ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸಲು ಶ್ರಮಿಸಿ

KannadaprabhaNewsNetwork |  
Published : Apr 11, 2025, 12:39 AM IST
ಈರಣ್ಣ ಕಡಾಡಿ ಕಾರ್ಯಕ್ರಮ ಉದ್ಘಾಟಿಸಿದರು. | Kannada Prabha

ಸಾರಾಂಶ

ಮನುಷ್ಯ ಅಧಿಕಾರ ಮತ್ತು ಐಶ್ವರ್ಯ ಕಳೆದುಕೊಂಡರೆ ಮರಳಿ ಪಡೆಯಬಹುದು. ಆದರೆ ಸಂಸ್ಕಾರ ಕಳೆದು ಹೋದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಭಾರತ ದೇಶದ ಆಚಾರ-ವಿಚಾರ ಮತ್ತು ಸಂಸ್ಕಾರಗಳನ್ನು ನಮ್ಮ ಪೂರ್ವಜರು ಆಚರಿಸಕೊಂಡು ಬಂದಿದ್ದು. ಅವರ ವಾರಸುದಾರರಾದ ನಾವು ಅವುಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕಲಿಸುವ ಮೂಲಕ ಋಣ ತೀರಿಸಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಮುಳ್ಳೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬೀರಲಿಂಗೇಶ್ವರ ಹಾಗೂ ವಿಠ್ಠಪ್ಪ ದೇವರ ದೇವಸ್ಥಾನ ಉದ್ಘಾಟನೆ, ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮತ್ತು ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ತಾಯಿ ಗರ್ಭದಿಂದಲೇ ಈ ಭೂಮಿಯ ಮತ್ತು ಸಮಾಜದ ಋಣದಲ್ಲಿ ಬೆಳೆದಿದ್ದಾನೆ. ಅದನ್ನು ತೀರಿಸಲು ಪ್ರತಿಯೊಬ್ಬರು ನಮ್ಮ ಸಂಸ್ಕಾರ ಅರಿಯಬೇಕು ಎಂದರು.

ಮನುಷ್ಯ ಅಧಿಕಾರ ಮತ್ತು ಐಶ್ವರ್ಯ ಕಳೆದುಕೊಂಡರೆ ಮರಳಿ ಪಡೆಯಬಹುದು. ಆದರೆ ಸಂಸ್ಕಾರ ಕಳೆದು ಹೋದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಇದನ್ನರಿತು ಮಕ್ಕಳಿಗೆ ಸಣ್ಣವರಿದ್ದಾಗಲೇ ಸಂಸ್ಕಾರ, ಆಚಾರ-ವಿಚಾರಗಳ ಕುರಿತು ಅರಿವು ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆಗಳು ಸೌಹಾರ್ದತೆ ಪ್ರತೀಕವಾಗಿವೆ. ಜಾತ್ರೆಗಳಲ್ಲಿ ಜಾತಿ, ಮತ, ಪಂತ, ರಾಜಕೀಯ ಬಡವ ಮತ್ತು ಶ್ರೀಮಂತ ಭೇದವಿಲ್ಲದೆ ಎಲ್ಲರೂ ಸೇರಿ ಆಚರಿಸುವ ಮುಖಾಂತರ ಸೌಹಾರ್ದತೆಯಿಂದ ಆಚರಿಸಲಾಗುತ್ತಿದೆ. ಇಂದಿನ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಆದ್ಯತೆ ನೀಡುವಷ್ಟು ಮತ್ಯಾವುದೆ ಕಾರ್ಯಕ್ಕೆ ನೀಡುವುದಿಲ್ಲ. ಐದು ನೂರು ವರ್ಷಗಳ ನಂತರ ನಡೆದ ರಾಮಮಂದಿರ ಉದ್ಘಾಟನೆ ಹಾಗೂ ಇತ್ತಿಚೆಗೆ ನಡೆದ ಪ್ರಯಾಗರಾಜ್‌ದ ಕುಂಭಮೇಳಗಳು ಇದಕ್ಕೆ ಸಾಕ್ಷಿಯಾಗಿವೆಂದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಶ್ರೀ ಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಗ್ರಾಮಗಳಲ್ಲಿ ಎಲ್ಲ ಜನಾಂಗದ ಸಹಕಾರದಿಂದ ನಿರ್ಮಾಣವಾದ ದೇವಸ್ಥಾನ ಮತ್ತು ಸಮುದಾಯ ಭವನಗಳು ಪುಂಡಪೋಕರಿಗಳ ತಾಣವಾಗದೇ ಸಮಾಜಮುಖಿ ಕಾರ್ಯಕ್ಕೆ ಮತ್ತು ಭಾರತೀಯ ಸಂಸ್ಕೃತೀಯ ಚಟುವಟಿಕೆ ನಡೆಯುವು ಸ್ಥಳಗಳಾಗಬೇಕು ಎಂದರು.

ಈಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ಸಾನ್ನಿಧ್ಯವಹಿಸಿದ್ದ ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯರು, ತೊರಗಲ್‌ ಚನ್ನಮಲ್ಲಶಿವಾಚಾರ್ಯರು, ಹುಲಜಂತಿ ಮಾಳಿಂಗರಾಯ ಮಹಾರಾಜರು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಕಟಕೋಳದ ಅಭಿನವ ಸಿದ್ಧರಾಜರು, ಮಲ್ಲಯ್ಯಸ್ವಾಮೀಜಿ, ಬಿಜೆಪಿ ಮುಖಂಡ ಪಿ.ಎಫ್.ಪಾಟೀಲ, ರಾಜ್ಯ ಕುರುಬರ ಸಂಘದ ನಿರ್ದೇಶಕ ಅಶೋಕ ಮೆಟಗುಡ್ಡ, ಬಸವರಾಜ ಸೋಮಗೊಂಡ, ಎಚ್.ಬಿ.ಕಿತ್ತೂರ, ಮಲ್ಲಪ್ಪ ಸೋಮಗೊಂಡ, ಸಿದ್ದು ಮೋಟೆ ಸೇರಿದಂತೆ ಹಲವರಿದ್ದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಪಡಿಯಪ್ಪ ಕ್ವಾರಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ವ್ಹಿ.ಕಲ್ಯಾಣಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ