿದರು.ಬಾಸ್ಕೆಟ್ ಬಾಲ್ ಅಸೋಷಿಯೇಷನ್‌ನ ಎಂ.ಎಸ್.ಸತ್ಯಾನಂದ ಮಾತನಾಡಿ, ಕ್ರೀಡೆಗಳಿಂದ ನೂರಾರು ರಾಷ್ಟ್ರೀಯ ಮಟ್ಟದ ಪ್ರತಿಭೆಗಳು ಈ ಅಂಗಳದಲ್ಲಿ ಅರಳಿವೆ. ಹಲವು ಕ್ರೀಡಾಳುಗಳು ಕ್ರೀಡಾ ಕೋಟಾದಲ್ಲಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಜಿಲ್ಲಾ ವಾಲಿಬಾಲ್ ಸಂಘದ ಕಾರ್ಯದರ್ಶಿ ಎಂ.ಕೆ.ಸೋಮಶೇಖರ್ ಮಾತನಾಡಿ, ಈ ಜಾಗವು ಹಿಂದೆಯೇ ವಾಲಿಬಾಲ್ ಕ್ರೀಡಾಂಗಣಕ್ಕೆ ಅಂದಿನ ಉಸ್ತುವಾರಿ ಸಚಿವರು, ಶಾಸಕರು ಅಧಿಕಾರಿಗಳ ನೇತೃತ್ವದಲ್ಲಿ ನಿರ್ಣಯ ಮಾಡಲಾಗಿದೆ. ಆದರೂ ಡೀಸಿ ಅವರು ಭವನ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದು ಕಾನೂನುಬಾಹಿರ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು ಮಧುಶ್ರೀ, ಖೋ ಖೋ ಅಸೋಸಿಯೇಷನ್ ಕಾರ್ಯದರ್ಶಿ ಎಂ.ಎಲ್. ತುಳಿಸೀಧರ್, ಜಿ.ಪಿ.ಉಮೇಶ್, ಗಿರೀಶ್, ಕ್ರೀಡಾ ಪ್ರೋತ್ಸಾಹಗಾರರಾದ ಅಂದಾನಿಗೌಡ, ಚಂದ್ರಕುಮಾರ್, ಬಾಲ್ ಬ್ಯಾಡ್ಮಿಂಟನ್ ಸಂಘದ ರಘು, ಫುಟ್ ಬಾಲ್ ಉಮೇಶ್, ನಾಗರಾಜು, ಮಂಜುನಾಥ್, ಕುಬೇರ್, ನಾರಾಯಣ, ಪಿ.ಎಂ. ಸೋಮಶೇಖರ್, ಕೀಲಾರ ಕೃಷ್ಣೇಗೌಡ, ಕರವೇ ಜಯರಾಂ, ಕರುನಾಡ ಸೇವಕ ಸಂಘಟನೆ ಎಂ.ಬಿ.ನಾಗಣ್ಣಗೌಡ, ಕೃಷ್ಣೇಗೌಡ, ಶಿವಲಿಂಗಯ್ಯ, ಕ್ರೀಡಾಪಟು ಮೇಘನ ಹಲವರು ಇದ್ದರು.