ಶಿರಾ: ವಿಶೇಷ ಚೇತನರಿಗೆ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ೧೫ನೇ ಹಣಕಾಸಿನ ಶೇ. ೫ರಷ್ಟು ಅನುದಾನದಲ್ಲಿ ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೮೭ ವಿಶೇಷ ಚೇತನರಿಗೆ ಸೋಲಾರ್ ಬೆಳಕಿನ ದೀಪ ನೀಡಲಾಗುತ್ತಿದ್ದು, ವಿಶೇಷಚೇತನರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಪಿಡಿಒ ವೆಂಕಟೇಶಮೂರ್ತಿ ಹೇಳಿದರು.
ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷಚೇತನರಿಗೆ ಸೋಲಾರ್ ದೀಪ ವಿತರಣೆ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿಶೇಷಚೇತನರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ನೀಡಿದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡದ ೨೩ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉಪಯೋಗವಾಗಲಿ ಎಂಬ ಉದ್ದೇಶದಿಂದ ಆರ್ಥಿಕ ಸಹಾಯ ಧನದ ಚೆಕ್ ನೀಡಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಮಾತನಾಡಿ, ವಿಶೇಷ ಚೇತನರಿಗೆ ಮೀಸಲಿಟ್ಟ ಹಣದಲ್ಲಿ ಗ್ರಾಮ ಪಂಚಾಯಿತಿ ಸೋಲಾರ್ ದೀಪಗಳನ್ನು ನೀಡುತ್ತಿರುವುದು ಉಪಯೋಗಕಾರಿಯಾಗಿದ್ದು, ಅದೇ ರೀತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ನೀಡುತ್ತಿರುವುದು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.ಮುಖಂಡ ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಜನಸಾಮಾನ್ಯರ ಸಂಬಂಧ ಸ್ನೇಹಮಯವಾಗಿದ್ದಾಗ ಜನಸ್ನೇಹಿ ಆಡಳಿತ ನೀಡಲು ಸಾಧ್ಯವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಹನುಮಂತರಾಯಪ್ಪ, ತಿಪ್ಪೇಸ್ವಾಮಿ, ರೈತ ಮುಖಂಡ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ವಸಂತಕುಮಾರ್, ಜಿ.ಟಿ.ವಿಶ್ವನಾಥ, ಕಾರ್ಯದರ್ಶಿ ಈರಣ್ಣ, ರಾಘವೇಂದ್ರ, ಹನುಮಣ್ಣ ಸೇರಿ ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಚೇತನರು ಹಾಗೂ ಸಾರ್ವಜನಿಕರು ಹಾಜರಿದ್ದರು.ಶಿರಾ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷಚೇತನರಿಗೆ ಸೋಲಾರ್ ದೀಪ ವಿತರಣೆ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ಚೆಕ್ ವಿತರಿಸಲಾಯಿತು.