ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಜಿಲ್ಲೆಯ ವಕ್ಫ್ ಸಮಸ್ಯೆ ಕುರಿತು ಕಾರಜೋಳ ನೇತೃತ್ವದಲ್ಲಿ ಬಿಜೆಪಿ ರಚಿಸಿರುವ ಸಮಿತಿ ಮಂಗಳವಾರ ಜಿಲ್ಲೆಯ ನಾನಾ ಕಡೆ ಭೇಟಿ ನೀಡಿತು. ಬಳಿಕ, ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರಜೋಳ ಮಾತನಾಡಿದರು. ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ ಮಂಡಿಸಿದ್ದಕ್ಕೆ ಕಾಂಗ್ರೆಸ್ ನವರು ವಿರೋಧಿಸಿದರು. ಅದರ ಗಂಭೀರ ಅಧ್ಯಯನ ಮಾಡಿ ಮುಂದಿನ ಅಧಿವೇಶನದಲ್ಲಿ ಮಂಡನೆಗೆ ಸಿದ್ಧತೆ ನಡೆದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಮೂಲಕ ರೈತರ ಜಮೀನನ್ನು ಕಬಳಿಸುವ ಹುನ್ನಾರ ಮಾಡುತ್ತಿರುವುದು ಹಕ್ಕುಚ್ಯುತಿಯಾಗಲಿದೆ ಎಂದು ಆರೋಪಿಸಿದರು.
ಸಚಿವ ಜಮೀರ್ ಅಹ್ಮದ್ ಸಭೆ ನಡೆಸಿದ್ದಾರೆ. ಸಿಎಂ ಸೂಚನೆ ಮೇರೆಗೆ ವಕ್ಫ್ ಅದಾಲತ್ ನಡೆಸಲಾಗುತ್ತಿದೆ. ತಾವು ಸೂಚಿಸಿದಂತೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದು, ಪ್ರೊಸಿಡಿಂಗ್ ದಾಖಲಾಗಿದೆ. 4,370 ಆಸ್ತಿಗಳ 14,201 ಎಕರೆಗೆ ಸಂಬಂಧಿಸಿದಂತೆ ಪ್ರಕರಣಗಳಿವೆ. ರೈತರ ಆಸ್ತಿಯನ್ನು ವಕ್ಫ್ ಹೆಸರಲ್ಲಿ ನುಂಗುವ ಹುನ್ನಾರ ನಡೆದಿದೆ. ಇಂದು ರೈತರು ಆಸ್ತಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಕೆಲವರಿಗೆ ನೋಟಿಸ್, ಪಹಣಿಯ ಕಲಂ 11ರಲ್ಲಿ ವಕ್ಫ್ ಎಂದು ನಮೂದು ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದಾಗ, ಸಾವಿರಾರು ರೈತರ ಖಾತೆಗಳನ್ನು ಬದಲಾವಣೆ ಮಾಡಲು ಸೂಚನೆ ನೀಡಿರುವುದು ಕಂಡು ಬಂದಿದೆ. ಕಾಂಗ್ರೆಸ್‌ನ ಈ ದುರುದ್ದೇಶ ಈಡೇರಿಸಲು ನಾವು ಬಿಡಲ್ಲ ಎಂದು ಹೇಳಿದರು.
ವಕ್ಫ್ ಆಸ್ತಿ ಎಂದು ನಮೂದು ಮಾಡಿದ ಪ್ರಕರಣದ ಮೇಲೆ ಯತ್ನಾಳರು ಧ್ವನಿ ಎತ್ತಿದ್ದಾರೆ. ಅದಕ್ಕೆ ಕೇಂದ್ರದವರು ಮಾಹಿತಿ ಕಲೆ ಹಾಕಿ ವರದಿ ನೀಡುವಂತೆ ಹೇಳಿದ್ದು, ಅದಕ್ಕಾಗಿ ನಾವು ಬಂದಿದ್ದೇವೆ. ರೈತರು, ಮಠದ ಆಸ್ತಿ, ಮಸೀದಿಗೆ ಹೋಗಲು ಬಿಡಲ್ಲ. ಯತ್ನಾಳರು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರಿಂದ ಅವರ ಪರವಾಗಿ ಬಂದಿದ್ದೇವೆ. ಇಲ್ಲಿನ ಸಮಗ್ರ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.