ಸರ್ಕಾರದ ಖಜಾನೆ ಸಂಪೂರ್ಣ ದಿವಾಳಿ: ಎ.ಎಸ್.ಪಾಟೀಲ್

KannadaprabhaNewsNetwork | Published : Feb 16, 2024 1:49 AM

ಸಾರಾಂಶ

ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಸಂಪೂರ್ಣ ದಿವಾಳಿಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಸಂಪೂರ್ಣ ದಿವಾಳಿಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ಟೀಕಿಸಿದರು.

ಸರ್ಕಾರಿ ನೌಕರರಿಗೆ ವೇತನ ಕೊಡಲು ಹಣವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಾಟಕವಾಡಿದ್ದಾರೆ. ರಾಜ್ಯ ಸರ್ಕಾರದ ಪ್ರತಿಭಟನೆ ಎಂದು ಹೇಳಿ ಇಲ್ಲಿನ ಜನರಲ್ಲಿ ಗೊಂದಲ ಮೂಡಿಸಿ ಅಲ್ಲಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ಎಂಬುದನ್ನು ಸಾಭೀತುಪಡಿಸಿದ್ದಾರೆ. ಪಕ್ಷದ ಪರವಾಗಿ ಹೋದರೆ ವಿಮಾನದ ವೆಚ್ಚ, ಉಳಿಯಲು ತಾಜ್ ಹೊಟೇಲ್‌ನ ವ್ಯವಸ್ಥೆ ಎಲ್ಲವೂ ಸಿಗುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರದ ಹೆಸರಲ್ಲಿ ಸಿದ್ದರಾಮಯ್ಯ ಮತ್ತು ತಂಡ ನಾಟಕವಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

ರೈತರಿಗೆ ಸಾಂತ್ವನ ಹೇಳಿಲ್ಲ:

ಬರದಿಂದ ತತ್ತರಿಸಿರುವ ರೈತರ ಸ್ಥಿತಿಗತಿಯನ್ನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳುವ ಪ್ರಯತ್ನವನ್ನು ಸರ್ಕಾರ ಮತ್ತು ಕೃಷಿ ಸಚಿವರು ಮಾಡಿಲ್ಲ. ೬ ತಿಂಗಳ ಕಬ್ಬಿನ ಬೆಳೆ ಕಟಾವು ಮಾಡಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಬಾಳೆ ಸಂಪೂರ್ಣ ಒಣಗಿಹೋಗಿದ್ದು, ಅದನ್ನೂ ರೈತರು ಕಿತ್ತುಹಾಕುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿದ್ದರೂ ಸರ್ಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು, ಅಷ್ಟೇ ಏಕೆ ಈ ಜಿಲ್ಲೆಯವರೇ ಆದ ಕೃಷಿ ಸಚಿವರೂ ಸಹ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ರೈತರಿಗೆ ಸಾಂತ್ವನ ಹೇಳಿಲ್ಲ ಎಂದು ಕಿಡಿಕಾರಿದರು.

ಸ್ಟಾಲಿನ್ ತೃಪ್ತಿಪಡಿಸಲು ರೈತರ ಬಲಿ

ಈ ಬಾರಿ ಕೆಆರ್‌ಎಸ್‌ನಿಂದ ನಾಲೆಗಳಲ್ಲಿ ಹರಿಯುವ ನೀರು ಮಳವಳ್ಳಿ ಕೊನೇ ಭಾಗಕ್ಕೆ ತಲುಪಿಲ್ಲ. ಇಂಡಿಯಾ ಮೈತ್ರಿಕೂಟದಲ್ಲಿರುವ ತಮಿಳುನಾಡು ಮುಖ್ಯಮಂತ್ರಿಯ ಸ್ಟಾಲಿನ್ ಮನವೊಲಿಸಿ ನೀರು ಉಳಿಸಿಕೊಂಡು ಜಿಲ್ಲೆಯ ರೈತರಿಗೆ ನೀಡುವುದನ್ನು ಬಿಟ್ಟು ತಮಿಳುನಾಡಿಗೆ ನೀರು ಬಿಟ್ಟು ನಮ್ಮ ರೈತರನ್ನು ಬಲಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಇಂತಹ ನಿಲುವಿನಿಂದಾಗಿ ರೈತರು ಪರಿತಪಿಸುವಂತಾಗಿದೆ. ಕನಿಷ್ಟ ಬೋರ್‌ವೆಲ್‌ಗಳಲ್ಲೂ ಸಹ ನೀರಿಲ್ಲದಂತಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಲ್ಲ. ಇದೆಲ್ಲದ್ದಕ್ಕೂ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ಜಲಸಂಪನ್ಮೂಲ ಸಚಿವರು, ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ಎನ್‌ಡಿಎ ಜಯಭೇರಿ:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿ ಮಂಡ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ರಾಜ್ಯದ ೨೮ ಕ್ಷೇತ್ರಗಳಲ್ಲೂ ಬಿಜೆಪಿ ಜಯಬೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ವಿಶ್ವವೇ ಮೆಚ್ಚುವಂತಹ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಸಾಧನೆಯನ್ನು ಜನತೆ ಮೆಚ್ಚಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಕೇಂದ್ರದಲ್ಲಿ ಪ್ರಧಾನಿ ಮಾಡುವುದೇ ನಮ್ಮ ಉದ್ದೇಶವಾಗಿದೆ. ಇದು ಜನರ ಆಸೆಯೂ ಆಗಿದೆ ಎಂದು ಹೇಳಿದರು.

ಖಲಿಸ್ತಾನ್ - ದಲ್ಲಾಳರ ಕುಮ್ಮಕ್ಕು:

ದೆಹಲಿ ಬಳಿ ರೈತರು ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ಖಲಿಸ್ತಾನ್ ಮತ್ತು ದಲ್ಲಾಳಿಗಳ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಇದಕ್ಕೆ ಕಾಂಗ್ರೆಸ್ ಕಾರಣವಾಗಿದ್ದುಘಿ, ವಿದೇಶಿ ಶಕ್ತಿಗಳೂ ಸಹ ಇದರಲ್ಲಿ ಹಣ ಹೂಡಿಕೆ ಮಾಡುತ್ತಿವೆ ಎಂದು ಆರೋಪಿಸಿದರು.

ಸಾಮಾನ್ಯ ರೈತರು ಕೋಟ್ಯಾಂತರ ರೂ. ಮೌಲ್ಯದ ಕಾರು, ಟ್ರಾಕ್ಟರ್ ಇತರೆ ವಾಹನಗಳನ್ನು ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ನಡೆದ ಪ್ರತಿಭಟನೆ ಯಾವ ಸ್ವರೂಪ ಪಡೆದುಕೊಂಡಿತ್ತು ಎಂಬುದನ್ನು ಮನಗಂಡಿರುವ ದೆಹಲಿ ಮತ್ತು ಹರಿಯಾಣ ಸರ್ಕಾರ ಯಾವುದೇ ಹಾನಿಯಾಗದಂತೆ ತಡೆಯಲು ಪ್ರಯತ್ನ ಪಡುತ್ತಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎಸ್.ಇ. ಇಂದ್ರೇಶ್, ಮುಖಂಡರಾದ ಕೆ.ಎಸ್. ನಂಜುಂಡೇಗೌಡ, ಎಂ.ಆರ್. ಕುಮಾರಸ್ವಾಮಿ, ಎಚ್.ಆರ್. ಅಶೋಕ್, ಬ್ಯಾಟರಾಯಿಗೌಡ, ಜೋಗೀಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Share this article