ಕನ್ನಡಪ್ರಭ ವಾರ್ತೆ ಕುಮಟಾ
ಜಿಲ್ಲಾದ್ಯಂತ ಆಶ್ರಯ ವಸತಿ ಯೋಜನೆಗಳ ಫಲಾನುಭವಿಗಳಿಗೆ ಜಿಪಿಎಸ್ ಕಂಟಕ ಎದುರಾಗಿದೆ. ಕುಮಟಾ ತಾಲೂಕೊಂದರಲ್ಲೇ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ೧೦೦ಕ್ಕೂ ಹೆಚ್ಚು ವಸತಿ ಯೋಜನೆಯ ನಿರ್ಮಾಣ ಕಾರ್ಯ ಅಡಕತ್ತರಿಗೆ ಸಿಲುಕಿದೆ. ಏಕೆಂದರೆ ಸುಮಾರು ಒಂದೂವರೆ ತಿಂಗಳಿಂದ ಯಾವುದೇ ಆಶ್ರಯ ವಸತಿ ಯೋಜನೆಯ ಫಲಾನುಭವಿಗೆ ನಿರ್ಮಾಣ ಕಾರ್ಯ ಮುಂದುವರಿಸಲು ಆಗುತ್ತಿಲ್ಲ ಮತ್ತು ಹಣವೂ ಬಿಡುಗಡೆ ಅಸಾಧ್ಯವಾಗಿದೆ. ಕಾರಣ ವಸತಿ ನಿರ್ಮಾಣದ ಸ್ಥಳ ಚಿತ್ರಣ (ಜಿಪಿಎಸ್) ದಾಖಲಿಸುವ ಮೊಬೈಲ್ ಆ್ಯಪ್‌ಗೆ ತಾಂತ್ರಿಕ ತೊಂದರೆಯಾಗಿದೆ. ಆಶ್ರಯ ಅಪ್ಲಿಕೇಶನ್‌ನಲ್ಲಿ ಜಿಪಿಎಸ್ ಫೋಟೋ ಅಪ್ ಲೋಡ್ ಆಗುತ್ತಿಲ್ಲ. ಜಿಪಿಎಸ್ ಫೋಟೋ ಅಪ್ ಲೋಡ್ ಆಗದೇ ಫಲಾನುಭವಿಗೆ ಮನೆಯನ್ನು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮುಂದುವರಿಸಲು ಆಸ್ಪದ ಇಲ್ಲದಂತಾಗಿದೆ.
ದೇವಗಿರಿ ಪಂಚಾಯಿತಿಯಲ್ಲಿ ಇಂಥ ಸಮಸ್ಯೆ ಇದೆ ಎಂದು ಪಿಡಿಒ ವಿನಯಕುಮಾರ ನಾಯ್ಕ ದೃಢಪಡಿಸಿದ್ದರೆ, ಮೂರೂರು-ಕಲ್ಲಬ್ಬೆ ಪಂಚಾಯಿತಿಗಳಲ್ಲೂ ಇದೇ ಸಮಸ್ಯೆಯಿಂದ ವಸತಿ ನಿರ್ಮಾಣ ಕಾರ್ಯ ಕುಂಠಿತಗೊಂಡಿದೆ ಎಂದು ಪಿಡಿಒ ರಶ್ಮಿಕುಮಾರಿ ಹೇಳುತ್ತಾರೆ. ಪಟ್ಟಣ ವ್ಯಾಪ್ತಿಯಲ್ಲೂ ಇದೇ ಸಮಸ್ಯೆ ಕಂಡು ಬಂದಿದೆ ಎಂದು ಪುರಸಭೆಯ ಸಮುದಾಯ ಸಂಘಟಕಿ ಮೀನಾಕ್ಷಿ ಆಚಾರಿ ವಿವರಿಸಿದ್ದಾರೆ.ಆಶ್ರಯ ಅಪ್ಲಿಕೇಶನ್ ಸಮಸ್ಯೆಯನ್ನು ಶೀಘ್ರ ಸರಿಪಡಿಸದಿದ್ದರೆ ಸಾವಿರಾರು ಫಲಾನುಭವಿಗಳು ಮಳೆಗಾಲದ ಹೊತ್ತಿಗೆ ತೀವ್ರ ಸಮಸ್ಯೆ ಎದುರಿಸಲಿದ್ದಾರೆ. ಹೊಸ ಮನೆಯ ಕನಸು ಹೊತ್ತು ತುರ್ತು ವಸತಿಯಲ್ಲಿ ಕಾಲಕಳೆಯುತ್ತಿದ್ದವರ ಪರಿಸ್ಥಿತಿ ಆತಂಕಕಾರಿಯಾಗಲಿದೆ. ಇಷ್ಟಕ್ಕೂ ಅಪ್ಲಿಕೇಶನ್ ಸರಿಪಡಿಸದೇ ವಸತಿ ಯೋಜನೆಯ ಪ್ರಗತಿಯೇ ಅಸಾಧ್ಯ ಎಂಬ ಕಾರಣದಿಂದ ಕೂಡಲೇ ಸಂಬಂಧಪಟ್ಟವರು, ಸಚಿವರು, ತಾಂತ್ರಿಕ ನಿಪುಣರು ಗಮನಹರಿಸಬೇಕಿದೆ.
ವಸತಿ ಯೋಜನೆ ಮಾಹಿತಿ-ಜಿಪಿಎಸ್ ದಾಖಲೀಕರಣಕ್ಕೆ ಅಧಿಕಾರಿಗಳು ಬಳಸುತ್ತಿದ್ದ ಆಶ್ರಯ ೩.೦ ಅಪ್ಲಿಕೇಶನ್ ಅನ್ನು ತಿಂಗಳ ಹಿಂದೆ ಮೇಲ್ದರ್ಜೆಗೇರಿಸಿ ಆಶ್ರಯ ೪.೦ ಅಪ್ಲಿಕೇಶನ್ ಎಲ್ಲೆಡೆ ಅಳವಡಿಸಿಕೊಳ್ಳಲು ತಿಳಿಸಲಾಗಿತ್ತು. ಅದರಂತೆ ಹಳೆಯ ಅಪ್ಲಿಕೇಶನ್ ಅಳಿಸಿಯೇ ಹೊಸ ಅಪ್ಲಿಕೇಶನ್ ಇನ್‌ಸ್ಟಾಲ್ ಆಗುತ್ತಿದ್ದು, ಇದರಿಂದ ಹಳೆಯ ಅಪ್ಲಿಕೇಶನ್ ನಲ್ಲಿ ದಾಖಲಾದ ಮಾಹಿತಿಗಳು ಅಳಿಸಿ ಹೋಗುತ್ತಿವೆ. ಹೊಸ ಅಪ್ಲಿಕೇಶನ್ ಸಮರ್ಪಕ ಕಾರ್ಯನಿರ್ವಹಿಸುತ್ತಿಲ್ಲ. ಮತ್ತು ಹೊಸದಾಗಿ ತೆಗೆದ ಜಿಪಿಎಸ್ ಫೋಟೋ ದಾಖಲೆ ಕೇಂದ್ರಕ್ಕೆ ಅಪ್ ಲೋಡ್ ಆಗುತ್ತಿಲ್ಲ. ಹೀಗಾಗಿ ತೊಂದರೆ ಶುರುವಾಗಿದೆ. ತಿಂಗಳಾದರೂ ವ್ಯವಸ್ಥೆ ಸರಿಪಡಿಸಿಲ್ಲ. ಎಲ್ಲ ಪ್ರಗತಿಯಲ್ಲಿರುವ ವಸತಿ ಫಲಾನುಭವಿಗಳಿಗೆ ಸಮಸ್ಯೆಯಾಗಿದ್ದು, ಮಳೆಗಾಲದೊಳಗೆ ವಸತಿ ನಿರ್ಮಿಸಿಕೊಳ್ಳದಿದ್ದರೆ ಫಲಾನುಭವಿಯ ಸಂಕಟ ಬಿಗಡಾಯಿಸಬಹುದು. ಹೀಗಾಗಿ, ಸಂಬಂಧಪಟ್ಟವರು ಆಶ್ರಯ ೪.೦ ಅಪ್ಲಿಕೇಶನ್ ಶೀಘ್ರ ದುರಸ್ತಿ ಮಾಡಬೇಕಿದೆ.
ಫಲಾನುಭವಿಗಳಿಗೆ ತೊಂದರೆಹೆಚ್ಚು ಮಳೆಯಾಗುವ ಹಾಗೂ ಪ್ರವಾಹ ಸಂಭವನೀಯ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಗಾಲ ಆರಂಭದೊಳಗೆ ಹೊಸ ಮನೆ ಕಟ್ಟಿ ಮುಗಿಯದಿದ್ದರೆ ಫಲಾನುಭವಿಗಳಿಗೆ ತೀವ್ರ ತೊಂದರೆ ಕಟ್ಟಿಟ್ಟ ಬುತ್ತಿ. ಏಕೆಂದರೆ ಹೊಸ ಮನೆ ಕಟ್ಟುವಾಗ ಸನಿಹದಲ್ಲೇ ಚಿಕ್ಕ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದರೆ, ಸಾಫ್ಟವೇರ್‌ನ ತಾಂತ್ರಿಕ ಸಮಸ್ಯೆಯಿಂದ ಹಲವಾರು ಫಲಾನುಭವಿಗಳ ಮನೆಗಳಿಗೆ ಮಳೆ ಬೀಳುವುದರೊಳಗೆ ಛಾವಣಿ ಮುಗಿಸುವುದು ಅನುಮಾನ ಎಂಬಂತಾಗಿದೆ. ವಾಡಿಕೆ ಮಳೆ ಮುಂಚಿತವಾಗಿ ಬಂದರೆ ಇನ್ನೂ ಕಷ್ಟ. ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲ, ಬಹುಶಃ ಇಡೀ ರಾಜ್ಯದಲ್ಲೇ ವಸತಿ ಫಲಾನುಭವಿಗಳಿಗೆ ಈ ಸಮಸ್ಯೆಯಾಗುತ್ತಿದೆ ಎಂದು ದೇವಗಿರಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಟಿ. ನಾಯ್ಕ ಹೇಳಿದ್ದಾರೆ.