ಗೌಂಡಿ ಪುತ್ರಿ ಪ್ರಥಮ, ರೈತನ ಮಗಳು ದ್ವಿತೀಯ

KannadaprabhaNewsNetwork |  
Published : Apr 11, 2025, 12:39 AM IST
ಭಾಗ್ಯವಂತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಮನೆ ಕಟ್ಟುವ ಗೌಂಡಿಯ ಮಗಳು ಹಾಗೂ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿರುವ ರೈತನ ಮಗಳು ತಾಲೂಕಿಗೆ ಪ್ರಥಮ ಸ್ಥಾನ ಬಂದರೇ, ಕೃಷಿ ಕಾರ್ಮಿಕನ ಮಗಳು ತಾಲೂಕಿಗೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಇಡೀ ಜಿಲ್ಲೆಯೇ ಇಂಡಿ ತಾಲೂಕಿನ ಚವಡಿಹಾಳದ ಭಾಗ್ಯವಂತಿ ಕಾಲೇಜಿನತ್ತ ತಿರುಗಿ ನೋಡುವಂತಾಗಿದೆ.

ಖಾಜಪ್ಪ ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಮನೆ ಕಟ್ಟುವ ಗೌಂಡಿಯ ಮಗಳು ಹಾಗೂ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿರುವ ರೈತನ ಮಗಳು ತಾಲೂಕಿಗೆ ಪ್ರಥಮ ಸ್ಥಾನ ಬಂದರೇ, ಕೃಷಿ ಕಾರ್ಮಿಕನ ಮಗಳು ತಾಲೂಕಿಗೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಇಡೀ ಜಿಲ್ಲೆಯೇ ಇಂಡಿ ತಾಲೂಕಿನ ಚವಡಿಹಾಳದ ಭಾಗ್ಯವಂತಿ ಕಾಲೇಜಿನತ್ತ ತಿರುಗಿ ನೋಡುವಂತಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳದ ಶ್ರೀ ಭಾಗ್ಯವಂತಿ ಪಪೂ ಕಾಲೇಜಿನ ವಿಜ್ಞಾನ ವಿಭಾಗದ ಹೀನಾ ಕೌಸರ ಮುಲ್ಲಾ ಶೇ.97, ವಾಣಿಜ್ಯ ವಿಭಾಗದ ಜ್ಯೋತಿ ಬೈರಗೊಂಡ ಶೇ.91 ರಷ್ಟು ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡರೇ, ಕಲಾ ವಿಭಾಗದ ಅಮೃತಾ ಬೂದಗೂಳಿ ಶೇ.90 ರಷ್ಟು ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ್ದಾರೆ.

ಹೀನಾ ಕೌಸರ್‌ ಮುಲ್ಲಾ ಅವಳ ತಂದೆ ಬುರಾನಸಾಬ್ ಮುಲ್ಲಾ ಗೌಂಡಿಯ ಕೆಲಸ ಮಾಡುತ್ತಿದ್ದು, ಬಂದ ಆದಾಯದಲ್ಲೇ ಮೂವರು ಮಕ್ಕಳನ್ನು ಅಚ್ಚುಕಟ್ಟಾಗಿ ಓದಿಸಿದ್ದಾರೆ. ನನ್ನ ಕಷ್ಟ ನನಗೆನೇ ಕೊನೆಯಾಗಲಿ. ಮಕ್ಕಳು ಚೆನ್ನಾಗಿ ಕಲಿತು ಒಳ್ಳೆಯ ಹುದ್ದೆ ಅಲಂಕರಿಸಲಿ. ತಮ್ಮ ಕಾಲ ಮೇಲೆ ನಿಂತು ಒಳ್ಳೆಯ ಜೀವನ ನಡೆಸಲಿ ಎನ್ನುವುದು ಹೀನಾ ತಂದೆಯ ಆಶಯ.

ಮೊದಲಿನಿಂದ ಮಗಳು ಕಾಲೇಜಿನಲ್ಲಿ ನಡೆಯುವ ಪ್ರತಿ ಕಿರು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯುತ್ತಿದ್ದಳು. ನಿತ್ಯ ಓದುವುದನ್ನು ಬಿಡುತ್ತಿರಲಿಲ್ಲ. ತುಂಬಾ ಕಷ್ಟಪಟ್ಟು ಓದಿರುವುದರಿಂದ ಇಂತಹ ಫಲಿತಾಂಶ ಬರಲು ಸಾಧ್ಯವಾಗಿದೆ. ಹಾಗೆಯೇ ಕಾಲೇಜಿನ ಪ್ರಾಧ್ಯಾಪಕರು ಇವಳಿಗೆ ನೀಡಿದ ಪ್ರೋತ್ಸಾಹವೂ ಕಾರಣ ಎನ್ನುವುದು ತಂದೆಯ ನುಡಿ.--------

ಕೋಟ್‌...

ನನ್ನ ಮಗಳ ಸಾಧನೆಗೆ ನನ್ನ ಬಡತನ ಯಾವುದೇ ರೀತಿ ತೊಂದರೆ ಮಾಡಲಿಲ್ಲ. ನನ್ನ ಮಗಳ ಸಾಧನೆಗೆ ಬೆನ್ನೆಲುಬಾಗಿ ನಿಂತ ಭಾಗ್ಯವಂತಿ ಪಪೂ ಕಾಲೇಜಿನ ಎಲ್ಲ ಉಪನ್ಯಾಸಕ ವರ್ಗ ಹಾಗೂ ಆಡಳಿತ ಮಂಡಳಿ ಈ ಸಾಧನೆಗೆ ಕಾರಣಿಭೂತರು.

-ಬುರಾನಸಾಬ್ ಮುಲ್ಲಾ, ಹೀನಾಕೌಸರ್‌ ಮುಲ್ಲಾ ತಂದೆ.

--------------------

ಬಾಕ್ಸ್‌...

ಕಳೆದ ಬಾರಿ ಅಣ್ಣ ದ್ವಿತೀಯ, ಈ ಬಾರಿ ತಂಗಿ ಪ್ರಥಮ!

ಕಳೆದ ವರ್ಷ ವಿಜ್ಞಾನ ವಿಭಾಗದಲ್ಲಿ ಅಣ್ಣ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದ. ಸದ್ಯ ಆತನ ತಂಗಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಇಡೀ ಕುಟುಂಬದ ಸಂತಸಕ್ಕೆ ಕಾರಣವಾಗಿದೆ. ಶ್ರೀ ಭಾಗ್ಯವಂತಿ ಪಪೂ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜ್ಯೋತಿ ಗುರುಶಾಂತ ಬೈರಗೊಂಡ ಶೇ.91 ರಷ್ಟು ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಜ್ಯೋತಿಯ ತಂದೆ ಗುರುಶಾಂತ ಬೈರಗೊಂಡ ಅವರು ರೈತ. ತಾಯಿ ಅನಿತಾ ಬೈರಗೊಂಡ ಅವರು ರೈತಾಪಿ ಕೆಲಸದಲ್ಲಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಜ್ಯೋತಿ ಸೇರಿದಂತೆ ಇನ್ನೋರ್ವ ಪುತ್ರಿ, ಒಬ್ಬ ಪುತ್ರನೂ ಇದ್ದಾನೆ. ಜ್ಯೋತಿಯ ಅಣ್ಣ ರವಿಕಾಂತ್ ಗುರುನಾಥ್ ಬೈರಗೊಂಡ ಭಾಗ್ಯವಂತಿ ಪಪೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, 2023-24ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದ. ಕೆಲವು ಅಂಕಗಳಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಅಣ್ಣನ ಸಾಧನೆಯನ್ನೇ ಮೀರಿಸಿರುವುದು ಅಣ್ಣ ಸೇರಿದಂತೆ ತಂದೆ, ತಾಯಿಗೆ ಖುಷಿ ಹೆಚ್ಚಿಸುವಂತಾಗಿದೆ.

----------

ಕೋಟ್‌...

ಅಣ್ಣ ರವಿಕಾಂತ ಈಗಾಗಲೇ ಕಾಲೇಜಿನಲ್ಲಿ ಒಳ್ಳೆಯ ಹೆಸರು ಮಾಡಿದ್ದು, ನಾನು ಕೂಡ ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಬೇಕೆಂದು ಓದುತ್ತಿದ್ದೆ. ನಿತ್ಯ ಓದಿನ ಅಭ್ಯಾಸ ರೂಢಿಸಿಕೊಂಡು ಕಿರುಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯುತ್ತಿದ್ದೆ. ಶಾಲೆಯ ಅಧ್ಯಾಪಕರ ಮಾರ್ಗದರ್ಶನ ಹಾಗೂ ಕುಟುಂಬದ ಪ್ರೋತ್ಸಾಹವೇ ತಾಲೂಕಿಗೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ.

-ಜ್ಯೋತಿ ಬೈರಗೊಂಡ, ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ.

-------------

ಕೋಟ್‌...

ಮೊದಲಿಂದಲೂ ಕಲಿಕೆಯಲ್ಲಿ ತುಂಬಾ ಚುರುಕು ಬುದ್ದಿಯುಳ್ಳವಳಾಗಿದ್ದು, ಅವಳ ಅಣ್ಣನಂತೆ ಸಾಧನೆ ಮಾಡಿರುವುದು ತುಂಬಾ ಖುಷಿಯಾಗಿದೆ. ಮಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಎಲ್ಲ ಉಪನ್ಯಾಸಕರ ಪ್ರೋತ್ಸಾಹ ಹಾಗೂ ಪರಿಶ್ರಮವೇ ಕಾರಣ.

-ಗುರುನಾಥ್ ಬೈರಗೊಂಡ, ಜ್ಯೋತಿ ತಂದೆ.

-----------------

ಬಾಕ್ಸ್..

ಉಪವಿಭಾಗಾಧಿಕಾರಿ, ಶಾಲಾ ಆಡಳಿತ ಮಂಡಳಿಯಿಂದ ಗೌರವ ಸನ್ಮಾನ

ಹಲವು ವರ್ಷಗಳಿಂದ ಸೈನ್ಸ್‌, ಕಾಮರ್ಸ್‌, ಆರ್ಟ್ಸ್‌ ವಿಭಾಗದಲ್ಲಿ ತಾಲೂಕಿನಲ್ಲಿಯೇ ಅತ್ಯುತ್ತಮ ಫಲಿತಾಂಶ ಬರುತ್ತಿದೆ. ಕಾಲೇಜಿನ ಶಿಕ್ಷಣದ ಗುಣಮಟ್ಟ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಬಾರಿಯೂ ಶೇ.100 ಕ್ಕೆ 100 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆನೇ ಪ್ರಥಮ ಸ್ಥಾನ ಬಂದರೇ, ಕಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಬಂದಿದೆ. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ತಾಲೂಕಿನ ಉಪವಿಭಾಗಾಧಿಕಾರಿಗಳು ಸನ್ಮಾನಿಸಿ, ಅಭಿನಂದಿಸಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಶಾಂತಪ್ಪ ದಶವಂತ, ಸಲಹಾ ಸಮಿತಿ ಅಧ್ಯಕ್ಷ ಅಪ್ಪಾರಾಯ ದಶವಂತ, ಕಾರ್ಯದರ್ಶಿ ಶಿವಾನಂದ ದಶವಂತ, ಕಾಮಣ್ಣ ದಶವಂತ, ನಾಗು ದಶವಂತ, ಪ್ರಾಚಾರ್ಯ ಚಂದ್ರಶೇಖರ ದಶವಂತ, ಎಸ್‌.ಐ.ಕಾರಬಾರಿ, ಬಸವರಾಜ ರೋಡಗಿ, ಪ್ರಕಾಶ ಹಲಸಂಗಿ, ನಿವೃತ್ತ ಮುಖ್ಯ ಗುರುಗಳು ರಾಮಣ್ಣ ದಶವಂತ, ಅಶೋಕ ದಶವಂತ ಇವರೇಲ್ಲರೂ ಮತ್ತು ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ಗ್ರಾಮಸ್ಥರು ಮತ್ತು ಆತ್ಮೀಯ ಪಾಲಕರು ಶುಭ ಹಾರೈಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ