ರಾಜ್ಯ ಸರ್ಕಾರದಿಂದ ಮುಸ್ಲಿಮರ ಓಲೈಕೆ, ಹಿಂದೂಗಳಿಗೆ ಅಪಮಾನ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

KannadaprabhaNewsNetwork | Updated : Apr 11 2025, 06:05 AM IST

ಸಾರಾಂಶ

 ಮುಸ್ಲಿಮರನ್ನು ಓಲೈಸಲು, ಹಿಂದೂಗಳನ್ನು ಅಪಮಾನ ಮಾಡುತ್ತಿರುವ ರಾಜ್ಯ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕುವ ಶಕ್ತಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಇದೆ. ಈ ಕಾಲ ಸಮೀಪಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗುಡುಗಿದರು.

 ಚಿಕ್ಕಮಗಳೂರು : ಮುಸ್ಲಿಮರನ್ನು ಓಲೈಸಲು, ಹಿಂದೂಗಳನ್ನು ಅಪಮಾನ ಮಾಡುತ್ತಿರುವ ರಾಜ್ಯ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕುವ ಶಕ್ತಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಇದೆ. ಈ ಕಾಲ ಸಮೀಪಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗುಡುಗಿದರು.

ಕಳೆದ ನಾಲ್ಕು ದಿನಗಳ ಹಿಂದೆ ಮೈಸೂರಿನಿಂದ ಹೊರಟು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಗುರುವಾರ ಸಂಜೆ ಕಾಫಿ ನಾಡಿಗೆ ಆಗಮಿಸಿದ್ದ ಜನಾಕ್ರೋಶ ಯಾತ್ರೆಯ ಅಂಗವಾಗಿ ನಗರದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಜನ ವಿರೋಧಿ, ಭ್ರಷ್ಟ ಹಾಗೂ ಬೆಲೆ ಏರಿಕೆಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ರಾಜ್ಯಾದ್ಯಂತ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು. 

ನುಡಿದಂತೆ ನಡೆದ ಸರ್ಕಾರ ಎಂಬ ಜಾಹಿರಾತು ನೀಡುತ್ತಿದ್ದಾರೆ. ಇದು, ನುಡಿದಂತೆ ನಡೆದ ಅಲ್ಲ, ಎಡವಿ ಬಿದ್ದ ಸರ್ಕಾರ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. 20 ತಿಂಗಳಲ್ಲಿ 3 ಬಾರಿ ಹಾಲಿನ ದರ ಏರಿಕೆ ಜತೆಗೆ ಡಿಸೇಲ್ ಬೆಲೆ ಹೆಚ್ಚಿದೆ. ರೈತರು ಪಂಪ್ ಸೆಟ್‌ಗಳಿಗೆ ಡಿಸೇಲ್ ಹಾಕಲು ಹೊರೆಯಾಗಿದೆ. ಟ್ರಾನ್ಸ್ ಫಾರ್ಮರ್ ತೆಗೆದುಕೊಳ್ಳಲು ರೈತರು ₹3 ಲಕ್ಷ ಕಟ್ಟಬೇಕಾಗಿದೆ. ಪೊಲೀಸರಿಗೆ ಸಂಬಳದ ಹಣ ಬಿಡುಗಡೆಯಾಗಿಲ್ಲ. ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನ ₹800 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಎಂ ಸಿದ್ದರಾಮಯ್ಯ 16ನೇ ಬಜೆಟ್ ಮಂಡನೆ ವೇಳೆ ತಜ್ಞರ ಸಮಿತಿ ರಚನೆ ಮಾಡಿಕೊಂಡಂತೆ ಕಾಣುತ್ತದೆ. ಅದರ ಸಲಹೆಯಂತೆ ಮೂರ್ಖರಂತೆ ದಿನೇ ದಿನೇ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಕಡಿಕಾರಿದರು.

ಸಿದ್ದರಾಮಯ್ಯ ಅವರು ಕೇವಲ ಬೆಂಗಳೂರಿಗೆ ಮಾತ್ರ ಮುಖ್ಯಮಂತ್ರಿ ಎನ್ನುವಂತಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿಲ್ಲ. ಸಿಎಂ ಮೊದಲು ರಾಜ್ಯ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಬೇಕು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ ಹಣವನ್ನೇ ನೀಡುತ್ತಿಲ್ಲ. ಇದೇ ಕಾರಣದಿಂದಾಗಿ ಕಾಂಗ್ರೆಸ್ ಶಾಸಕರೇ ಆದ ರಾಜು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ. ಇದು ರಾಜ್ಯದ ಆರ್ಥಿಕ ದುಸ್ಥಿತಿ ತೋರುತ್ತದೆ ಎಂದರು.

ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್ಸಿಗರು 40% ಲಂಚದ ಆರೋಪ ಮಾಡಿದ್ದರು. ಆದರೆ ಯಡಿಯೂರಪ್ಪ ಅವಧಿಯಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿತ್ತು. ಆದರೆ ಇಂದು ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿ ಯಲ್ಲಿ ರಾಜ್ಯ ಭ್ರಷ್ಟಾಚಾರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದರ ಕೀರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ರಾಜ್ಯದ ಭ್ರಷ್ಟಾಚಾರದ ಬಗ್ಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಲೇವಡಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಹಾಗೂ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದೆ. ಮುಲ್ಲಾಗಳ ಕಣ್ಣಿಗೆ ಬೆಣ್ಣೆ ಹಚ್ಚಿದರೆ, ದಲಿತರು ಹಿಂದುಳಿದವರು ಸೇರಿದಂತೆ ಹಿಂದೂಗಳ ಕಣ್ಣಿಗೆ ಸುಣ್ಣಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಎಂದರೆ ಬ್ರಹ್ಮಾಂಡ ಭ್ರಷ್ಟಾಚಾರ. ಬಿಜೆಪಿ ಅಧಿಕಾರದಲ್ಲಿದ್ದಾಗ ಟ್ರಾನ್ಸ್‌ ಫಾರ್ಮರ್‌ ದರ ಕೇವಲ ₹25 ಸಾವಿರ ಇತ್ತು. ಆದರೆ ಇಂದು ರೈತರು ₹3 ಲಕ್ಷ ಪಾವತಿಸಬೇಕಾಗಿದೆ. ₹20 ರು. ಸ್ಟಾಂಫ್‌ ಪೇಪರ್ ಬೆಲೆ ₹100 ರು ಆಗಿದೆ. ಬಸ್ ಹಾಲು ವಿದ್ಯುತ್ ನೀರು ಹೀಗೆ ಪ್ರತಿಯೊಂದರ ದರ ಏರಿಸಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಮರಣ ಪ್ರಮಾಣ ಪತ್ರದ ಬೆಲೆ ಹೆಚ್ಚಿಸಿದ್ದೆ ಕಾಂಗ್ರೆಸ್ಸಿಗರ ಸಾಧನೆ ಎಂದು ಟೀಕಿಸಿದರು.

ಸಭೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ರವಿ ಕುಮಾರ್, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ, ಮಾಜಿ ಸಚಿವ ಜೀವರಾಜ್, ಮಾಜಿ ಶಾಸಕ ಡಿ.ಎಸ್‌. ಸುರೇಶ್‌, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ಇದ್ದರು.- ಬಾಕ್ಸ್‌-ಸಾವಿನ ಗ್ಯಾರಂಟಿಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಭಾರಿ ಗ್ಯಾರಂಟಿಗಳಿವೆ. ಬಾಣಂತಿ ಮತ್ತು ಮಕ್ಕಳಿಗೆ ಸಾವಿನ ಗ್ಯಾರಂಟಿ, ನಿಷ್ಠಾವಂತರಿಗೆ ನೇಣಿನ ಹಗ್ಗದ ಗ್ಯಾರಂಟಿ, ಪ್ರಾಮಾಣಿಕರಿಗೆ ವರ್ಗಾವಣೆ ಗ್ಯಾರಂಟಿ, ಅನ್ನದಾತರಿಗೆ ಆತ್ಮಹತ್ಯೆ ಗ್ಯಾರಂಟಿ, ಜನಸಾಮಾನ್ಯರಿಗೆ ಬೆಲೆ ಏರಿಕೆ ಗ್ಯಾರಂಟಿ, ಗುತ್ತಿಗೆಯಲ್ಲಿ ಶೇ. 60 ರಷ್ಟು ಕಮಿಷನ್ ಗ್ಯಾರಂಟಿ, ನ್ಯಾಯ ಕೇಳಿದವರಿಗೆ ಅಮಾನತ್ತಿನ ಗ್ಯಾರಂಟಿ, ಪ್ರಶ್ನೆ ಮಾಡಿದವರಿಗೆ ಹನಿ ಟ್ರ್ಯಾಪ್ ಗ್ಯಾರಂಟಿ ಹೀಗೆ ಹಲವು ಗ್ಯಾರಂಟಿಗಳು ರಾಜ್ಯದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲಾ ಗ್ಯಾರಂಟಿಗಳು ರಾಜ್ಯ ಸರ್ಕಾರದ ವಾಸ್ತವಕ್ಕೆ ಹಿಡಿದಿರುವ ಕೈಗನ್ನಡಿ. ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲಾ ಸಿಎಂ ಗಳು ಮಾಡಿದ ಸಾಲಕ್ಕಿಂತ ಶೇ.50 ರಷ್ಟು ಹೆಚ್ಚು ಸಾಲ ಮಾಡಿದ ಕುಖ್ಯಾತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಟೀಕಿಸಿದರು.

 ಲಾಟರಿಯಲ್ಲಿ ಗೆದ್ದವರಿಗೆ ತಲೆ ನಿಲ್ಲುವುದಿಲ್ಲ

ಲಾಟರಿಯಲ್ಲಿ ಕೆಲವರು ಗೆದ್ದು ಬೀಗುತ್ತಿದ್ದಾರೆ. ಹೀಗೆ ಗೆದ್ದವರಿಗೆ ಅಧಿಕಾರ ಸಿಕ್ಕಾಕ್ಷಣ ಕತ್ತಿನ ಮೇಲೆ ತಲೆಯೇ ನಿಲ್ಲುವುದಿಲ್ಲ. ಆಕಸ್ಮಿಕವಾಗಿ ಪೂರ್ವ ಜನ್ಮದ ಪುಣ್ಯದಿಂದ ಗೆದ್ದವರು ಇದೀಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೆಸರನ್ನು ಉಲ್ಲೇಖಿಸದೆ ಶಾಸಕ ಎಚ್.ಡಿ.ತಮ್ಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಲಾಟರಿಯಲ್ಲಿ ಗೆದ್ದವರು ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಹೀಗಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ಸರಿಯಾಗಿದೆ ಎನ್ನುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇರುವುದಕ್ಕೆ ಭಾರತ ಉಳಿದಿದೆ ಎನ್ನುವುದನ್ನು ಮೊದಲು ಅವರು ಅರಿಯಬೇಕು ಎಂದರು.

   ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಹಣ ಮೀಸಲಿಡುತ್ತಾರೆ. ಆದರೆ ಲವ್ ಜಿಹಾದ್ ಗೆ ಬಲಿಯಾಗುತ್ತಿರುವುದು ಹಿಂದೂ ಹೆಣ್ಣುಮಕ್ಕಳು. ಹೀಗಾಗಿ ಹಿಂದೂ ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಮೊದಲು ಹಣ ಮೀಸಲಿಡ ಬೇಕು. ಮುಸ್ಲಿಂ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು ₹30 ಲಕ್ಷ ನೀಡಲಾಗುತ್ತಿದೆ. ಇದನ್ನು ಹಿಂದೂ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು.- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

 ಸರ್ಕಾರಕ್ಕೆ ಹಲಾಲ್ ಕಟ್ ಮಾಡಿಸಿಕೊಂಡಿದ್ದಾರೆ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರವನ್ನು ಹಲಾಲ್ ಕೋರ್ ಸರ್ಕಾರ ಎನ್ನುತ್ತಿದ್ದಾರೆ. ಅತ್ಯಾಚಾರ ಹಾಗೂ ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. ಅಡುಗೆ ಎಣ್ಣೆ ಹಾಗೂ ಕುಡಿವ ಎಣ್ಣೆಯ ಬೆಲೆ ಏರಿಸಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ 

ಸಿ.ಟಿ.ರವಿ,

ವಿಧಾನ ಪರಿಷತ್ ಸದಸ್ಯರು

10 ಕೆಸಿಕೆಎಂ 2ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಚಿಕ್ಕಮಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು.

10 ಕೆಸಿಕೆಎಂ 3ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಚಿಕ್ಕಮಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು.

Share this article