ಸರ್ಕಾರ ಪೆಟ್ರೋಲ್- ಡಿಸೇಲ್ ಬೆಲೆಯೇರಿಕೆ ಹಿಂಪಡೆಯಲಿ: ಆರ್.ಅಶೋಕ್

KannadaprabhaNewsNetwork |  
Published : Jun 29, 2024, 12:42 AM IST
೨೮ಕೆಎಲ್‌ಆರ್-೧ಕೋಲಾರದ ಡಿಸಿ ಕಚೇರಿ ಮುಂದೆ ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್-ಡಿಸೇಲ್ ಬೆಲೆಯೇರಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹಾಲಿನ ದರವನ್ನು ವರ್ಷದೊಳಗೆ ೨ ಬಾರಿ ಏರಿಕೆ ಮಾಡಿದೆ, ಉಚಿತ ವಿದ್ಯುತ್ ನೀಡಿ, ವಿದ್ಯುತ್ ದರವನ್ನು ಹಲವಾರು ಬಾರಿ ಏರಿಕೆ ಮಾಡಿದೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳಿ ಡಿಸೇಲ್- ಪೆಟ್ರೋಲ್ ದರ ಏರಿಕೆ ಮಾಡಿದೆ, ೧೦ ಕೆಜಿ ಅಕ್ಕಿ ಉಚಿತ ಎಂದು ಹೇಳಿತ್ತು, ಅದರೆ ಅದರಲ್ಲಿ ೫ ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದಾಗಿದೆ, ೫ ಕೆಜಿ ಅಕ್ಕಿಯ ಹಣ ಸಮರ್ಪವಾಗಿ ನೀಡುತ್ತಿಲ್ಲ. ಮದ್ಯದ ಬೆಲೆ ಕ್ವಾರ್ಟರ್ ಗೆ ೫೦ ರು. ಏರಿಕೆ ಮಾಡಿದ್ದಾರೆ. ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳೂ ೨ ಸಾವಿರ ರು. ಜಮೆ ಮಾಡುವುದಾಗಿ ತಿಳಿಸಿ ಚುನಾವಣೆಯ ನಂತರ ಸಮರ್ಪಕವಾಗಿ ಜಮೆಯಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರ

ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳ ಮೂಲಕ ಭಾಗ್ಯಗಳನ್ನು ಒಂದು ಕೈಯಲ್ಲಿ ಕೊಟ್ಟು, ಪೆಟ್ರೋಲ್ - ಡೀಸೆಲ್, ಅಗತ್ಯ ವಸ್ತುಗಳ ಬೆಲೆಯೇರಿಸುವ ಮೂಲಕ ಮತ್ತೊಂದು ಕೈಯಿಂದ ಕಸಿದುಕೊಳ್ಳುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಒಂದು ವರ್ಷದೊಳಗೆ ಸಾರ್ವಜನಿಕರ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ ರಾಜ್ಯವನ್ನೇ ಸಂಕಷ್ಟಕ್ಕೆ ತಳ್ಳಿದೆ, ಕೂಡಲೇ ಬೆಲೆಯೇರಿಕೆ ಮಾಡಿರುವ ದರಗಳನ್ನು ಹಿಂಪಡೆಯಬೇಕೆಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಆಗ್ರಹಿಸಿದರು.ನಗರದ ಜಿಲ್ಲಾಡಳಿತ ಕಚೇರಿಯ ಬಳಿ ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ವಿದ್ಯುತ್ ಬೆಲೆ, ಡಿಸೇಲ್- ಪೆಟ್ರೋಲ್ ಬೆಲೆ, ಹಾಲಿನ ಬೆಲೆ, ಮದ್ಯದ ಬೆಲೆ, ಮುದ್ರಾಂಕ ನೋಂದಣಿ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೀವನವು ಆರ್ಥಿಕ ಸಂಕಷ್ಟದಲ್ಲಿರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಹಾಲಿನ ದರವನ್ನು ವರ್ಷದೊಳಗೆ ೨ ಬಾರಿ ಏರಿಕೆ ಮಾಡಿದೆ, ಉಚಿತ ವಿದ್ಯುತ್ ನೀಡಿ, ವಿದ್ಯುತ್ ದರವನ್ನು ಹಲವಾರು ಬಾರಿ ಏರಿಕೆ ಮಾಡಿದೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳಿ ಡಿಸೇಲ್- ಪೆಟ್ರೋಲ್ ದರ ಏರಿಕೆ ಮಾಡಿದೆ, ೧೦ ಕೆಜಿ ಅಕ್ಕಿ ಉಚಿತ ಎಂದು ಹೇಳಿತ್ತು, ಅದರೆ ಅದರಲ್ಲಿ ೫ ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದಾಗಿದೆ, ೫ ಕೆಜಿ ಅಕ್ಕಿಯ ಹಣ ಸಮರ್ಪವಾಗಿ ನೀಡುತ್ತಿಲ್ಲ. ಮದ್ಯದ ಬೆಲೆ ಕ್ವಾರ್ಟರ್ ಗೆ ೫೦ ರು. ಏರಿಕೆ ಮಾಡಿದ್ದಾರೆ. ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳೂ ೨ ಸಾವಿರ ರು. ಜಮೆ ಮಾಡುವುದಾಗಿ ತಿಳಿಸಿ ಚುನಾವಣೆಯ ನಂತರ ಸಮರ್ಪಕವಾಗಿ ಜಮೆಯಾಗುತ್ತಿಲ್ಲ ಎಂದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಯೋಜನೆಗಳ ನೆಪದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುತ್ತಿಲ್ಲ. ಅಭಿವೃದ್ದಿ ಯೋಜನೆಗಳ ಹಣವನ್ನು ಸೋನಿಯಗಾಂಧಿ ಹಾಗೂ ರಾಹುಲ್‌ ಗಾಂಧಿ ಖಾತೆಗಳಿಗೆ ಜಮೆ ಮಾಡುತ್ತಿದೆ. ಅಹಿಂದ ವರ್ಗಗಳ ಪರ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಎಸ್.ಸಿ.ಎಸ್.ಟಿ. ಮೀಸಲಾತಿ ಹಣವನ್ನು ದುರ್ಬಳಿಸಿಕೊಂಡು ರಾಜ್ಯವನ್ನೇ ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಕೆಂಪೆಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಶ್ರೀ ಚಂದ್ರಶೇಖರ ಸ್ವಾಮಿ ಸಿದ್ದರಾಮಯ್ಯ ಅವರು ೨ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್‌ರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯರಿಗೆ ಮಾನ, ಮರ್ಯಾದೆ ಏನಾದರೂ ಇದ್ದಲ್ಲಿ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಲಿ ಎಂದರು.

ತುಮಕೂರಿನಲ್ಲಿ ಕಲುಷಿತ ನೀರು ಸೇವನೆಯಿಂದ ೬ ಮಂದಿ ಸಾವನ್ನಾಪ್ಪಿರುವುದು ಶೋಚನೀಯ ಸಂಗತಿಯಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಸಮರ್ಪಕವಾಗಿ ಆಡಳಿತ ನಡೆಸಲು ಯೋಗ್ಯತೆ ಇಲ್ಲದಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ನಂತರ ಪಂಚ ಗ್ಯಾರಂಟಿ ಯೋಜನೆಗಳೆಲ್ಲಾ ಬಂದ್ ಆಗಲಿವೆ. ಇದೇ ಸರ್ಕಾರ ಇನ್ನು ಒಂದು ವರ್ಷ ಮುಂದುವರೆದರೆ ಕರ್ನಾಟಕ ರಾಜ್ಯ ಪಾಪರ್ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ. ಶೇ. ೪೦ ರಷ್ಟು ಕಮಿಷನ್ ಪಡೆಯುವ ಭ್ರಷ್ಟ ಸರ್ಕಾರವಾಗಿದೆ. ಎಸ್ಸಿ, ಎಸ್ ಟಿ ನಿಗಮದ ೧೮೭ ಕೋಟಿ ರು., ಮೀಸಲಾತಿ ಹಣ ೧೩,೩೦೦ ಕೋಟಿ ರು. ದುರ್ಬಬಳಕೆ ಮಾಡಿಕೊಂಡಿರುವ ಸರ್ಕಾರವು ದಲಿತರ ಪರ, ಹಿಂದುಳಿದವರ ಪರ ಎಂದು ಹೇಳಿಕೊಳ್ಳುವ ನೈತಿಕತೆ ಕಳೆದುಕೊಂಡಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಕೂಡಲೇ ಹಿಂದಕ್ಕೆ ಪಡೆಯಬೇಕು,ಇಲ್ಲದಿದ್ದರೆ ಹೋರಾಟದಲ್ಲಿ ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ ಎಂದು ಘೋಷಿಸಿದರು.

ವಿಪ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ವೈ.ಸಂಪಂಗಿ. ಬಿ.ಪಿ.ವೆಂಕಟಮುನಿಯಪ್ಪ. ಎಂ.ನಾರಾಯಣಸ್ವಾಮಿ. ಶಿಡ್ಲಘಟ್ಟ ರಾಜಣ್ಣ, ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್, ಎಸ್.ಬಿ.ಮುನಿವೆಂಕಟಪ್ಪ, ಬಣಕನಹಳ್ಳಿ ನಟರಾಜ್, ಕೃಷ್ಣಮೂರ್ತಿ, ಹನುಮಂತಪ್ಪ, ಪ್ರವೀಣ್ ಗೌಡ, ವಿಜಯಕುಮಾರ್, ಹಾರೋಹಳ್ಳಿ ವೆಂಕಟೇಶ್, ವಡಗೂರು ರಾಮು, ವಿಜಯಕುಮಾರ್, ಸಿ.ಡಿ.ರಾಮಚಂದ್ರ, ಮಹೇಶ್, ಕೆಂಬೋಡಿ ನಾರಾಯಣಸ್ವಾಮಿ, ಮಂಜುನಾಥ್, ವೆಂಟೇಶ್‌ಪತಿ, ಬಾಲಾಜಿ, ಅಪ್ಪಿ ನಾರಾಯಣಸ್ವಾಮಿ, ಮುದುವಾಡಿ ಮಂಜು, ಬಾಬು, ಓಹಿಲೇಶ್, ರಾಜೇಶ್ ಸಿಂಗ್, ರಾಕೇಶ್‌ಗೌಡ ಇದ್ದರು.

ವಾಲ್ಮೀಕಿ ನಿಗಮದ ಅಕ್ರಮ: ಸಿಎಂ ಸಿದ್ದು ರಾಜೀನಾಮೆ ನೀಡಲಿ

ಎಸ್ ಟಿ ವಾಲ್ಮೀಕಿ ನಿಗಮದ ಅಧಿಕಾರಿಯ ಮೇಲೆ ಒತ್ತಡ ಹೇರಿ, ಬೆದರಿಕೆ ಹಾಕಿ ೧೮೭ ಕೋಟಿ ರು. ಹಣವನ್ನು ಬೇರೆಯವರ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿಸಿದ್ದಾರೆ, ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಗಮದ ಅಧಿಕಾರಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಈ ಪ್ರಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಜವಾಬ್ದಾರಿಯಾಗಿದ್ದು, ಅವರು ರಾಜೀನಾಮೆ ನೀಡಬೇಕಾಗಿತ್ತು, ಆದರೆ ಈ ಆರೋಪವನ್ನು ನಿಗಮದ ಅಧ್ಯಕ್ಷ ನಾಗೇಂದ್ರ ಅವರ ತಲೆಗೆ ಕಟ್ಟಿ ರಾಜೀನಾಮೆ ಕೊಡಿಸಿದ್ದಾರೆ. ಈ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದರಲ್ಲಿ ನಮಗೆ ವಿಶ್ವಾಸವಿಲ್ಲ, ಇದನ್ನು ಸಿಬಿಐಗೆ ವಹಿಸಿದರೆ ಮಾತ್ರ ಸತ್ಯಾಂಶ ಹೊರಗೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ