ಮಾಗಡಿ: ತಾಲೂಕಿನ ಮಾಡಬಾಳ್ ಮತ್ತು ಕಲ್ಯಾ ಗ್ರಾಪಂ ವ್ಯಾಪ್ತಿಯ ಎಸ್‌ಬಿಎಂ ಹಾಗೂ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಹಾಗೂ ಇತರೆ ಅಧಿಕಾರಿಗಳು ವೀಕ್ಷಿಸಿದರು.
ತಾಲೂಕಿನ ಮಾಡಬಾಳ್ ಗ್ರಾಪಂ ವ್ಯಾಪ್ತಿಯ ಸೊಣ್ಣೇನಹಳ್ಳಿ ಮತ್ತು ಬಾಳೆಕಟ್ಟೆ ಗ್ರಾಮದ ಕಮ್ಯುನಿಟಿ ಸೋಕ್‌ಪಿಟ್,ತೂಬಿನಕೆರೆ ಗ್ರಾಮದ ಚರಂಡಿ ಸಂಸ್ಕರಣಾ ಕಾಮಗಾರಿ, ಗೊಲ್ಲರಹಟ್ಟಿ ಮತ್ತು ವಿಠಲಾಪುರದ ಕಮ್ಯುನಿಟಿ ಸೋಕ್‌ಪಿಟ್, ದ್ರವ ತ್ಯಾಜ್ಯ ಘಟಕ ಕಾಮಗಾರಿ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ದ್ರವ ತ್ಯಾಜ್ಯ ನಿರ್ವಹಣೆ ಕಾಮಗಾರಿಗಳ ಪ್ರಗತಿ ಕುರಿತು ಸದರಿ ಕಾಮಗಾರಿಗೆ ಡಿಪಿಆರ್ ಪ್ರಕಾರ ಕ್ರಿಯಾ ಯೋಜನೆ, ಅಂದಾಜು ಪಟ್ಟಿ, ಖರ್ಚಾದ ಮಾಹಿತಿ ಪಡೆದುಕೊಂಡರು.ಸ್ವಚ್ಛ ಭಾರತ್ ಮಿಷನ್ ಯೋಜನೆಯ ಇತರೆ ಘಟಕಾಂಶಗಳಾದ ಆಟೋ ಮೂಲಕ ಪ್ರತಿದಿನ ತ್ಯಾಜ್ಯ ಸಂಗ್ರಹಿಸುತ್ತಿರುವ, ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ, ವೈಯಕ್ತಿಕ ಶೌಚಾಲಯ ಇತರೆ ಘಟಕಾಂಶಗಳ ಪ್ರಗತಿ ಬಗ್ಗೆ ಸಮಾಲೋಚನೆ ನಡೆಸಿದರು.
ಇದಕ್ಕೂ ಮುನ್ನ ಮಾಡಬಾಳ್ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿದ ಸಿಇಒ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಸೃಜನೆ, ವೈಯಕ್ತಿಕ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಈಗಾಗಲೇ ನರೇಗಾ ಯೋಜನೆಯಲ್ಲಿ ನಮ್ಮ ಜಿಲ್ಲೆ ಪ್ರಗತಿ ಸಾಧಿಸಿದೆ ಮುಂದೆಯೂ ಕೂಡ ಎಲ್ಲರೂ ಉತ್ಸಾಹದಿಂದ ಯೋಜನೆಯ ಸದುಪಯೋಗವನ್ನು ಜನರಿಗೆ ತಲುಪಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿಗಳು ಚಿಕ್ಕಸುಬ್ಬಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ಸಹಾಯಕ ನಿರ್ದೇಶಕರು ಹೆಚ್.ಕೆ ಗಂಗಾಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕ ಮಹೇಶ್, ಸಹಾಯಕ ಅಭಿಯಂತರರಾದ ಪ್ರದೀಪ್, ಐಶ್ವರ್ಯ, ಎಸ್‌ಬಿಎಂ ಸಮಾಲೋಚಕ ಸೀನಪ್ಪ, ಐಇಸಿ ಸಂಯೋಜಕ ರವಿ ಅತ್ನಿ, ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
19ಮಾಗಡಿ2 :ಮಾಗಡಿ ತಾಲೂಕಿನ ಮಾಡಬಾಳ್ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಯನ್ನು ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಮತ್ತಿತರ ಅಧಿಕಾರಿಗಳು ಪರಿಶೀಲಿಸಿದರು.