ಮುಂಡರಗಿ: ಗದಗ ಜಿಪಂ ಸಿಇಒ ಭರತ್ ಎಸ್. ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಕ್ಲಾಸಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಗುರುವಾರ ದಿಢೀರ್ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟ ಸವಿದು ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಿದರು.
ಡಂಬಳ, ಮೇವುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿದ್ದ ವಿವಿಧ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ಅವರು ವಿವಿಧ ಸರಕಾರಿ ಶಾಲೆಗಳಿಗೂ ದಿಢೀರ್ ಭೇಟಿ ನೀಡಿ ಬೋಧನಾ ಗುಣಮಟ್ಟ, ಶೌಚಾಲಯ, ಸ್ವಚ್ಛ ಕುಡಿಯುವ ನೀರಿನ ಸೌಲಭ್ಯ, ಅಡುಗೆ ಕೋಣೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಅವಲೋಕಿಸಿದರು.ಇದೇ ವೇಳೆ ಅಡುಗೆ ಸಿಬ್ಬಂದಿಯೊಂದಿಗೆ ಮಾತನಾಡಿ, ಬಿಸಿಯೂಟಕ್ಕೆ ಬಳಸುವ ತರಕಾರಿ, ಮಕ್ಕಳಿಗೆ ವಿತರಿಸುವ ಶೇಂಗಾ ಚಿಕ್ಕಿ, ಮೊಟ್ಟೆ, ಬಾಳೆಹಣ್ಣಿನ ಬಗ್ಗೆ ಮಾಹಿತಿ ಪಡೆದರು.
ಶಾಲಾ ಮಕ್ಕಳಿಗೆ ವಿತರಿಸಲಾಗುವ ಊಟದ ಕುರಿತು ಅಕ್ಷರ ದಾಸೋಹದ ಕೊಠಡಿಗಳಿಗೆ ಭೇಟಿ ನೀಡಿ ದವಸ-ಧಾನ್ಯ, ತರಕಾರಿಗಳನ್ನು ಪರೀಕ್ಷಿಸಿದರು. ಸ್ವತಃ ಅನ್ನ, ಸಾಂಬಾರ್ ಮತ್ತು ಶೇಂಗಾ ಚಿಕ್ಕಿ ಸವಿದು ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದರು. ಇದಕ್ಕೂ ಮೊದಲು ಭೇಟಿ ನೀಡಿದ ಮೇವುಂಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕೆಲಹೊತ್ತು ಪ್ರಶ್ನೋತ್ತರ ನಡೆಸಿದ ಅವರು, ಮೂಲಭೂತ ಸೌಕರ್ಯ ಹಾಗೂ ಇನ್ನಿತರೆ ಸೌಲಭ್ಯಗಳ ಕುರಿತು ಪ್ರಶ್ನೆ ಕೇಳಿ ವಿದ್ಯಾರ್ಥಿಗಳಿಂದಲೇ ಉತ್ತರ ಪಡೆದರು.ನಂತರ ಯಕ್ಲಾಸಪೂರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಅನಾವಶ್ಯಕವಾಗಿ ಗೈರು ಹಾಜರಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.ಅಲ್ಲದೇ ಯಕ್ಲಾಸಪೂರ ಗ್ರಾಮಸ್ಥರ ಮನವಿಯ ಮೇರೆಗೆ ದುಸ್ಥಿತಿಯಲ್ಲಿರುವ ಗ್ರಾಮದ ಶಾಲಾ ಆವರಣದ ಕಾಂಪೌಂಡ್ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪಿಡಿಒ ಅಕ್ಕಮಹಾದೇವಿ ಅವರಿಗೆ ಸೂಚಿಸಿದರು. ಅಲ್ಲದೇ ಶಾಲಾ ಶಿಕ್ಷಕರ ಸಂಖ್ಯೆಯ ಬಗೆಗೂ ಮಾಹಿತಿ ಪಡೆದರು. ಈ ವೇಳೆ ಎಡಿಪಿಸಿ ಕಿರಣಕುಮಾರ್, ಪಿಡಿಒ ಅಕ್ಕಮಹಾದೇವಿ, ಪ್ರಧಾನ ಶಿಕ್ಷಕಿ ಟಿ. ಇಮಾಂಬಿ, ಸಿಆರ್‌ಪಿ ಎನ್.ಎಂ. ಕುಕನೂರ, ಗ್ರಾಪಂ ಸದಸ್ಯರು, ಶಾಲಾ ಸುಧಾರಣಾ ಸಮಿತಿ ಸದಸ್ಯರು ಹಾಗೂ ತಾಪಂ, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.