- ಬನ್ನಿಕೋಡು ಗ್ರಾಪಂ ಬಳಿ ಗ್ರಾಮಸ್ಥರ ಆಕ್ರೋಶ । ತಹಸೀಲ್ದಾರ್ ಸ್ಥಳಕ್ಕೆ ಭೇಟಿ
ಕನ್ನಡಪ್ರಭ ವಾರ್ತೆ ಹರಿಹರ
ಶವಸಂಸ್ಕಾರಕ್ಕೆ ಸ್ಥಳ ಇಲ್ಲದ ಕಾರಣ ಗ್ರಾಮ ಪಂಚಾಯಿತಿ ಮುಂಭಾಗವೇ ಮಹಿಳೆಯ ಮೃತದೇಹವನ್ನು ತಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಬುಧವಾರ ನಡೆದಿದೆ.ಗ್ರಾಮದಲ್ಲಿ 50 ವರ್ಷದಿಂದ ಕೂಲಿ ಕಾರ್ಮಿಕ, ಕುರುಬ ಸಮುದಾಯದ ಬಾಗಳಿ ಕೆಂಚಮ್ಮ ಕೋಂ ನೀಲಕಂಠಪ್ಪ ಹೆಸರಿನ ಮಹಿಳೆ ನಿಧನ ಹೊಂದಿದ್ದರು. ಆದರೆ ಕೆಂಚಮ್ಮ ಅವರ ಅಂತ್ಯಸಂಸ್ಕಾರ ಮಾಡಲು ರುದ್ರಭೂಮಿ ಕೊರತೆ ಇದೆ. ಇದರಿಂದಾಗಿ ಗ್ರಾಮಸ್ಥರು ಕೆಂಚಮ್ಮ ಅವರ ಮೃತದೇಹವನ್ನು ಬನ್ನಿಕೋಡು ಗ್ರಾಮ ಪಂಚಾಯಿತಿ ಆವರಣದಲ್ಲಿ ತಂದಿಟ್ಟು ರುದ್ರಭೂಮಿ ಸೌಲಭ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
1926ರಲ್ಲಿ ರುದ್ರಭೂಮಿಗೆಂದು 2 ಎಕರೆ 16 ಗುಂಟೆ ಜಾಗವನ್ನು ಸರ್ಕಾರ ನೀಡಿದೆ. ಈ ಸ್ಥಳವನ್ನ ಕೆಲವರು ಒತ್ತುವರಿ ಮಾಡಿದ್ದು, ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಿಲ್ಲ. ಆದ್ದರಿಂದ ಮೃತಳ ಕುಟುಂಬಸ್ಥರು ಹಾಗೂ ಗ್ರಾಮದ ಮುಖಂಡರು ಶವದೊಂದಿಗೆ ಪ್ರತಿಭಟನೆ ಹಾದಿ ತುಳಿದರು.ಸ್ಥಳಕ್ಕೆ ತಹಸೀಲ್ದಾರ್ ಗುರುಬಸವರಾಜ್ ಭೇಟಿ ನೀಡಿದರು. ರುದ್ರಭೂಮಿಗೆಂದು ನಿಗದಿಪಡಿಸಿದ ಸ್ಥಳವನ್ನು ಸರ್ವೆ ಮಾಡಿಸಿ, ಸ್ಥಳ ಗುರುತಿಸುವ ಭರವಸೆ ನೀಡಿದರು. ಪ್ರತಿಭಟನೆ ಹಿಂದಪಡೆಯಲು ಮನವಿ ಮಾಡಿದರು. ತಹಸೀಲ್ದಾರ್ ಭರವಸೆ ಮೇರೆಗೆ ಹಳ್ಳದ ದಂಡೆಯಲ್ಲಿ ಕೆಂಚಮ್ಮ ಅವರ ಶವಸಂಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.- - -
-17HRR01: ಶವಸಂಸ್ಕಾರಕ್ಕೆ ರುದ್ರಭೂಮಿ ಸೌಲಭ್ಯಕ್ಕೆ ಆಗ್ರಹಿಸಿ ಬನ್ನಿಕೋಡು ಗ್ರಾಮ ಪಂಚಾಯಿತಿ ಎದುರು ಮಹಿಳೆ ಶವದೊಂದಿಗೆ ಪ್ರತಿಭಟನೆ ನಡೆಸಿದರು.-17HRR01A: ರುದ್ರಭೂಮಿಗೆ ಆಗ್ರಹಿಸಿ ಶವದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಗುರುಬಸವರಾಜ್ ಆಗಮಿಸಿ ಸೂಕ್ತ ಕ್ರಮದ ಭರವಸೆಯಿತ್ತು ಪ್ರತಿಭಟನೆ ಕೈಬಿಡುವಂತೆ ಪ್ರತಿಭಟನಾಕಾರರ ಮನವೊಲಿಸಿದರು.