- ದಾವಣಗೆರೆ ವಿವಿಯಲ್ಲಿ ಉನ್ನತ ಶಿಕ್ಷಣದ ಅಂತರ ರಾಷ್ಟ್ರೀಕರಣ: ಜಾಗತಿಕ ಸ್ಪರ್ಧಾತ್ಮಕತೆಯ ಒಂದು ನೋಟ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿದ್ಯಾರ್ಥಿಗಳು ಕೇವಲ ಪದವೀಧರರಾಗದೇ, ಜಾಗತಿಕ ಅನುಭವ, ಆತ್ಮವಿಶ್ವಾಸ ಮತ್ತು ವಿಶಾಲ ವೃತ್ತಿ ಅವಕಾಶಗಳೊಂದಿಗೆ ಜಾಗತಿಕ ನಾಗರೀಕರಾಗಿ ಹೊರಹೊಮ್ಮುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಅಭಿಪ್ರಾಯಪಟ್ಟರು.ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಏರ್ಪಡಿಸಿದ್ದ ಉನ್ನತ ಶಿಕ್ಷಣದ ಅಂತರ ರಾಷ್ಟ್ರೀಕರಣ: ಜಾಗತಿಕ ಸ್ಪರ್ಧಾತ್ಮಕತೆಯ ಒಂದು ನೋಟ ಕುರಿತ ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣ ಎಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಜಾಗತಿಕ ದೃಷ್ಟಿಕೋನ ಅಳವಡಿಸುವುದು. ಪಠ್ಯಕ್ರಮ, ಬೋಧನೆ, ಸಂಶೋಧನೆ, ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವುದು. ವಿದ್ಯಾರ್ಥಿ ಮತ್ತು ಅಧ್ಯಾಪಕರ ನಡುವಿನ ಬೌದ್ಧಿಕ ವಿನಿಮಯದ ಜೊತೆಗೆ ಶಿಕ್ಷಣ ಸಂಸ್ಥೆಗಳ ನಡುವಿನ ಸಂಶೋಧನಾ ವಿನಿಮಯಗಳು ಮುಖ್ಯವಾಗುತ್ತವೆ. ಇದು ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸುವುದೇ ಅಲ್ಲ, ಜಗತ್ತನ್ನೇ ನಮ್ಮ ತರಗತಿಯೊಳಗೆ ತರುವುದಾಗಿದೆ ಎಂದು ಹೇಳಿದರು.
ಇಂಗ್ಲೆಂಡ್‌ನ ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಅಂಗೇಶ್ ಅನುಪಮ್ ಮಾತನಾಡಿ, ಕೌಶಲ್ಯಗಳು ಭವಿಷ್ಯದ ಕರೆನ್ಸಿಯಾಗಿವೆ. ಯುವಜನಶಕ್ತಿ ಮತ್ತು ತಾಂತ್ರಿಕ ಪ್ರತಿಭೆ ಭಾರತ ಬಹುದೊಡ್ಡ ಬಲವಾಗಿದ್ದು, ಸರಿಯಾದ ನೈತಿಕತೆಯೊಂದಿಗೆ ಬಳಸಿದರೆ ಮಾನವ ಕಲ್ಯಾಣಕ್ಕೆ ಮಹತ್ತರ ಕೊಡುಗೆ ನೀಡಬಹುದು ಎಂದರು.
ಇದು ದತ್ತಾಂಶ ಆಧಾರಿತ ಜಗತ್ತು. ನಾವು ಮಾಡುವ ಪ್ರತಿಯೊಂದು ಕ್ರಿಯೆಯೂ ದತ್ತಾಂಶವನ್ನು ಸೃಷ್ಟಿಸುತ್ತದೆ. ಈ ದತ್ತಾಂಶವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ದತ್ತಾಂಶ ವಿಜ್ಞಾನಕ್ಕಿದೆ. ಕೃತಕ ಬುದ್ಧಿಮತ್ತೆಗೆ ದತ್ತಾಂಶಗಳ ಆಧಾರದ ಮೇಲೆ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ವ್ಯಾಪಾರ, ಆಡಳಿತ ಮತ್ತು ಸಮಾಜದ ಸೇವೆಗಳ ಸುಧಾರಣೆಯಲ್ಲಿಯೂ ಪ್ರಭಾವ ಬೀರುತ್ತಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವ ಶಿಕ್ಷಣ ಕ್ರಮಗಳು ಅಗತ್ಯವಾಗಿವೆ. ವೈಯಕ್ತಿಕ ಕಲಿಕೆ, ಬುದ್ಧಿವಂತ ಮೌಲ್ಯಮಾಪನ ವ್ಯವಸ್ಥೆಗಳು ಉದ್ಯೋಗ ಅವಕಾಶಗಳನ್ನು ಒದಗಿಸುತ್ತವೆ. ಆದರೆ, ಸ್ಥಳೀಯ ಸಮಸ್ಯೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ, ಪರಿಹರಿಸುವ ಚಿಂತನೆ ಮತ್ತು ಸ್ಥಳೀಯ ಜ್ಞಾನ ಸಂರಕ್ಷಣೆಗೂ ಮನ್ನಣೆ ನೀಡುವ ಶಿಕ್ಷಣವು ಮುಖ್ಯವಾಗಿದೆ. ಇದಕ್ಕೆ ಉನ್ನತ ಶಿಕ್ಷಣದ ಅಂತರ ರಾಷ್ಟ್ರೀಕರಣ ಪೂರಕವಾಗಿದೆ ಎಂದು ಹೇಳಿದರು.
ಪಿಎಂಇ ನಿರ್ದೇಶಕ ಪ್ರೊ. ಡಿ.ಜಿ.ಪ್ರಕಾಶ್ ಸ್ವಾಗತಿಸಿದರೆ, ಪ್ರೊ. ಎಸ್.ಎನ್. ಪ್ರಮೋದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರೆ, ಡಾ. ಆರ್.ಕೆ. ಸತೀಶ ವಂದಿಸಿದರು.
-17ಕೆಡಿವಿಜಿ41:
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಉದ್ಘಾಟಿಸಿದರು.