ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ವೆಚ್ಚ ಸರ್ಕಾರವೇ ಭರಿಸಲಿ: ರೈತ ಸಂಘದ ಆಗ್ರಹ

KannadaprabhaNewsNetwork | Published : Jul 19, 2024 12:47 AM

ಸಾರಾಂಶ

ಕೇಂದ್ರ ಸರ್ಕಾರ ಆರ್.ಆರ್ ನಂಬರ್ ನೆಪದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಕಡ್ಡಾಯವಾಗಿ ಆಧಾರ್ ನಂಬರ್ ಲಿಂಕ್ ಮಾಡಲು ೬ ತಿಂಗಳ ಗಡುವನ್ನು ಕೆ.ಇ.ಆರ್.ಸಿ ನೀಡಿರುವುದು ರೈತರ ಕೆಂಗೆಣ್ಣಿಗೆ ಗುರಿಯಾಗಿದೆ. ವಿದ್ಯುತ್ ದರ ಪರಿಷ್ಕರಣೆ ಆದೇಶದ ಜೊತೆಯಲ್ಲಿ ಇದನ್ನು ನೀಡಿರುವ ಕೇಂದ್ರ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಇದುವರೆಗೂ ನೀಡುತ್ತಿದ್ದ ಉಚಿತ ವಿದ್ಯುತ್ ಕಸಿಯುವ ಆದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮುಳಬಾಗಿಲು

ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಕಡ್ಡಾಯ ಆದೇಶ ವಾಪಸ್ ಪಡೆದು ವಿದ್ಯುತ್ ಸಂಪರ್ಕ ವೆಚ್ಚ ಸರ್ಕಾರವೇ ಭರಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಬೆಸ್ಕಾಂ ಇಲಾಖೆ ಎದುರು ಪಂಪ್-ಮೋಟರ್‌ಗಳ ಸಮೇತ ಹೋರಾಟ ಮಾಡಿ ಅಧಿಕಾರಿಗಳ ಮೂಲಕ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ದುಬಾರಿ ಆಗಿರುವ ಕೃಷಿ ಕ್ಷೇತ್ರದಲ್ಲಿ ಒಂದು ಎಕರೆ ಬೆಳೆ ತೆಗೆಯಬೇಕಾದರೆ ಕನಿಷ್ಠ ೩ ಲಕ್ಷ ರು. ವೆಚ್ಚ ಬರುತ್ತದೆ. ಅದರಲ್ಲಿ ಬೆಳೆ ಬೆಳೆದ ನಂತರ ಕೈಗೆ ಬರುವ ಸಮಯದಲ್ಲಿ ಬೆಲೆ ಕುಸಿತ, ಪ್ರಕೃತಿ ವಿಕೋಪಗಳ ಹಾವಳಿಗೆ ಸಿಲುಕಿದರೆ ಹಾಕಿದ ಬಂಡವಾಳವೂ ಕೈಗೆ ಸಿಗದೆ, ಸಾಲಗಾರರ ಕಾಟ ತಾಳಲಾರದೆ, ಸ್ವಾಭಿಮಾನದ ಬದುಕಿಗೆ ಅಂತ್ಯ ಹೇಳುವ ಮಟ್ಟಕ್ಕೆ ವ್ಯವಸಾಯ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ರೈತರ ಪರ ನಿಲ್ಲಬೇಕಾದ ಸರ್ಕಾರ, ರೈತರನ್ನು ಜೀತದಾಳುಗಳನ್ನಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಆರ್.ಆರ್ ನಂಬರ್ ನೆಪದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಕಡ್ಡಾಯವಾಗಿ ಆಧಾರ್ ನಂಬರ್ ಲಿಂಕ್ ಮಾಡಲು ೬ ತಿಂಗಳ ಗಡುವನ್ನು ಕೆ.ಇ.ಆರ್.ಸಿ ನೀಡಿರುವುದು ರೈತರ ಕೆಂಗೆಣ್ಣಿಗೆ ಗುರಿಯಾಗಿದೆ. ವಿದ್ಯುತ್ ದರ ಪರಿಷ್ಕರಣೆ ಆದೇಶದ ಜೊತೆಯಲ್ಲಿ ಇದನ್ನು ನೀಡಿರುವ ಕೇಂದ್ರ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಇದುವರೆಗೂ ನೀಡುತ್ತಿದ್ದ ಉಚಿತ ವಿದ್ಯುತ್ ಕಸಿಯುವ ಆದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಹೊಸ ನೀತಿ ಅನ್ವಯ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಆಳವಡಿಕೆ ಮಾಡಬೇಕು. ಮೊದಲು ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ನ್ನು ರೈತರು ಪಾವತಿಸಿದರೆ ಬಳಿಕ ಸಬ್ಸಿಡಿ ಹಣವನ್ನು ಸರ್ಕಾರ ನೀಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೂ ಸಹ ರೈತರಿಗೆ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ತಗುಲುವ ವೆಚ್ಚವನ್ನು ರೈತರೇ ಭರಿಸಬೇಕೆಂಬ ಆದೇಶದಿಂದ ಸಾವಿರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಅವೈಜ್ಞಾನಿಕ ನಿರ್ಧಾರ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಆದೇಶವಾಗಿದೆ ಎಂದು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ಅಧಿಕಾರಿಗಳು, ಸರ್ಕಾರದ ಆದೇಶದಂತೆ ರೈತರಿಗೆ ಮನವರಿಕೆ ಮಾಡಿ ಆಧಾರ್ ಲಿಂಕ್ ಮಾಡುವಂತೆ ಒತ್ತಾಯಿಸುತ್ತಿದ್ದೇವೆ. ಇಲಾಖೆಯ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಫಾರೂಖ್ ಪಾಷ, ಜಿಲ್ಲಾಧ್ಯಕ್ಷ ಈ ಕಂಬಳಿ ಮಂಜುನಾಥ್, ಅಂಬ್ಲಿಕಲ್ ಮಂಜುನಾಥ್, ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಬಂಗಾರಿ ಮಂಜು, ಸುನಿಲ್ ಕುಮಾರ್, ವಿಜಯ್ ಪಾಲ್, ವಿಶ್ವ, ಭಾಸ್ಕರ್, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಸುಪ್ರೀಂ ಚಲ, ಗಂಗಾಧರ್, ಶಿವ, ಶಶಿ, ನಂಗಲಿ ನಾಗೇಶ್, ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ ಇದ್ದರು.

Share this article