ವಿದ್ಯಾರ್ಥಿಗಳು ದೇಶದ ಭವಿಷ್ಯದ ಬೆನ್ನೆಲುಬಾಗಿ ಮಹತ್ವದ ಪಾತ್ರ ವಹಿಸಬೇಕಿದೆ. ವಿದ್ಯಾರ್ಥಿ ಜೀವನವು ಕೇವಲ ಮನರಂಜನೆಗೆ ಸೀಮಿತವಾಗದೆ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯಗೊಳ್ಳುವುದು ಅತ್ಯಂತ ಸಹಕಾರಿ ಎಂದು ಮಳವಳ್ಳಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕಾವೇರಿ ಹೇಳಿದರು.ಸಮೀಪದ ಮಣಿಗೆರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್, ರೋವರ್-ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ದೇಶದ ಭವಿಷ್ಯದ ಬೆನ್ನೆಲುಬಾಗಿ ಮಹತ್ವದ ಪಾತ್ರ ವಹಿಸಬೇಕಿದೆ. ವಿದ್ಯಾರ್ಥಿ ಜೀವನವು ಕೇವಲ ಮನರಂಜನೆಗೆ ಸೀಮಿತವಾಗದೆ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಆತ್ಮವಿಶ್ವಾಸ, ನಾಯಕತ್ವ ಗುಣ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಭಾರತೀನಗರದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನೀರಜಾಕ್ಷ ಮಾತನಾಡಿ, ಡಿಜಿಟಲ್ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಕೇವಲ ಮನರಂಜನೆಗಾಗಿ ಬಳಸದೆ ಜ್ಞಾನಾರ್ಜನೆ ಹಾಗೂ ಅಧ್ಯಯನಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ದಾಸೇಗೌಡ ಮಾತನಾಡಿ, ಯುವಜನರು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ರಂಗಭೂಮಿ ಕಲಾವಿದ ಮಾರಸಿಂಗನಹಳ್ಳಿ ಮಲ್ಲರಾಜು ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆ ಅಡಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿ ಗುರು-ಹಿರಿಯರಿಗೆ ಗೌರವ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಡಾಕ್ಟರೇಟ್ ಪದವಿ ಪಡೆದ ಕಾಲೇಜಿನ ಗ್ರಂಥಪಾಲಕ ಸಿ.ಎಸ್.ಸುರೇಂದ್ರ ಚಂದೂಪುರ ಮತ್ತು ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಕೀರ್ತನ ಹಾಗೂ ರಾಜ್ಯಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎ.ಟಿ.ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಭಿಷೇಕ್, ವಿವಿಧ ಸಮಿತಿಗಳ ಸಂಚಾಲಕರಾದ ಪ್ರೊ.ಸುರೇಶ್ ಬಾಬು, ಪ್ರೊ.ಮಂಚಯ್ಯ, ಪ್ರೊ.ಶಾರದಮ್ಮ, ಡಾ.ಪಾರ್ಥ, ಡಾ.ವಿಷಕಂಠ, ನಂದೀಶ್, ಪ್ರಸನ್ನ, ಡಾ.ರಶ್ಮಿ ಉಪಸ್ಥಿತರಿದ್ದರು.