ನಮ್ಮ ಬದುಕು ಸಮರ್ಪಣಾ ರೂಪದಲ್ಲಿರಲಿ: ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

KannadaprabhaNewsNetwork | Published : Apr 11, 2025 12:38 AM

ಸಾರಾಂಶ

ಶ್ರೀಕ್ಷೇತ್ರ ಇಟಗಿಯಲ್ಲಿ ಜರುಗುತ್ತಿರುವ ಶ್ರೀ ರಾಮೇಶ್ವರ ದೇವರ ಮತ್ತು ಪರಿವಾರ ದೇವತೆಗಳ ದಿವ್ಯಾಷ್ಟಬಂಧ ಮಹೋತ್ಸವದ ಸಂದರ್ಭದಲ್ಲಿ ಗುರುವಾರ ಜರುಗಿದ ಧರ್ಮಸಭೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪೀಠಾಧೀಶರಾದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಸಿದ್ದಾಪುರ: ಯಜ್ಞ ಎಂದರೆ ತ್ಯಾಗ. ಭಗವಂತನ ಜತೆಗಿನ ಬಾಂಧವ್ಯ ಕೂಡ. ನಮ್ಮ ಬದುಕು ಯಜ್ಞವಾಗಬೇಕು. ಆ ರೀತಿ ಸಮರ್ಪಣಾರೂಪವಾಗಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧೀಶರಾದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಶ್ರೀಕ್ಷೇತ್ರ ಇಟಗಿಯಲ್ಲಿ ಜರುಗುತ್ತಿರುವ ಶ್ರೀ ರಾಮೇಶ್ವರ ದೇವರ ಮತ್ತು ಪರಿವಾರ ದೇವತೆಗಳ ದಿವ್ಯಾಷ್ಟಬಂಧ ಮಹೋತ್ಸವದ ಸಂದರ್ಭದಲ್ಲಿ ಗುರುವಾರ ಜರುಗಿದ ಧರ್ಮಸಭೆಯಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಅನಾದಿ ಕಾಲದಲ್ಲಿ ಯಜ್ಞ-ಯಾಗಗಳು ನಿರಂತರವಾಗಿ ಜರುಗುತ್ತಿದ್ದ ಇಟಗಿ ಕ್ಷೇತ್ರದಲ್ಲಿ ನಡೆದಿದ್ದರಿಂದ ಇಟಗಿಗೆ ಹಿಂದೆ ಇಷ್ಟಿಕಾಪುರ ಎನ್ನುವ ಹೆಸರು ಬಂತು. ನಂತರದಲ್ಲಿ ಯಜ್ಞ-ಯಾಗಾದಿಗಳ ಸ್ಥಾನದಲ್ಲಿ ಪೂಜೆಗಳು ನಡೆಯತೊಡಗಿದವು. ಪರಿಪೂರ್ಣ ದೇವಾಲಯ ಇಲ್ಲಿನದು. ಈಶ್ವರ ತನಗಿಂತ ತನ್ನ ಗಣಗಳಿಗೆ ಸತ್ಕಾರ ದೊರೆತರೆ ಸಂತೋಷ ಪಡುವ ದೇವರು. ಆ ಕಾರಣದಿಂದ ಇಲ್ಲಿ ತ್ರಿಕಾಲ ಬಲಿಪೂಜೆ ನಡೆಯುತ್ತದೆ. ಈಶ್ವರ ನಾಲ್ಕು ಹಸ್ತಗಳಲ್ಲಿ ಒಂದರಲ್ಲಿ ಮೃಗರೂಪದಲ್ಲಿರುವ ಯಜ್ಞವಿದೆ. ಆ ಕಾರಣದಿಂದ ಅಷ್ಟಬಂಧ ಕಾರ್ಯಕ್ರಮ ಮೃಗಶಿರ ನಕ್ಷತ್ರದಿಂದ ತೊಡಗಿ, ಆರ್ದ್ರಾ ನಕ್ಷತ್ರದಲ್ಲಿ ಕೊನೆಗೊಂಡಿದೆ. ಈ ದೇವಾಲಯವನ್ನು ಅಭಿವೃದ್ಧಿಪಡಿಸಿದ ಬಿಳಗಿ ಅರಸರನ್ನು ನೆನಪಿಸಿಕೊಳ್ಳಬೇಕು. ಅರಸೊತ್ತಿಗೆ ಅಳಿದರೂ ಅವರು ಕಟ್ಟಿಸಿದ ದೇವಾಲಯ ಉಳಿದಿದೆ. ಇಟಗಿಯ ರಾಮೇಶ್ವರ ಮತ್ತು ಭುವನಗಿರಿಯ ಭುವನೇಶ್ವರಿ ಈ ಭಾಗದ ಜನರಿಗೆ ತಂದೆ ತಾಯಿಯರಿದ್ದಂತೆ. ಮುಂದಿನ ದಿನಗಳಲ್ಲಿ ಕಾಲಕ್ಕೆ ಸರಿಯಾಗಿ ಅಷ್ಟಬಂಧ ಕಾರ್ಯಗಳು ನಡೆಯುವಂತಾಗಲಿ ಎಂದು ನುಡಿದರು. ಸಾನ್ನಿಧ್ಯ ವಹಿಸಿದ್ದ ಹಾಸನದ ಶ್ರೀ ರಾಮಾವಧೂತ ಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀರಾಮ ತನ್ನ ನಡೆಯಲ್ಲಿಯೇ ಧರ್ಮವನ್ನು ಪರಿಪಾಲನೆ ಮಾಡಿದ್ದಾನೆ. ಅಗೋಚರವಾದ ಶಕ್ತಿ ಇರುವುದರಿಂದಲೇ ಧರ್ಮ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ. ಭಾವ ಸಮುದ್ರವನ್ನು ದಾಟಲು ಜ್ಞಾನದ ಅವಶ್ಯಕತೆ ಇದೆ ಎಂದರು.

ವೇದಮೂರ್ತಿ ಶಂಕರ ಭಟ್ಟ ಕಟ್ಟೆ ಅಷ್ಟಬಂಧ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದರು. ಇತಿಹಾಸ ಸಂಶೋಧಕ ಡಾ. ಲಕ್ಷ್ಮೀಶ ಹೆಗಡೆ ಸೋಂದಾ ಇಟಗಿ ರಾಮೇಶ್ವರ ದೇವಾಲಯದ ಇತಿಹಾಸದ ಕುರಿತು ಉಪನ್ಯಾಸ ನೀಡಿದರು.

ದೇವಾಲಯದ ಮೊಕ್ತೇಸರ ಮಂಡಳಿ ಅಧ್ಯಕ್ಷ ಚಂದ್ರಶೇಖರ ಹೆಗಡೆ ಕೊಡ್ತಗಣಿ ಉಪಸ್ಥಿತರಿದ್ದರು.

ಅಷ್ಟಬಂಧ ಸಮಿತಿಯ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಜಾನನ ಹೆಗಡೆ ಕೊಡ್ತಗಣಿ ಅಷ್ಟಬಂಧ ಕಾರ್ಯಕ್ರಮ ಅವಲೋಕನ ವಾಚಿಸಿದರು. ಅಷ್ಟಬಂಧ ಸಮಿತಿಯ ಸದಸ್ಯರು, ದೇವಾಲಯ ಮೊಕ್ತೇಸರ ಮಂಡಳಿಯ ಸದಸ್ಯರು ಇದ್ದರು. ಗಣಪತಿ ಹೆಗಡೆ ಗುಂಜಗೋಡು ನಿರೂಪಿಸಿದರು.

Share this article