ಹಾವೇರಿ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿ, ಸೇವಾ ಭದ್ರತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು. 9ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಜಿಲ್ಲೆಯ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗ್ರಾಪಂ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಂ. ಜೈನೇಖಾನ್ ಕರೆ ನೀಡಿದರು.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರು ಕಡಿಮೆ ಸಂಬಳಕೋಸ್ಕರ ದುಡಿಯುತ್ತಿದ್ದಾರೆ. ದಿನ ಕಳೆದಂತೆ ಅಗತ್ಯ ವಸ್ತುಗಳು ಬೆಲೆ ಏರಿಕೆಯಾಗುತ್ತಿದ್ದು, ಗ್ರಾಪಂಗಳಲ್ಲಿ ಕೆಲಸ ಮಾಡುವ ನೌಕರರ ಕುಟುಂಬಗಳು ಸಂಕಷ್ಟದಲ್ಲಿವೆ. ಸರ್ಕಾರಗಳು ನೌಕರರನ್ನು ಹಗಲಿರುಳು ದುಡಿಸಿಕೊಳ್ಳುತ್ತೇವೆಯೇ ಹೊರತು, ಕೆಲಸಕ್ಕೆ ತಕ್ಕಂತೆ ಕನಿಷ್ಠ ವೇತನ ಹಾಗೂ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಒಗ್ಗಟ್ಟಾಗಿ ಹೋರಾಟ ನಡೆಸಿದ ಪರಿಣಾಮ ಸರ್ಕಾರ ಕನಿಷ್ಠ ವೇತನವನ್ನು ಜಾರಿಗೆ ತಂದಿದೆ. ಆದರೆ ಮೇ.22ರಂದು ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದ್ದು, ಕೇವಲ ಕಾಗದದಲ್ಲಿ ಮಾತ್ರ ಇದೆಯೇ ಹೊರತು ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಆದ್ದರಿಂದ ಗ್ರಾಪಂ ನೌಕರರು ಕಾಲಕಾಲಕ್ಕೆ ಪರಿಷ್ಕೃತ ಕನಿಷ್ಠ ವೇತನ, ಸೇವಾಭದ್ರತೆ, 6 ಲಕ್ಷ ರು. ಇಡುಗಂಟು, ಪಿಂಚಣಿ ವ್ಯವಸ್ಥೆ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ಬೇಡಿಕೆಗಳನ್ನು ಇಟ್ಟುಕೊಂಡು ಜು. 9ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಗ್ರಾಪಂ ನೌಕರರು ಆಗಮಿಸಬೇಕು ಎಂದು ತಿಳಿಸಿದರು.ಹಾವೇರಿ ಜಿಲ್ಲಾ ಗ್ರಾಪಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಕೋಟಿ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಪಂ ಸ್ವಚ್ಛತಾಗಾರರು, ಬಿಲ್ ಕಲೆಕ್ಟರ್‌ಗಳು, ಕಂಪ್ಯೂಟರ್ ಆಪರೇಟರ್‌ಗಳು, ವಾಟರ್‌ಮೆನ್‌ಗಳು ಹೀಗೆ 1,600ಕ್ಕೂ ಹೆಚ್ಚು ನೌಕರರು ಇದ್ದೇವೆ. ನಮ್ಮ ಬೇಡಿಕೆಗಳು ಈಡೇರಬೇಕಾದರೆ ಸರ್ಕಾರದ ವಿರುದ್ದ ಹೋರಾಟ ಅನಿವಾರ್ಯವಾಗಿದೆ. ಗ್ರಾಪಂ ನೌಕರರ ಕೂಗನ್ನು ಸರ್ಕಾರಕ್ಕೆ ತಲುಪಿಸಬೇಕಾದರೆ ಎಲ್ಲ ನೌಕರರು ಜು.9ರ ಬೆಂಗಳೂರು ಚಲೋ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.