ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ

ತಾಲೂಕಿನ ಮಾಟರಂಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳಿಗಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಶೌಚಾಲಯ ಕಾಮಗಾರಿ ಅಪೂರ್ಣಗೊಂಡಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಹಿರೇಅರಳಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಮಾಟರಂಗಿ ಕಿರಿಯ ಪ್ರಾಥಮಿಕ ಶಾಲೆಯು ೧ರಿಂದ ೫ನೇ ತರಗತಿ ವರೆಗೆ ಇದ್ದು, ೫೧ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ೨೦೨೩-೨೪ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು ₹ ೪.೩೦ ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಕಾಮಗಾರಿ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಕಾಮಗಾರಿ ಹೊಣೆ ಹೊತ್ತವರು ಕೆಲಸ ಪೂರ್ಣಗೊಳಿಸದ ಕಾರಣ ಮಕ್ಕಳಿಗೆ ಸಮಸ್ಯೆಯಾಗಿದೆ.

ಸಣ್ಣ ಪುಟ್ಟ ಕಾಮಗಾರಿ ಬಾಕಿ: ಶೌಚಾಲಯ ಕಟ್ಟಡ ಪೂರ್ಣಗೊಂಡು ಪ್ಲಾಸ್ಟರ್ ಕೂಡ ಮುಗಿದು ತುಂಬಾ ದಿನಗಳು ಕಳೆದಿವೆ. ಕೇವಲ ಸಣ್ಣಪುಟ್ಟ ಕೆಲಸ ಬಾಕಿ ಉಳಿದುಕೊಂಡಿವೆ. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದವರಿಗೆ ತಾಪಂ, ಗ್ರಾಪಂ ಅಧಿಕಾರಿಗಳು ಹಲವಾರು ಬಾರಿ ಹೇಳಿದ್ದಾರೆ. ಆದರೂ ಕಾಮಗಾರಿ ಮುಗಿದಿಲ್ಲ. ಇದರಿಂದ ವಿದ್ಯಾರ್ಥಿಗಳು ಮೂತ್ರ ವಿಸರ್ಜನೆಗೆ ಹೊರಗಡೆ ತೆರಳುವಂತಾಗಿದೆ. ಕೂಡಲೇ ಸಂಬಂಧಿಸಿದವರು ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕೆಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ.

ಮಾಟರಂಗಿ ಶಾಲೆಯಲ್ಲಿ ಹೈಟೆಕ್ ಶೌಚಾಲಯ ಕೆಲಸ ಪೂರ್ಣಗೊಳಿಸುವಂತೆ ಕಾಮಗಾರಿ ಹೊಣೆ ಹೊತ್ತವರಿಗೆ ಹಲವಾರು ಬಾರಿ ತಿಳಿಸಲಾಗಿದೆ. ಕೆಲಸ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ೧೫ ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹಿರೇಅರಳಿಹಳ್ಳಿ ಪಿಡಿಒ ಬಸವರಾಜ ಯರಗೇರಿ ತಿಳಿಸಿದ್ದಾರೆ.


ಕಳೆದ ಎರಡ್ಮೂರು ವರ್ಷಗಳಿಂದ ಶೌಚಾಲಯ ಕಾಮಗಾರಿ ಅಪೂರ್ಣಗೊಂಡಿದೆ. ಇದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಮಾಟರಂಗಿಯ ಶರಣಬಸವ ಮೇಲಸಕ್ರಿ ತಿಳಿಸಿದ್ದಾರೆ.