- ವಿಎಚ್‌ಪಿ, ಬಜರಂಗದಳದಿಂದ ತಹಸೀಲ್ದಾರ್, ಆರ್‌ಎಫ್‌ಒಗೆ ಮನವಿ - - - ಚನ್ನಗಿರಿ: ತಾಲೂಕಿನ ಹರೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪಟ್ಟಣದ ಸಮೀಪದ ಸರ್ವೆ ನಂಬರ್ 4ರಲ್ಲಿರುವ ಮೈನರ್ ಫಾರೆಸ್ಟ್ ಜಮೀನಿನಲ್ಲಿ 5 ಎಕರೆ ಭೂ ಪ್ರದೇಶವನ್ನು ಖಬರಸ್ಥಾನ್ ಮಾಡುವ ಉದ್ದೇಶದಿಂದ ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಗೆ ಅರ್ಜಿ ಸಲ್ಲಿಸಿದ್ದು, ಮುಸ್ಲಿಂ ಸಮುದಾಯಕ್ಕೆ ಈ ಜಾಗ ಮಂಜೂರಾತಿ ಮಾಡಬಾರದು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರರು ಮತ್ತು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ವಿಹಿಂಪ ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ್ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಅವರಿಗೆ ಫೆ.18ರಂದು ಖಬರಸ್ಥಾನಕ್ಕಾಗಿ ಜಮೀನು ಮಂಜೂರು ಮಾಡಿಸಿಕೊಡಬೇಕೆಂದು ಚನ್ನಗಿರಿಯ ಮುಸ್ಲಿಂ ಸಮಾಜದ ಮುಖಂಡರು ಮನವಿ ಮಾಡಿ, ಅರ್ಜಿ ಸಲ್ಲಿಸಿದ್ದರು. ಮನವಿ ಮೇರೆಗೆ ಅಲ್ಪಸಂಖ್ಯಾತ ಇಲಾಖೆ ಸಚಿವರು ಹರೋನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ 5 ಎಕರೆ ಜಮೀನನ್ನು ಖಬರಸ್ತಾನ್ ಮಾಡುವ ಉದ್ದೇಶಕ್ಕಾಗಿ ಮುಸ್ಲಿಂ ಸಮುದಾಯಕ್ಕೆ ಮಂಜೂರಾತಿ ಮಾಡಿ ಕೊಡಬೇಕೆಂದು ದಾವಣಗೆರೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಇದು ಖಂಡನೀಯ. ಯಾವುದೇ ಕಾರಣಕ್ಕೂ ಮೈನರ್ ಫಾರೆಸ್ಟ್ ಭೂಮಿಯನ್ನು ಖಬರಸ್ಥಾನ್‌ಗೆ ಮಂಜೂರು ಮಾಡಬಾರದು ಎಂದರು.ಅರಣ್ಯ ಕಾಯ್ದೆಯಲ್ಲಿ ಅರಣ್ಯ ಬೆಳವಣಿಗೆ ಮತ್ತು ಸಂರಕ್ಷಣೆ ಹಿತದೃಷ್ಟಿಯಿಂದ ಈ ಪ್ರದೇಶ ಮೀಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಹರೋನಹಳ್ಳಿ ಗ್ರಾಮ ಚನ್ನಗಿರಿ ಪುರಸಭೆ ವ್ಯಾಪ್ತಿಗೆ ಒಳಪಡಲಿದೆ. ಹೀಗಿದ್ದೂ, ಖಬರಸ್ಥಾನ್ ನಿರ್ಮಾಣಕ್ಕೆ ಭೂ ಮಂಜೂರು ಮಾಡಲು ಶಿಫಾರಸು ಮಾಡಿರುವ ಸಚಿವರ ನಡೆ ತಕ್ಕುದಲ್ಲ ಎಂದರು.
ವಿಎಚ್‌ಪಿ, ಬಜರಂಗದಳದ ಪ್ರಮುಖರಾದ ರವಿಚಂದ್ರ, ಹೇಮಚಂದು, ಶ್ರೀನಿವಾಸ್, ನಿಖಿಲ್, ಪ್ರಮೋದ್ ಸೇರಿದಂತೆ ಮೊದಲಾದವರು ಹಾಜರಿದ್ದರು.- - - -21ಕೆಸಿಎನ್ಜಿ4.ಜೆಪಿಜಿ:
ಖಬರಸ್ತಾನ ನಿರ್ಮಾಣಕ್ಕೆ ಜಮೀನು ಮಂಜೂರು ವಿರೋಧಿಸಿ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಚನ್ನಗಿರಿಯಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.