- 5ನೇ ಹೆರಿಗೆ ಬಾಣಂತಿ ಆರೋಗ್ಯ ವಿಚಾರಿಸಿದ ಅಧ್ಯಕ್ಷೆ । ರೇಷನ್ ಕಾರ್ಡ್‌ಗೆ ಬೇಡಿಕೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಮಹಿಳಾ ವಾರ್ಡ್‌ಗಳು, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳು, ಹೆರಿಗೆ ವಾರ್ಡ್ ಸೇರಿದಂತೆ ಇಡೀ ವ್ಯವಸ್ಥೆಗಳನ್ನು ಜಿಲ್ಲಾ ಮತ್ತು ತಾಲೂಕು ಅರೋಗ್ಯ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದರು.ಆಸ್ಪತ್ರೆಗೆ ಭೇಟಿ ನೀಡಿದ್ದ ಆಯೋಗದ ಅಧ್ಯಕ್ಷರು, ಹೆರಿಗೆ ವಾರ್ಡ್‌ಗೆ ತೆರಳಿದ್ದ ವೇಳೆ 5ನೇ ಹೆರಿಗೆಯಾಗಿ ಮಲಗಿದ್ದ ಬಾಣಂತಿ ಮಂಜುಳಾ ಅವರ ಮಗುವನ್ನು ಎತ್ತಿಕೊಂಡು, ಅವರ ಆರೋಗ್ಯ ವಿಚಾರಿಸಿದರು. ಮಗುವಿನ ತಾಯಿ ಮಾತನಾಡಿ, ತಾನು ಮಂಡರಗಿಯಿಂದ ಕೂಲಿ ಕೆಲಸಕ್ಕೆ ಹೊನ್ನಾಳಿಗೆ ಆಗಮಿಸಿ ಇಲ್ಲಿಯೇ ತಂಗಿದ್ದೇನೆ. ತಮಗೆ ರೇಷನ್ ಕಾರ್ಡ್ ಇಲ್ಲ. ಈ ಸೌಲಭ್ಯ ಕಲ್ಪಿಸಲು ಮನವಿ ಮಾಡಿದರು. ಆಗ ಸ್ಥಳದಲ್ಲೇ ಇದ್ದ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಅವರು ಅಧಿಕಾರಿಗಳಿಗೆ ಹೇಳಿ ರೇಷನ್ ಕಾರ್ಡ್ ದೊರಕಿಸುವ ಭರವಸೆ ನೀಡಿದರು.
ಹೆರಿಗೆ ವಾರ್ಡ್‌ನಲ್ಲಿ ಶೌಚಾಲಯ ಹಾಗೂ ಬಿಸಿನೀರಿನ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು. ಶಸ್ತ್ರಚಿಕಿತ್ಸೆ ಕೊಠಡಿ, ಐಸಿಒ ವಾರ್ಡ್ ಸೇರಿದಂತೆ ಎಲ್ಲ ವಾರ್ಡ್‌ಗಳ ಪರಿಶೀಲಿಸಿ ಸ್ವಚ್ಛತೆ ಕಾಪಾಡಲು ಸೂಚಿಸಿದರು. ಮಹಿಳೆಯರು ಮತ್ತು ಪುರುಷರಿಗೆ ಒಂದೇ ಕಡೆ ಚುಚ್ಚುಮದ್ದು ನೀಡುವ ವ್ಯವಸ್ಥೆ ಇದೆ. ಕೂಡಲೇ ಈ ಅವ್ಯವಸ್ಥೆ ಬದಲಾಯಿಸಿ ಪ್ರತ್ಯೇಕವಾಗಿ ಚುಚ್ಚುಮದ್ದು ನೀಡುವ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ತಾಲೂಕಿನ ಆಸ್ಪತ್ರೆಗಳ ಕುರಿತು ಮಾಹಿತಿ ನೀಡಿದರು. ಪಟ್ಟಣದ ಆಸ್ಪತ್ರೆಯಲ್ಲಿ ಪ್ರಸ್ತುತಿ 10 ಜನ, 3 ಜನ ತುರ್ತು ನಿಗಾ ಘಟಕ ಹಾಗೂ ಆಯುಷ್ ವಿಭಾಗದಲ್ಲಿ 2 ಜನ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಒಟ್ಟು 11 ಪಿ.ಎಚ್.ಸಿ.ಗಳು, ನ್ಯಾಮತಿಯಲ್ಲಿ 30 ಹಾಸಿಗೆ ಸಮುದಾಯ ಆರೋಗ್ಯ ಕೇಂದ್ರವಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಡಿ.ಎಚ್.ಒ. ಷಣ್ಮುಖಪ್ಪ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ರಾಘವನ್, ಜಿಲ್ಲಾ ರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ, ಉಪವಿಬಾಗಾಧಿಕಾರಿ ಎಚ್.ಬಿ. ಚನ್ನಪ್ಪ, ತಹಸೀಲ್ದಾರ್ ರಾಜೇಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಗಿರೀಶ್, ಎನ್.ಎಚ್. ಆಸ್ಪತ್ರೆ ಆಡಳಿತಾಧಿಕಾರಿ ಡಾ ಹನುಮಂತಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್, ಸಿಡಿಪಿಒ ಜ್ಯೋತಿ, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ, ಕುಮಾರ್ ಹಾಗೂ ಆಸ್ಪತ್ರೆ ವೈದ್ಯರ ತಂಡ, ಸಿಬ್ಬಂದಿ ಇದ್ದರು.- - -
(ಕೋಟ್) ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ, ಸ್ಕ್ಯಾನಿಂಗ್ ವ್ಯವಸ್ಥೆಗಳನ್ನು ಅಳವಡಿಸುವ ಅಗತ್ಯವಿದೆ. ಜೊತೆಗೆ ಹೊನ್ನಾಳಿ ಆಸ್ಪತ್ರೆಯಲ್ಲಿ ಪ್ರಸ್ತುತ ಒಬ್ಬ ಪುರುಷ ಪ್ರಸೂತಿ, ಸ್ತ್ರೀರೋಗ ತಜ್ಞ ವೈದ್ಯರಿದ್ದಾರೆ. ತಿಂಗಳಿಗೆ ಈ ಹಿಂದೆ ಕೇವಲ 6 ಹೆರಿಗೆ ಕೇಸ್ ಬರುತ್ತಿದ್ದವು, ಇತ್ತೀಚೆಗೆ 40ಕ್ಕೂ ಹೆಚ್ಚಿನ ಹೆರಿಗೆ ಪ್ರಕರಣಗಳು ದಾಖಲಾಗುತ್ತಿವೆ. ಇನ್ನೊಂದು ಮಹಿಳಾ ಪ್ರಸೂತಿ, ಸ್ತ್ರೀರೋಗ ತಜ್ಞವೈದ್ಯರ ಅಗತ್ಯವಿದೆ. ಕೂಡಲೇ ಈ ಬಗ್ಗೆ ಸರ್ಕಾರ ಹಾಗೂ ಇಲಾಖೆ ಗಮನಕ್ಕೆ ತರುತ್ತೇನೆ.- ಡಾ. ನಾಗಲಕ್ಷ್ಮೀ ಚೌಧರಿ, ಆಯೋಗ ಅಧ್ಯಕ್ಷೆ.
- - --17ಎಚ್.ಎಲ್.ಐ3:
ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ವೈದ್ಯ -ಸಿಬ್ಬಂದಿ ಜತೆ ವ್ಯವಸ್ಥೆಗಳ ಬಗ್ಗೆ ಚರ್ಚಿಸಿ, ಸಲಹೆ-ಸೂಚನೆ ನೀಡಿದರು.